ಹೊಸದಿಲ್ಲಿ: ಚಂದ್ರಯಾನ 2ರ ವಿಕ್ರಂ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡ್ ಆಗುವ ಬದಲು ಹಾರ್ಡ್ ಲ್ಯಾಂಡಿಂಗ್ ಆಗಿರುವುದೇ ಸಂಪರ್ಕ ಕಡಿತಗೊಳ್ಳಲು ಕಾರಣ.
ಲೋಕಸಭೆಯಲ್ಲಿ ಲಿಖಿತ ಪ್ರಶ್ನೆಯೊಂದಕ್ಕೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಉತ್ತರ ನೀಡಿದ್ದು, ಇಸ್ರೋದ ವಿಜ್ಞಾನಿಗಳು ನೀಡಿದ ಮಾಹಿತಿಯನ್ನು ವಿವರಿಸಿದ್ದಾರೆ.
ಸಾಫ್ಟ್ ಲ್ಯಾಂಡಿಂಗ್ನ ವೇಳೆ ನಿಗದಿಪಡಿಸಿದ್ದ ವೇಗದ ಅಂಕಿ ಅಂಶಗಳನ್ನು ವಿಕ್ರಂ ಲ್ಯಾಂಡರ್ ಪಾಲಿಸಲಿಲ್ಲ. ಹೀಗಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಂ ಲ್ಯಾಂಡರ್ ಹಾರ್ಡ್ ಲ್ಯಾಂಡಿಂಗ್ ಆಗಿರುವುದಾಗಿ ಲೋಕಸಭೆಗೆ ಜಿತೇಂದ್ರ ಸಿಂಗ್ ತಮ್ಮ ಲಿಖಿತ ಉತ್ತರ ನೀಡಿದ್ದಾರೆ.
ಸಾಫ್ಟ್ ಲ್ಯಾಂಡಿಂಗ್ ಪ್ರಕ್ರಿಯೆ ಅತ್ಯಂತ ಕ್ಲಿಷ್ಟಕರ. ಮೊದಲ ಹಂತದಲ್ಲಿ ಲ್ಯಾಂಡರ್ ನಿಗದಿಪಡಿಸಿದ ಅಂಕಿ ಅಂಶಗಳ ಪ್ರಕಾರವೇ ಕಾರ್ಯ ನಿರ್ವಹಿಸಿದೆ. ಚಂದ್ರನ ಮೇಲ್ಮೈನಿಂದ 30 ಕಿ.ಮೀ ಎತ್ತರದಿಂದ ಪ್ರತಿ ಸೆಕೆಂಡ್ಗೆ 1683 ಮೀಟರ್ ವೇಗದಲ್ಲಿ ಇಳಿಯಲು ಆರಂಭಿಸಿ, ವೇಗವನ್ನು ಕಡಿಮೆಗೊಳಿಸಿದೆ. 30 ಮೀಟರ್ ಎತ್ತರಕ್ಕೆ ತಲುಪಿದ ವೇಳೆ ಲ್ಯಾಂಡರ್ ಪ್ರತಿ ಸೆಕೆಂಡ್ಗೆ 146 ಮೀಟರ್ ವೇಗಕ್ಕೆ ಇಳಿದಿದೆ.
ಎರಡನೇ ಹಂತದ ಡಿಸೆಂಟ್ ಪ್ರಕ್ರಿಯೆ ವೇಳೆ ನಿಗದಿ ಪಡಿಸಿದ ವೇಗಕ್ಕಿಂತಲೂ ಕಡಿಮೆ ವೇಗದಲ್ಲಿ ಲ್ಯಾಂಡರ್ ಇಳಿಯಲು ಆರಂಭಿಸಿದೆ. ಈ ಅಂಶ ಚಂದ್ರನ ಮೇಲ್ಮೈನಿಂದ 500ಮೀಟರ್ ಎತ್ತರವಿರುವಾಗಲೇ ವಿಕ್ರಂ ಲ್ಯಾಂಡರ್ ಪಥ ಬದಲಿಸಲು ಕಾರಣವಾಗಿದೆ. ಹೀಗಾಗಿಯೇ ಹಾರ್ಡ್ ಲ್ಯಾಂಡಿಂಗ್ ಆಗಿರುವುದಾಗಿ ಲಿಖಿತ ಉತ್ತರದಲ್ಲಿ ಹೇಳಲಾಗಿದೆ.