ಇಂದು ಡಿಕೆಶಿಗೆ ನಿರ್ಣಾಯಕ ದಿನ: ಹೈಕೋರ್ಟ್​ನಲ್ಲಿ ಜಾಮೀನು ಅರ್ಜಿ ವಿಚಾರಣೆ

ಬೆಂಗಳೂರುಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ತಿಹಾರ್​​ ಜೈಲುಪಾಲಾಗಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್​​ಗೆ ಇಂದು ನಿರ್ಣಾಯಕ ದಿನವಾಗಿದೆ. ಡಿಕೆಶಿ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್​ನ ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟಾ ನೇತೃತ್ವದ ಏಕ ಸದಸ್ಯ ಪೀಠ ನಡೆಸಲಿದೆ. ಇಡಿ ವಿಶೇಷ ಕೋರ್ಟ್​​ನಲ್ಲಿ ಡಿಕೆಶಿ ನ್ಯಾಯಾಂಗ ಬಂಧನ ಅವಧಿ ಮುಗಿದ ಬಗ್ಗೆ ವಿಚಾರಣೆ ಹೈಕೋರ್ಟ್​ ಮಾಡಲಿದೆ. ಕಾಂಗ್ರೆಸ್​ ಟ್ರಬಲ್​​ ಶೂಟರ್​ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಾಡಲಿದ್ದಾರೆ. ಇಂದಿನ ಸಿಂಘ್ವಿ ವಾದ ಆಧರಿಸಿ ಡಿಕೆಶಿ ಜಾಮೀನು ಅರ್ಜಿ ಭವಿಷ್ಯ ನಿರ್ಧಾರವಾಗಲಿದೆ. ನ್ಯಾಯಾಂಗ ಬಂಧನ ಅವಧಿ ಮುಗಿಯುತ್ತದೋ, ಮುಂದುವರೆಯುತ್ತೋ ಎಂಬ ಬಗ್ಗೆ ಹೈಕೋರ್ಟ್​ ಅಂತಿಮ ತೀರ್ಪು ನೀಡಲಿದೆ.

ಕಾಂಗ್ರೆಸ್​ ಟ್ರಬಲ್​​ ಶೂಟರ್​​ ಜಾಮೀನು ಅರ್ಜಿ ವಿಚಾರಣೆ ನಿನ್ನೆ ಹೈಕೋರ್ಟ್​ನಲ್ಲಿ ನಡೆಯಿತು. ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟಾ ನೇತೃತ್ವದ ಏಕಸದಸ್ಯ ಪೀಠ ತೀರ್ಪು ನೀಡಿ ಇಂದಿಗೆ ಮುಂದೂಡಿದೆ. ಇಂದೇ ಇಡಿ ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ ಇರುವ ಹಿನ್ನೆಲೆಯಲ್ಲಿ ಮುಂದೂಡುವ ಬಗ್ಗೆ ನ್ಯಾಯಮೂರ್ತಿ ಸುರೇಶ್ ಕುಮಾರ್ ವಕೀಲರ ಅಭಿಪ್ರಾಯ ಕೇಳಿದ್ದರು. ಇಡಿ ಪರ ವಕೀಲರು ನ್ಯಾಯಾಲಯಕ್ಕೆ ತಮ್ಮ ತನಿಖೆಯ ಬಗ್ಗೆ ವರದಿ ಸಲ್ಲಿಸಿದ್ದರು. ಹಾಗಾಗಿ ಡಿಕೆಶಿ ವಿಚಾರಣೆಯನ್ನು ಹೈಕೋರ್ಟ್​ ಮುಂದೂಡಿತ್ತು.

ಈ ಹಿಂದೆಯೇ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ದಸರಾ ಹಬ್ಬದ ಕಾರಣ ಮುಂದೂಡಲಾಗಿತ್ತು. ಇಡಿ ವಿಶೇಷ ನ್ಯಾಯಾಲಯ ಜಾಮೀನು ರದ್ದು ಮಾಡಿದ್ದ ಆದೇಶ ಪ್ರಶ್ನಿಸಿ ಡಿ.ಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಹೈಕೋರ್ಟ್​ ಮತ್ತೆ ಕೈಗೆತ್ತಿಕೊಂಡಿತ್ತು. ತಿಹಾರ್​​ ಜೈಲಿನಲ್ಲಿರುವ ಡಿಕೆ ಶಿವಕುಮಾರ್ ಎಷ್ಟು ಜಾಮೀನು ಕೋರಿ ಅರ್ಜಿ ಸಲ್ಲಿಸಿದರೂ ನ್ಯಾಯಾಲಯ ತಿರಸ್ಕರಿಸುತ್ತಲೇ ಬಂದಿದೆ. ಸೆ. 4ರಿಂದಲೂ ಜಾರಿ ನಿರ್ದೇಶನಾಲಯದ ವಿಚಾರಣೆ ಎದುರಿಸುತ್ತಿರುವ ಡಿಕೆ ಶಿವಕುಮಾರ್ ಅವರನ್ನು ನ್ಯಾಯಾಂಗ ವಶಕ್ಕೆ ಒಳಪಡಿಸಲಾಗಿದೆ. ಅವರಿಗೆ ಜಾಮೀನು ಸಿಗುವವರೆಗೂ ಡಿಕೆಶಿ ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲೇ ಮುಂದುವರಿಯಬೇಕಿದೆ.

ಡಿಕೆಶಿ ಪ್ರಕರಣದಲ್ಲಿ ಈಗಾಗಲೇ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಸಂಸದ ಡಿ.ಕೆ.ಸುರೇಶ್, ಆಪ್ತ ಸುನೀಲ್ ಕುಮಾರ್ ಶರ್ಮಾ ಮತ್ತು ಪುತ್ರಿ ಐಶ್ವರ್ಯ ವಿಚಾರಣೆ ನಡೆಸಲಾಗಿದೆ. ಇನ್ನು ಮಾಜಿ ಶಾಸಕ ಕೆ.ಎನ್ ರಾಜಣ್ಣ ವಿಚಾರಣೆ ಮಾತ್ರ ಬಾಕಿ ಇದೆ. ಈ ಮಧ್ಯೆ ಡಿ.ಕೆ ಶಿವಕುಮಾರ್​​ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಆರು ವರ್ಷದ ಹಿಂದೆ ಸಲ್ಲಿಸಲಾಗಿದ್ದ ಪಿಎಎಲ್ ಕೋರ್ಟ್​ನಲ್ಲಿ ವಿಚಾರಣೆಗೆ ಬಂದಿತ್ತು. ಈ ಸಂಬಂಧ ವಿಚಾರಣೆ ನಡೆಸಿದ ರಾಮನಗರ ಕೋರ್ಟ್​​, ಈ ಕೇಸ್ ಕುರಿತಂತೆ ಮಾಹಿತಿ ನೀಡುವಂತೆ ಸರ್ಕಾರಕ್ಕೆ ಸೂಚಿಸಿದೆ. ನವೆಂಬರ್​​ 30ರೊಳಗೆ ಸರ್ಕಾರವೂ ಈ ಕೇಸ್​ ಸಂಬಂಧ ಕೋರ್ಟ್​ಗೆ ಬೇಕಾದ ಮಾಹಿತಿ ನೀಡಲಿದ್ದು, ಕಾಂಗ್ರೆಸ್​​ ಕಟ್ಟಾಳು ಹಳೆಯ ಪ್ರಕರಣಕ್ಕೂ ಮರು ಜೀವ ಬಂದತಾಗಿದೆ.
ತನ್ನ ತಾಯಿ, ಪತ್ನಿ ಸೇರಿ ಇತರರ ಹೆಸರಲ್ಲಿ ಡಿಕೆ ಶಿವಕುಮಾರ್ ಬೇನಾಮಿ ಆಸ್ತಿ ಮಾಡಿರುವುದು ಕಂಡು ಬಂದಿದ್ದರಿಂದ ಇಡಿ ಅಧಿಕಾರಿಗಳ ವಿಚಾರಣೆ ಮುಂದುವರಿದಿದೆ. ಇಡಿ ತನಿಖೆ ಮುಗಿದ ಬಳಿಕ ಸರ್ಕಾರ ಅಧಿಕೃತವಾಗಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆಯಿದೆ. ಈ ಹಿಂದೆ 2017ರ ಆಗಸ್ಟ್​ನಲ್ಲಿ ಐಟಿ ಅಧಿಕಾರಿಗಳು ಶಿವಕುಮಾರ್ ಮೇಲೆ ನಡೆಸಿದ ದಾಳಿ ವೇಳೆ ಸುಮಾರು 400 ಕೋಟಿ ರೂ.ಗೂ ಅಧಿಕ ಮೌಲ್ಯದ ಅಘೋಷಿತ ಆಸ್ತಿ ಪತ್ತೆಯಾಗಿತ್ತು. ಆ ಬಗ್ಗೆ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿದಾಗ ಹಲವರ ಹೆಸರಲ್ಲಿ ಆಸ್ತಿ ಮಾಡಿರುವುದು ಬೆಳಕಿಗೆ ಬಂದಿತ್ತು ಎನ್ನಲಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ