ಬಿಎಸ್​​ವೈಗೆ ಶಾಕಿಂಗ್​​ ಸುದ್ದಿ: ಬಿಜೆಪಿಗೆ ಕೈಕೊಟ್ಟು ಕಾಂಗ್ರೆಸ್​ನಲ್ಲೇ ಮುಂದುವರೆಯಲು ಕೆಲವು ಅನರ್ಹ ಶಾಸಕರ ನಿರ್ಧಾರ?

ಬೆಂಗಳೂರುಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣವಾಗಿದ್ದ ಕಾಂಗ್ರೆಸ್​​-ಜೆಡಿಎಸ್​​ ಅನರ್ಹ ಶಾಸಕರಿಂದ ತೆರವುಗೊಂಡ 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಕೇಂದ್ರ ಚುನಾವಣೆ ಆಯೋಗವೂ ಉಪಚುನಾವಣೆಗೆ ದಿನಾಂಕ ಕೂಡ ನಿಗದಿ ಮಾಡಿದೆ. ಇತ್ತ ಸುಪ್ರೀಂಕೋರ್ಟ್ನಲ್ಲಿ ಪ್ರಕರಣ ಇತ್ಯರ್ಥವಾದ ಕೂಡಲೇ ಅನರ್ಹ ಶಾಸಕರು ಬಿಜೆಪಿಯಿಂದಲೇ ಉಪಚುನಾವಣೆಯಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ಸಿಎಂ ಬಿ.ಎಸ್​​ ಯಡಿಯೂರಪ್ಪ ಭಾವಿಸಿದ್ದಾರೆ. ಮಧ್ಯೆ ಬಿಜೆಪಿಗೆ ಶಾಂಕಿಗ್​​ ಸುದ್ದಿ ಸಿಕ್ಕಿದೆ. ಕೆಲವು ಅನರ್ಹ ಶಾಸಕರು ಅನೀರಿಕ್ಷಿತ ಹೆಜ್ಜೆಯಿಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಹೌದು, ಅನರ್ಹ ಶಾಸಕರಿಗೆ ಬಿಜೆಪಿ ಟಿಕೆಟ್ ಬಹುತೇಕ ಖಾತ್ರಿಯಾಗಿದೆ. ಅಲ್ಲದೇ 15 ಕ್ಷೇತ್ರಗಳಲ್ಲಿಯೂ ತಮ್ಮನ್ನು ಗೆಲ್ಲಿಸಿಕೊಂಡು ಬರುವ ಭರವಸೆಯೂ ಬಿಜೆಪಿ ನೀಡಿದೆ. ಆದರೆ, 17 ಮಂದಿ ಕೆಲವು ಅನರ್ಹ ಶಾಸಕರು ಬಿಜೆಪಿ ಸೇರುವ ಬದಲು ಕಾಂಗ್ರೆಸ್ ಪಕ್ಷದಲ್ಲೇ ಮುಂದುವರೆಯಲು ತೀರ್ಮಾನಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಅನರ್ಹ ಶಾಸಕರು ಪಕ್ಷದ ಸಿದ್ದಾಂತ ಒಪ್ಪಿ ಬಂದರೇ ಸ್ವಾಗತ ಎಂದು ಈಗಾಗಲೇ ಸಿದ್ದರಾಮಯ್ಯ ಚಿಕ್ಕಮಗಳೂರಿನಲ್ಲಿ ಹೇಳಿದ್ದಾರೆ. ಈ ಹೇಳಿಕೆ ಬೆನ್ನಲ್ಲೇ ಈ ಸುದ್ದಿ ಹಬ್ಬಿದೆ. ಅಲ್ಲದೇ ಕೆಲವು ಅನರ್ಹ ಶಾಸಕರು ತಮ್ಮನ್ನು ಸಂರ್ಕಿಸಿರುವುದಾಗಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಮೈತ್ರಿ ಸರ್ಕಾರ ಪತನಗೊಳಿಸಿ ಬಿಎಸ್​ವೈ ನೇತೃತ್ವ ಬಿಜೆಪಿ ಸರ್ಕಾರ ರಚನೆಗೆ ಮೂಲ ಕಾರಣವಾಗಿರುವ ಅನರ್ಹ ಶಾಸಕರ ಪಾಳಯ ಹಿಂದೆಯಿಂದಲೂ ಗೊಂದಲದ ಗೂಡಾಗಿತ್ತು. ಇಷ್ಟು ದಿನವಾದರೂ ಅವರ ಹಣೆಬರಹ ಬದಲಾಗುವ ಲಕ್ಷಣಗಳು ಕಾಣುತ್ತಿಲ್ಲ. ಸುಪ್ರೀಂ ಕೋರ್ಟ್ ಕೂಡ ತ್ವರಿತ ವಿಚಾರಣೆಗೆ ನಿರಾಕರಿಸುತ್ತಿದೆ. ಬಿಜೆಪಿಯವರು ತಮಗೆ ಕೈಕೊಟ್ಟುಬಿಟ್ಟರೆಂಬ ಆತಂಕದಲ್ಲಿಯೂ ಅನರ್ಹರಿದ್ದಾರೆ. ಇದೇ ವೇಳೆ, ಯಡಿಯೂರಪ್ಪ ಅವರು ಅನರ್ಹರಿಗೆ ಎಲ್ಲಾ ರೀತಿಯ ನೆರವು ನೀಡುವ ಅಭಯ ನೀಡುತ್ತಿದ್ದಾರೆ. ಮುಖ್ಯಮಂತ್ರಿಗಳ ಈ ಭರವಸೆಯೂ ಅನರ್ಹರ ಗೊಂದಲವನ್ನು ಕಡಿಮೆ ಮಾಡಲು ವಿಫಲವಾಗಿದೆ.
ಸುಪ್ರೀಂ ಕೋರ್ಟ್ ಏನೇ ತೀರ್ಪು ನೀಡಿದರೂ ತಮ್ಮನ್ನು ನಾವು ಕೈಬಿಡಲ್ಲ. ನಿಮಗೆ ಕೊಟ್ಟ ಮಾತನ್ನು ನಾನು ತಪ್ಪಲಾರೆನು. ನಿಮ್ಮ ಮಕ್ಕಳೋ ಅಥವಾ ನಿಮ್ಮ ಕುಟುಂಬದ ಸದಸ್ಯರೋ ಅಥವಾ ನೀವು ಹೇಳಿದ ಯಾರನ್ನೇ ಆದರೂ ನಾವು ಮಂತ್ರಿ ಮಾಡಲು ಸಿದ್ಧರಿದ್ದೇವೆ. ಯಾರನ್ನು ಮಂತ್ರಿ ಮಾಡಬೇಕೆಂದು ಹೆಸರು ಕೊಡಿ ಸಾಕು. ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುತ್ತೇವೆ ಎಂದು ಅನರ್ಹ ಶಾಸಕರಿಗೆ ಯಡಿಯೂರಪ್ಪ ಭರ್ಜರಿ ಆಫರ್ ಕೊಟ್ಟಿದ್ದಾರೆ.
ಸಿಎಂ ಈ ಆಫರ್ ಬಳಿಕ ಅನರ್ಹ ಶಾಸಕರು ಚಿಂತಿತರಾಗಿದ್ದಾರೆ. ಒಂದು ವೇಳೆ, ತಾವು ಕುಟುಂಬ ಸದಸ್ಯರನ್ನೇ ಮಂತ್ರಿ ಮಾಡಿಸಿದರೆ ಮುಂದೆ ತಮ್ಮ ಗತಿ ಏನು ಎಂಬುದು ಇವರ ಪ್ರಮುಖ ಪ್ರಶ್ನೆಯಾಗಿದೆ. ಸುಪ್ರೀಂ ಕೋರ್ಟ್ ಒಂದು ವೇಳೆ ತಮ್ಮ ಅನರ್ಹತೆಯನ್ನು ಅಮಾನ್ಯಗೊಳಿಸಿದರೆ ತಾವು ಸರ್ಕಾರ ಪ್ರವೇಶಿಸುವುದು ಹೇಗೆ? ತಾವೇ ಕೂರಿಸಿದ ವ್ಯಕ್ತಿಗಳು ತಮಗಾಗಿ ಸೀಟು ಬಿಟ್ಟುಕೊಡುತ್ತಾರಾ? ಈಗಾಗಲೇ ಮಂತ್ರಿಗಳಾದವರನ್ನು ಇಳಿಸಲು ಹೈಕಮಾಂಡ್​ನವರು ಒಪ್ಪುತ್ತಾರಾ? ಎಂಬಿತ್ಯಾದಿ ಪ್ರಶ್ನೆಗಳು ಮತ್ತು ಅನುಮಾನಗಳು ಅನರ್ಹ ಶಾಸಕರನ್ನು ಕಾಡುತ್ತಿದೆ.

ಹೀಗಾಗಿ, ಬಿಎಸ್​ವೈ ಆಫರ್ ಬಗ್ಗೆ ನಿರ್ಧಾರ ಕೈಗೊಳ್ಳಲು ಅನರ್ಹ ಶಾಸಕರು ಸಮಯಾವಕಾ ಕೇಳುತ್ತಿದ್ಧಾರೆ. ತಮ್ಮ ಕುಟುಂಬ ಸದಸ್ಯರ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ತಿಳಿಸುತ್ತೇವೆ ಎಂದಿದ್ದಾರಂತೆ. ಈ ಮಧ್ಯೆ ಇದರಿಂದ ಕಂಗೆಟ್ಟ ಕೆಲವು ಅನರ್ಹ ಶಾಸಕರು ಕಾಂಗ್ರೆಸ್​ನಲ್ಲೇ ಮುಂದುವರೆಯಬೇಕೆಂದು ನಿರ್ಧಾರಿಸಿದ್ದಾರೆ ಎಂಬ ಸುದ್ದಿ ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ