ಬಿಬಿಎಂಪಿಯಿಂದ ನಕ್ಷೆ ಮಂಜೂರಾತಿಗೆ ಅಲೆಯುವ ತಾಪತ್ರಯವಿಲ್ಲ

ಬೆಂಗಳೂರು, ಜು.31- ಕೂಲಿ ನಾಲಿ ಮಾಡಿ ಸಂಪಾದಿಸಿದ ಹಣದಲ್ಲಿ ನಿವೇಶನ ಕೊಂಡು ಮನೆ ಕಟ್ಟುವವರಿಗೆ ಇನ್ನು ಮುಂದೆ ಬಿಬಿಎಂಪಿಯಿಂದ ನಕ್ಷೆ ಮಂಜೂರಾತಿಗೆ ಅಲೆಯುವ ತಾಪತ್ರಯ ಬರುವುದಿಲ್ಲ…

2400 ಸುತ್ತಳತೆಯ ನಿವೇಶನ ಹೊಂದಿರುವವರು ಬೈಲಾ ಪ್ರಕಾರ ನಕ್ಷೆ ಸಿದ್ಧಪಡಿಸಿಕೊಂಡು ಪ್ಲಾನ್‍ಅನ್ನು ಆನ್‍ಲೈನ್‍ನಲ್ಲಿ ನಮೂದಿಸಿದರೆ ಸಾಕು. ಬಿಬಿಎಂಪಿಯಿಂದ ಮಂಜೂರಾತಿ ಪಡೆಯುವ ಅಗತ್ಯವಿರುವುದಿಲ್ಲ.

ಆದರೆ, 40X60ಕ್ಕೂ ಮೇಲ್ಪಟ್ಟ ಬೃಹತ್ ಕಟ್ಟಡಗಳಿಗೆ ಬಿಬಿಎಂಪಿಯ ನಕ್ಷೆ ಮಂಜೂರಾತಿ ಕಡ್ಡಾಯವಿರುತ್ತದೆ. ಕೇಂದ್ರ ಸರ್ಕಾರ ಅಮೃತ್ ಯೋಜನೆಯಡಿ ಪಾರದರ್ಶಕವಾಗಿ ಮನೆ ಕಟ್ಟುವವರಿಗೆ ಈ ಕೊಡುಗೆ ನೀಡಿದೆ.

ನಂಬಿಕೆ ಮತ್ತು ಪರಿಶೀಲನೆ ಆಧಾರದ ಮೇಲೆ ಬಡವರು, ಮಧ್ಯಮ ವರ್ಗದವರು 2400ಕ್ಕಿಂತ ಕಡಿಮೆ ಸುತ್ತಳತೆಯಲ್ಲಿ ಇನ್ನು ಮುಂದೆ ನಿರಾಳವಾಗಿ ಮನೆ ಕಟ್ಟಿಕೊಳ್ಳಬಹುದಾಗಿದೆ.

ಈ ಮೊದಲು 300 ಚದರಡಿಗಿಂತ ಮೇಲ್ಪಟ್ಟ ಎಲ್ಲ ನಿವೇಶನಗಳಿಗೂ ನಕ್ಷೆ ಮಂಜೂರಾತಿ ಕಡ್ಡಾಯವಾಗಿತ್ತು.ಬಿಬಿಎಂಪಿ ಅಧಿಕಾರಿಗಳು ನಕ್ಷೆ ಮಂಜೂರಾತಿ ನೀಡಲು ಯಾವ್ಯಾವುದೋ ದಾಖಲೆ ತರುವಂತೆ ಹೇಳಿ ಹಣ ಕೇಳುತ್ತಿದ್ದರು. ಹಣ ಕೊಡಲು ನಿರಾಕರಿಸಿದರೆ ನಕ್ಷೆ ಕೊಡದೆ ಸತಾಯಿಸುತ್ತಿದ್ದರು. ಇದರಿಂದ ಸಾರ್ವಜನಿಕರು ಪರದಾಡುತ್ತಿದ್ದರು.

ವಾಸ್ತುಶಿಲ್ಪಿಗಳು ತಯಾರಿಸಿದ ನಕ್ಷೆಯನ್ನು ಆನ್‍ಲೈನ್‍ನಲ್ಲಿ ಸಲ್ಲಿಸಬೇಕು. ಒಂದು ವೇಳೆ ನಕ್ಷೆಗೆ ವಿರುದ್ಧವಾಗಿ ಮನೆ ಕಟ್ಟಿದರೆ ಮಾತ್ರ ಬಿಬಿಎಂಪಿ ಅಧಿಕಾರಿಗಳು ಬಂದು ಪರಿಶೀಲಿಸುತ್ತಾರೆ.

ಕೇಂದ್ರದ ಈ ಮಹತ್ವದ ಯೋಜನೆ ದೇಶದ ಎಲ್ಲ ಮಹಾನಗರಗಳಿಗೂ ಅನ್ವಯಿಸಲಿದ್ದು, ಬಿಬಿಎಂಪಿಗೂ ಅನ್ವಯವಾಗಲಿದೆ. ಕೇಂದ್ರದ ಈ ಯೋಜನೆ ರಾಜ್ಯ ಸರ್ಕಾರದ ಕೈ ಸೇರಿದ್ದು, ಆಗಸ್ಟ್ 15ರೊಳಗೆ ಇದನ್ನು ಜಾರಿಗೆ ತರಲಿದೆ ಎಂದು ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ