ಬೆಂಗಳೂರು, ಜು.31- ಕರುನಾಡಿನ ಕಾಫೀ ಬೆಳೆಯ ಹೆಸರು ವಾಸಿಯಾದ ಚಿಕ್ಕಮಗಳೂರು ಜಿಲ್ಲೆಯ ಚೇತನಹಳ್ಳಿಯ ಬಾಲಕ ಸಮಸ್ತರ ಪಾಲಿಗೆ ಸದಾ ಚೇತನ ವಾಗಿದ್ದ ಸಿದ್ಧಾರ್ಥ ಬಾಲ್ಯದಲ್ಲಿಯೇ ಈ ದೇಶದ ವೀರ ಯೋಧನಾಗ ಬೇಕೆಂಬ ಹೆಬ್ಬಯಕೆ ಹೊಂದಿದ ಒಬ್ಬ ಸ್ವಾಭಿಮಾನದ ದೊಡ್ಡ ಕನಸುಗಾರ. ಅತ್ಯಂತ ಸರಳ ಜೀವಿ, ಸ್ನೇಹ ಜೀವಿ, ಪರೋಪಕಾರಿ, ಮಾನವೀಯತೆ ಮೈಗೂಡಿಸಿಕೊಂಡ ಸದಾ ಚೇತನ ಚಿಲುಮೆ ಯಾಗಿದ್ದರು.
ಲಕ್ಷಾಂತರ ನಿರುದ್ಯೋಗಿಗಳ ಪಾಲಿಗೆ ಆಸರೆಯಾಗಿದ್ದರು. ಅನ್ನದಾತನಾಗಿ ಸಾವಿರಾರು ಜನರಿಗೆ ನೆರವು ನೀಡಿ ದಾರಿ ದೀಪವಾಗಿದ್ದರು. ಯಾರಿಗೂ ಎಂದೆಂದಿಗೂ ಕೆಟ್ಟದ್ದನ್ನು ಬಯಸದೆ ಯಾರಿಗೂ ಅನ್ಯಾಯ ಮಾಡದೆ, ಬಡಬಗ್ಗರ ಬದುಕಿಗೆ ನೆರವಾದವರು. ಸಾವಿರಾರು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸದಾ ಸಹಾಯ ಹಸ್ತ ನೀಡಿ ಕೋಟಿಗೊಬ್ಬ ಎಂಬಂತೆ ಬಾಳಿ ಬದುಕಿದವರು. ಸಿದ್ದಾರ್ಥ್ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಇನ್ನೂ ಹತ್ತಾರು ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಜನಾನುರಾಗಿಯಾಗಿದ್ದರು.
ಸಿದ್ಧಾರ್ಥ್ ಬದುಕಿನ ತಿರುವು ಎಲ್ಲಿಗೋ ಕೊಂಡೊಯ್ಯುತ್ತೆ ಯಾರೂ ಉಹಿಸಿರಲಿಲ್ಲ. ಮತ್ತೆಂದು ಬಾರದ ಲೋಕಕ್ಕೆ ತೆರಳಿದ್ದು ಅವರ ಕುಟುಂಬಕ್ಕೆ ತುಂಬಲಾಗದ ನಷ್ಟವಾಗಿದೆ. ಇಡೀ ಕುಟುಂಬ, ಹುಟ್ಟೂರು, ಜಿಲ್ಲೆ, ಆಶ್ರಯ ಪಡೆದ ಲಕ್ಷಾಂತರ ನೌಕರರ ಸಮೂಹ ದುಖಃದ ಮಡಿಲಿಗೆ ತಳ್ಳಿ ಮೌನವಾಗಿ ನಮ್ಮೆಲ್ಲರನ್ನು ಅಗಲಿದ್ದಾರೆ.
ಶೈಕ್ಷಣಿಕ ಕ್ಷೇತ್ರದಲ್ಲಿಯೂ ಸಹ ದಾಪುಗಾಲಿಟ್ಟು ಅದ್ಭುತ ಯಶಸ್ಸು ಸಾಧಿಸಿ ದೊಡ್ಡ ಕಾಫೀ ಉದ್ಯಮ ಹರಸಿದ್ದು ಒಂದು ವೈಶಿಷ್ಟ್ಯ. ವಿಶ್ವದಲ್ಲಿ ಹಲವು ನಗರಗಳಲ್ಲಿ ಕಾಫೀ ಡೇ ತೆರೆದು ಚಿಕ್ಕಮಗಳೂರು ಜಿಲ್ಲೆಯ ವೈಶಿಷ್ಟ್ಯವನ್ನು ಬೆಳಗಿಸಿದರು.
ಉದ್ಯಮದಲ್ಲಿ ಬಂದ ಲಾಭವನ್ನು ಸಮಾಜ ಸೇವೆಗೆ ಬಳಸಿಕೊಂಡು ಅಭಿವೃದ್ಧಿಯ ಹರಿಕಾರರಾದರು.
ಸಿದ್ದಾರ್ಥ್ ನಿನ್ನೆ ರಾತ್ರಿ ಒಮ್ಮೆಲೇ ಕಣ್ಮರೆಯಾಗಿರುವುದು ಅವರ ಕುಟುಂಬದವರಿಗೆ ತುಂಬಲಾರದ ನಷ್ಟ. ಇದ್ದು ಸಮಸ್ಯೆ ಎದುರಿಸಬೇಕಿತ್ತು.ಮನಸ್ಸಿನ ಆಲೋಚನೆಯ ನಿರ್ಧಾರಕ್ಕೆ ಬಿಡಬಾರದಿತ್ತು. ಆತ್ಮಹತ್ಯೆಯ ನಿರ್ಧಾರ ಸಮಂಜಸವಲ್ಲ.
ಸಿದ್ಧಾರ್ಥ್ ಒಬ್ಬ ದೊಡ್ಡ ಶ್ರೀಮಂತ ಉದ್ಯಮಿ. 70-80 ಸಾವಿರ ಕುಟುಂಬಗಳಿಗೆ ಆಶ್ರಯ ನೀಡಿದ ಪುಣ್ಯಾತ್ಮ.ಖಂಡಿತಾ ಸರಿಯಾಗಿ ಮತ್ತೆ ಮತ್ತೆ ಯೋಚಿಸಬೇಕಿತ್ತು. ದೊಡ್ಡ ದೊಡ್ಡ ಉದ್ಯಮಗಳಲ್ಲಿ ಕೆಲವೊಮ್ಮೆ ನಷ್ಟ ಸಂಭವಿಸುತ್ತದೆ. ಅದನ್ನು ದಿಟ್ಟತನದಿಂದ ಧೈರ್ಯದಿಂದ ಎದುರಿಸಬೇಕಿತ್ತು.
ನಿರಾಶೆಯಿಂದ ಆತ್ಮಹತ್ಯೆ ಕಡೆ ಮುಖ ಮಾಡುವುದು ಹೇಡಿತನ.
ಆತ್ಮಹತ್ಯೆಯ ಕಠಿಣ ನಿರ್ಧಾರಕ್ಕೆ ಬರುವ ಮುನ್ನ ತುಂಬು ಕುಟುಂಬದ ತಂದೆ-ತಾಯಿ, ಮಡದಿ ಮುದ್ದಾದ ಬೆಳೆದ ಜವಾಬ್ದಾರಿ ಹೊರುವ ಮಕ್ಕಳನ್ನು ನೆನಪಿಸಿ ಕೊಳ್ಳಬೇಕಿತ್ತು.
ಬಂಧು-ಬಳಗದ ಜೊತೆಗೆ ಇಷ್ಟು ವರ್ಷಗಳ ಕಾಲ ಹಗಲಿರುಳು ಹತ್ತಾರು ಉದ್ಯಮಗಳಲ್ಲಿ ಕಷ್ಟಪಟ್ಟು ದುಡಿದು ಸಾಧನೆಯ ಮೆಟ್ಟಿಲೇರಿ ಒಮ್ಮೆಲೇ ಆದ ನಷ್ಟಕ್ಕೆ ಹೆದರಿ ಸಾವನ್ನಪ್ಪಿಕೊಳ್ಳ ಬಯಸಿದ್ದು ಬಹು ದೊಡ್ಡ ದುರಂತ ಅಲ್ಲವೇ.
ನಮ್ಮ ಯುವ ಮೇರು ಸಾಧಕ ಸಿದ್ದಾರ್ಥ್ ಮಾನಸಿಕ ಖಿನ್ನತೆಗೆ ಜಾರುವ ಮುನ್ನ ತುಂಬು ಕುಟುಂಬದ ಅಕ್ಕರೆಯ ತಾಯಿ, ಬಾಳ ಸಂಗಾತಿ – ಆತ್ಮೀಯ ಗೆಳೆಯರ ಬಳಿ ಮನಸ್ಸಿನ ತುಮಲ – ಒಯ್ದಾಟವನ್ನು ಒಂದಿಷ್ಟು ಹಂಚಿಕೊಳ್ಳಬಹುದಿತ್ತು.
ಉದ್ಯಮ ಕ್ಷೇತ್ರದಲ್ಲಿ ಸಾಧನೆಯ ಮೈಲಿಗಲ್ಲಾಗಿ ಉತ್ತುಂಗಕ್ಕೆ ಏರಿ ಯುವಕರ ಪಾಲಿಗೆ ಮಾದರಿಯಾಗಿ ಅತಿ ದೊಡ್ಡ ವ್ಯವಹಾರದಲ್ಲಿ ಅನಿರೀಕ್ಷಿತ ಸೋಲಿನ ಸುಂಟರಗಾಳಿ ಬೀಸಿದ ರಭಸಕ್ಕೆ ತತ್ತರಿಸಿ, ಆತ್ಮಹತ್ಯೆ ಯನ್ನೇ ಕೈ ಬೀಸಿ ತನ್ನೆಡೆಗೆ ಸೆಳೆದು ಕೊಂಡು ಅಪ್ಪಿಕೊಂಡಿದ್ದು ಎಷ್ಟರ ಮಟ್ಟಿಗೆ ಸರಿ?
ಇಂದಿನ ಯುವಕರನ್ನು ದುಡಿಮೆಯ ಕಿಚ್ಚು ಹಚ್ಚಿದ ಸಿದ್ದಾರ್ಥ್ ತನಗೆ ತಾನೇ ಸಾವಿನೆಡೆಗೆ ನಡೆದದ್ದೇ ಒಂದು ವಿಸ್ಮಯ!
ಓ ದೇವರೇ ಬಹು ದೊಡ್ಡ ಸಾಧಕ ಸಿದ್ದಾರ್ಥನ ದುಡುಕಿನ ಆತ್ಮಹತ್ಯೆಯ ಸಾವು ಯಾವ ನ್ಯಾಯ?