ಟಿಪ್ಪು ಜಯಂತಿ ರದ್ದು-ವಿಧಾನಸಭೆಯಲ್ಲಿ ಗದ್ದಲ ಎಬ್ಬಿಸಿದ ವಿರೋಧ ಪಕ್ಷಗಳು

ಬೆಂಗಳೂರು, ಜು.31- ಟಿಪ್ಪು ಜಯಂತಿಯನ್ನು ರದ್ದು ಮಾಡಿಸಿರುವುದನ್ನು ವಿರೋಧಿಸಿ ಪ್ರತಿಪಕ್ಷಗಳು ಇಂದು ವಿಧಾನಸಭೆಯಲ್ಲಿ ಗದ್ದಲ ಎಬ್ಬಿಸಿದ್ದರಿಂದ ಕೋಲಾಹಲದ ವಾತಾವರಣ ನಿರ್ಮಾಣವಾಯಿತು.

ಸಭಾಧ್ಯಕ್ಷರ ಆಯ್ಕೆಗಾಗಿ ಕರೆಯಲಾಗಿದ್ದ ಒಂದು ದಿನದ ಅಧಿವೇಶನದ ಮುಕ್ತಾಯ ಹಂತದಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರು ವಿಷಯ ಪ್ರಸ್ತಾಪಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸದನದಲ್ಲಿ ಹಾಜರರಿಬೇಕು. ನಾವು ಪ್ರಮುಖ ವಿಷಯಗಳನ್ನು ಚರ್ಚಿಸಬೇಕಿದೆ.

ಒಂದೇ ದಿನಕ್ಕೆ ಅಧಿವೇಶನ ಕರೆದು ಮುಂದೂಡಿದರೆ ಹೇಗೆ, ಸರ್ಕಾರದಲ್ಲಿ ಬೇರೆ ಸಚಿವರುಗಳು ಇಲ್ಲ. ಮುಖ್ಯಮಂತ್ರಿ ಮಾತ್ರ ಇದ್ದಾರೆ. ಈಗ ಅವರು ಕುಳಿತುಕೊಳ್ಳದೆ ಹೊರಗಡೆ ಹೋದರೆ ನಾವು ಯಾರ ಬಳಿ ಮಾತನಾಡಬೇಕು ಎಂದು ಪ್ರಶ್ನಿಸಿದರು.

ಆಗ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಕಾಫಿ ಡೇ ಮಾಲೀಕ ಸಿದ್ದಾರ್ಥ್ ಅವರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ತೆರಳಿದ್ದಾರೆ.

ಕಲಾಪಕ್ಕಾಗಿ ನಿಗದಿಪಡಿಸಿದ ಕಾರ್ಯಸೂಚಿಗಳೆಲ್ಲವೂ ಮುಗಿದಿದೆ. ನೀವು ಪ್ರಸ್ತಾಪಿಸಿರುವ ವಿಷಯ ನನ್ನ ಮುಂದಿಲ್ಲ ಎಂದು ಸಮಾಧಾನಪಡಿಸಿದರು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸಿದ್ದರಾಮಯ್ಯನವರು ಎಲ್ಲಾ ವಿಷಯಗಳನ್ನು ನೋಟಿಸ್ ಕೊಟ್ಟೆ ಚರ್ಚೆ ಮಾಡುವುದಿಲ್ಲ. ಸರ್ಕಾರ ಏಕಾಏಕಿ ಟಿಪ್ಪು ಜಯಂತಿಯನ್ನು ರದ್ದು ಮಾಡಿದೆ. ಅದನ್ನು ನಾವು ಎಲ್ಲಿ ಪ್ರಸ್ತಾಪ ಮಾಡಬೇಕು ಎಂದು ಅವರು ಪ್ರಶ್ನಿಸಿದಾಗ, ಕಾಂಗ್ರೆಸ್-ಜೆಡಿಎಸ್ ಶಾಸಕರು ಎದ್ದು ನಿಂತು ಬೆಂಬಲ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಯಾಗಿ ಆಡಳಿತ ಪಕ್ಷದ ಶಾಸಕರು ಕೂಡ ಗದ್ದಲ ಎಬ್ಬಿಸಿದ್ದರಿಂದ ಕೋಲಾಹಲದ ವಾತಾವರಣ ನಿರ್ಮಾಣವಾಯಿತು. ಅಲ್ಲಿಗೆ ಸಭಾಧ್ಯಕ್ಷರು ಅಧಿವೇಶನವನ್ನು ಮುಂದೂಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ