ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕಿದ್ದ ಸಿದ್ಧಾರ್ಥ್

ಬೆಂಗಳೂರು, ಜು.31- ಪ್ರತಿಷ್ಠಿತ ಉದ್ಯಮಿ ವಿ.ಜಿ.ಸಿದ್ಧಾರ್ಥ್ ಈ ದೇಶದ ಕನಸುಗಾರ , ಮಲೆನಾಡಿಗರ ಬದುಕನ್ನು ಕಟ್ಟಿಕೊಟ್ಟ ಛಲಗಾರ, ಕಾಫಿಬೆಳೆಯಿಂದ ನಷ್ಟ ಅನುಭವಿಸಿ ಬೇಸತ್ತು ಪರ್ಯಾಯ ಮಾರ್ಗಗಳನ್ನು ಹುಡುಕಿಕೊಳ್ಳುವ ದಾರಿಯಲ್ಲಿದ್ದ ಕಾಫಿ ಬೆಳೆಗಾರರಿಗೆ ಅದರಲ್ಲಿಯೇ ಕುಬೇರರನ್ನಾಗಿಸಿದ ಸಾಕಾರಮೂರ್ತಿ, ಮೂರು ದಶಕಗಳ ಕಾಲ ಕಾಫಿ ಸಾಮ್ರಾಜ್ಯವನ್ನು ವಿಶ್ವಕ್ಕೆ ವಿಸ್ತರಿಸಿದ ವಿಶ್ವ ಸಂಪತ್ತುದಾರರ ಪಟ್ಟಿಯಲ್ಲಿ ತಾನೂ ಸ್ಥಾನ ಪಡೆದಿದ್ದರೂ, ಸಾಮಾನ್ಯರಲ್ಲಿ ಸಾಮಾನ್ಯರಂತೆ ಸಿದ್ದಾರ್ಥ್ ಅವರು ಬದುಕಿದ್ದರು.

ಕೆಫೆ ಕಾಫಿ ಡೇ (ಸಿಸಿಡಿ) ಮೂಲಕ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಲಕ್ಷಾಂತರ ಜನರಿಗೆ ಆಸರೆಯಾಗಿದ್ದರು. ತಾನ್ಯಾರೇ, ತಾನೇನು ಎಂದು ಹೊರ ಜಗತ್ತಿಗೆ ಹೇಳಿಕೊಳ್ಳಲೇ ಇಲ್ಲ.

ಮಾಜಿ ಮುಖ್ಯಮಂತ್ರಿ, ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರ ಅಳಿಯ ಆಗಿದ್ದರೂ ಅವರ ಪ್ರಭಾವವನ್ನು ಎಂದೂ ಬಳಸಿಕೊಂಡವರಲ್ಲ. ಸ್ವ ಸಾಮಥ್ರ್ಯದ ಮೇಲೆ ನಂಬಿಕೆ ಇಟ್ಟು ಉದ್ಯಮದಲ್ಲಿ ಪ್ರಗತಿ ಸಾಧಿಸಿದವರು.ಪ್ರಚಾರದಿಂದ ಅದರಲ್ಲೂ ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡಿದ್ದವರು.

ಸದಾ ಉದ್ಯಮದ ಬಗ್ಗೆ, ಉದ್ಯೋಗಿಗಳ ಹಿತದ ಬಗ್ಗೆ ಚಿಂತಿಸುತ್ತಿದ್ದವರು. ಕಾಫಿ ಎಸ್ಟೇಟಿಗೆ ಕೇವಲ 100, 200ರೂ.ಗೆ ಕೆಲಸಕ್ಕೆ ಬರುತ್ತಿದ್ದವರ ಮಕ್ಕಳನ್ನು ಇಂಗ್ಲೀಷ್ ಶಾಲೆಗೆ ಸೇರಿಸಿ ಸಾವಿರಾರು, ಲಕ್ಷಾಂತರ ರೂ. ಸಂಬಳ ಬರುವಂತೆ ಮಾಡಿ ಆತ್ಮತೃಪ್ತಿ ಹೊಂದಿದ್ದ ಸಿದ್ದಾರ್ಥ್ ಅವರ ದುರಂತ ಅಂತ್ಯ ಇಡೀ ಕಾಫಿ ಲೋಕವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.

ಮಲೆನಾಡಿನೆಲ್ಲೆಡೆ ಸೂತಕದ ಛಾಯೆ ಆವರಿಸಿದೆ. ಉದ್ಯಮಿಗಳ ಲೋಕದಲ್ಲಿ ಕಳವಳವನ್ನು ಸೃಷ್ಟಿಸಿದೆ. ಮಲೆನಾಡಿನ ಮೂಲೆಯ ಕನ್ನಡಿಗನೊಬ್ಬ ಕಂಡ ಕನಸು, ಅದನ್ನು ಸಾಕಾರಗೊಳಿಸಿದ ರೀತಿ ಅಸಾಧಾರಣವಾದುದ್ದು. ತಾನುಕಂಡ ಕನಸಿನ ಉದ್ಯಮದಲ್ಲಿ ಹಂತ ಹಂತವಾಗಿ ಬೆಳೆದು ಸಾವಿರಾರು ಮಂದಿಗೆ, ಯುವಕ-ಯುವತಿಯರಿಗೆ ಉದ್ಯೋಗ ನೀಡಿದವರು.

ಕಾಫಿ ತೋಟ, ಕಾಫಿ ಕ್ಯೂರಿಂಗ್ ವಕ್ರ್ಸ್‍ನಲ್ಲಿ ಕೆಲಸ ಮಾಡುವ ಕಾರ್ಮಿಕರು ಮತ್ತು ಅವರ ಮಕ್ಕಳಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ದೊರಕಿಸಿಕೊಡಬೇಕೆಂಬ ಮಹತ್ವಾಕಾಂಕ್ಷೆಯಿಂದ ಆಸ್ಪತ್ರೆ ಸ್ಥಾಪನೆಗೆ ಮುಂದಾಗಿದ್ದರು. ಇದಲ್ಲದೆ ಅಂಬರ್‍ವ್ಯಾಲಿ ಶಾಲೆ, ಎಬಿಸಿ, ಟಿಸಿಎಲ್ ಕಂಪೆನಿ, ಮೈಂಡ್ ಟ್ರೀ ಹಲವಾರು ಸಂಸ್ಥೆಗಳನ್ನು ಹುಟ್ಟುಹಾಕಿದ್ದ ಸಿದ್ದಾರ್ಥ್ ಅವರು ಕಾಫಿಗೆ ಮುಕ್ತ ಮಾರುಕಟ್ಟೆ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮುಕ್ತ ಮಾರುಕಟ್ಟೆ ದೊರಕಿದ್ದರಿಂದ ಕಾಫಿ ಬೆಳೆಗಾರರಿಗೆ ಸಾಕಷ್ಟು ಅನುಕೂಲವಾಯಿತು. ಇದರಲ್ಲಿ ಸಿದ್ದಾರ್ಥ್ ಅವರ ಪಾತ್ರವು ಕೂಡ ಇತ್ತು.

ತಾವು ಮಾಡಿದ ಯಾವ ಸಾಧನೆಯನ್ನೂ ಎಲ್ಲೂ, ಯಾರೊಂದಿಗೂ ಅವರು ಹೇಳಿಕೊಳ್ಳುತ್ತಿರಲಿಲ್ಲ. ಯಾವುದೇ ವೇದಿಕೆ ಕೂಡ ಹಂಚಿಕೊಂಡವರಲ್ಲ. ಸಾಕಷ್ಟು ಕಾರ್ಯಕ್ರಮಗಳಿಗೆ ಆರ್ಥಿಕ ನೆರವು ನೀಡಿ ಆ ಕಾರ್ಯಕ್ರಮಕ್ಕೆ ಒತ್ತಾಯದಿಂದ ಬಂದರೂ ಎಲ್ಲೊ ಒಂದು ಕಡೆ ನಿಂತು ಸಾಮಾನ್ಯರಂತೆ ನೋಡಿ ಹಿಂದಿರುಗುತ್ತಿದ್ದರು. ಇದು ಅವರ ವಿಶೇಷ ಗುಣವಾಗಿತ್ತು ಎಂದು ಮಲೆನಾಡಿಗರ ಮನದಾಳದ ಮಾತು.

ಎಲ್ಲರೊಂದಿಗೂ ಬೆರತು, ಎಲ್ಲರನ್ನೂ ಅಪ್ಪಿಕೊಳ್ಳುವ, ಒಪ್ಪಿಕೊಳ್ಳುವ ಸೌಮ್ಯ ಮೃದು ಸ್ವಭಾವದ ಮೆದು ಮಾತಿನ ಉದ್ಯಮ ಲೋಕದ ದಿಗ್ಗಜ ಸಿದ್ದಾರ್ಥ್ ಅವರ ಸಾವಿನ ನೋವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಅವರ ಸಾವಿಗೆ ಅನುಮಾನ ಪಡುವವರಿಗಿಂತ ಅನುಕಂಪ ಪಡುವವರೇ ಹೆಚ್ಚಾಗಿದ್ದಾರೆ.

ತಾವು ಮಾಡಿದ ಸಾಲದ ಹತ್ತರಷ್ಟು ಆಸ್ತಿ ಇದ್ದು, ತಾವು ಕಂಡ ಕನಸುಗಳನ್ನು ಈಡೇರಿಸುವಲ್ಲಿ ವಿಫಲವಾಗಿದ್ದೇನೆ ಎಂಬ ಅಳಕು ಅವರನ್ನು ಕಾಡಿರಬೇಕು. ಸ್ವಾಭಿಮಾನಕ್ಕೆ ಅಂಜಿದ ಸಿದ್ದಾರ್ಥ್ ಅವರು ಈ ನಿರ್ಧಾರ ಕೈಗೊಂಡಿರಬಹುದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ