ಡಾ.ರಾಜ್‍ಕುಮಾರ್ ಅವರ ಬಿಡುಗಡೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಿದ್ಧಾರ್ಥ್

ಬೆಂಗಳೂರು,ಜು.31- ಕಾಡುಗಳ್ಳ ವೀರಪ್ಪನ್‍ನಿಂದ ಅಪಹರಣಕ್ಕೊಳಗಾಗಿದ್ದ ವರನಟ ಡಾ.ರಾಜ್‍ಕುಮಾರ್ ಅವರ ಬಿಡುಗಡೆಯಲ್ಲಿ ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ್ ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಲಾಗಿದೆ.

ವರ ನಟ ಡಾ.ರಾಜ್‍ಕುಮಾರ್ ಅವರು 19 ವರ್ಷಗಳ ಹಿಂದೆ ಗಾಜನೂರಿನಿಂದ ಅಪಹರಣಕ್ಕೀಡಾಗಿದ್ದ ಬಳಿಕ ರಾಜ್ ಕುಟುಂಬಸ್ಥರೊಂದಿಗೆ ಹಾಗೂ ಇತರರೊಂದಿಗೆ ಸಿದ್ದಾರ್ಥ್ ಸಭೆ ನಡೆಸಿ ಮಾತುಕತೆ ನಡೆಸಿದ್ದರು.

ರಾಜ್ ಬಿಡುಗಡೆ ಕುರಿತು ತಮಿಳುನಾಡು ಸರ್ಕಾರದ ಸಹಾಯ ಪಡೆದಿದ್ದರು. ಅಂದು ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಅವರು ಆದಿಕೇಶವಲು ಜೊತೆ ಚೆನ್ನೈಗೆ ಹೋಗಲು ಹೆಲಿಕಾಪ್ಟರ್ ವ್ಯವಸ್ಥೆ ಮಾಡಿಸಿದ್ದರು.

ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಬಳಸಿಕೊಂಡು ರಾಜ್‍ಕುಮಾರ್ ಅವರ ಬಿಡುಗಡೆಗೊಳಿಸಲು ಸಿದ್ದಾರ್ಥ್ ನೇತೃತ್ವದಲ್ಲೇ ಪ್ರಯತ್ನಗಳು ನಡೆದಿದ್ದವು.
ಬಳಿಕ ವೀರಪ್ಪನ್ ಸಂಪರ್ಕದಲ್ಲಿದ್ದ ತಮಿಳುನಾಡಿನ ಧನು, ನೆಡುಮಾರನ್ ಹಾಗೂ ಕೊಳತ್ತೂರು ಮಣಿಯನ್ನು ಸಂಪರ್ಕಿಸಿ ಕೊನೆಗೂ ರಾಜ್‍ಕುಮಾರ್ ಅವರನ್ನು ಬಿಡುಗಡೆ ಮಾಡುವಲ್ಲಿ ಸಿದ್ದಾರ್ಥ್ ಯಶಸ್ವಿಯಾಗಿದ್ದರು ಎಂದು ಹೇಳಲಾಗಿದೆ.

ನರಹಂತಕ ಹಾಗೂ ಕಾಡುಗಳ್ಳ ವೀರಪ್ಪನ್‍ನಿಂದ ಡಾ.ರಾಜ್‍ಕುಮಾರ್ ಅವರನ್ನು ಬಿಡುಗಡೆಗೊಳಿಸುವ ಪ್ರಯತ್ನದ ಹಿಂದೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರ ಪರಿಶ್ರಮವೂ ಇದೆ.

ದುರ್ದೈವಶಾತ್ ಇಂದು ಸಿದ್ಧಾರ್ಥ್ ಮಂಗಳೂರಿನ ನೇತ್ರಾವತಿ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸೋಮವಾರ ರಾತ್ರಿಯಿಂದ ಸಿದ್ಧಾರ್ಥ್ ಕಾಣೆಯಾಗಿದ್ದರು. ಆ ಬಳಿಕ ಅವರ ಪತ್ತೆಗಾಗಿ ಸಾಕಷ್ಟು ಹುಡುಕಾಟ ನಡೆಸಲಾಗಿತ್ತು.

ಆದರೆ ಇಂದು ಬೆಳಗ್ಗೆ ಸಿದ್ಧಾರ್ಥ್‍ರ ಮೃತದೇಹ ಮಂಗಳೂರು- ಉಳ್ಳಾಲ ನಡುವೆ ಇರುವ ನೇತ್ರಾವತಿ ನದಿ ಸಮೀಪದ ಹೊಯಿಗೆ ಬಜಾರ್ ಎಂಬ ಪ್ರದೇಶದಲ್ಲಿ ದೊರಕಿದೆ.

ಇಂದು ಬೆಳಗ್ಗೆ 6.30ರ ಸುಮಾರಿಗೆ ಸ್ಥಳೀಯ ಮೀನುಗಾರರು ಮೀನು ಹಿಡಿಯಲು ಹೋದಾಗ ನದಿಯಲ್ಲಿ ತೇಲಾಡುತ್ತಿದ್ದ ಶವವನ್ನು ಕಂಡು ಅನುಮಾನದಿಂದ ದೋಣಿ ಬದಿಯಲ್ಲಿ ಹಿಡಿದುಕೊಂಡು ದಡ ತಲುಪಿಸಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ