ನೂತನ ಸ್ಪೀಕರ್ ಆಗಿ ವಿಶ್ವೇಶ್ವರ ಹೆಗಡೆ ಕಾಗೇರಿ

ಬೆಂಗಳೂರು,ಜು.31- ವಿಧಾನಸಭೆಯ ನೂತನ ಸ್ಪೀಕರ್ ಆಗಿ ಬಿಜೆಪಿ ಹಿರಿಯ ಮುಖಂಡ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಇಂದು ಅವಿರೋಧವಾಗಿ ಆಯ್ಕೆಯಾದರು.

ಬೆಳಗ್ಗೆ ವಿಧಾನಸಭೆಯ ಕಲಾಪ ಆರಂಭವಾಗುತ್ತಿದ್ದಂತೆ ಸ್ಪೀಕರ್ ಸ್ಥಾನದಲ್ಲಿದ್ದ ಉಪ ಸಭಾಧ್ಯಕ್ಷ ಕೃಷ್ಣಾರೆಡ್ಡಿ ಅವರು ಚುನಾವಣಾ ಪ್ರಸ್ತಾವನೆಯನ್ನು ಕೈಗೆತ್ತಿಕೊಂಡರು.

ಉಪಾಧ್ಯಕ್ಷರ ಸೂಚನೆ ಮೇರೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಸಭಾಧ್ಯಕ್ಷರ ಪ್ರಸ್ತಾವನೆಯನ್ನು ಮಂಡಿಸಿದರು.ಬಿಜೆಪಿಯ ಹಿರಿಯ ಶಾಸಕ ಬಸವರಾಜ ಬೊಮ್ಮಾಯಿ, ಅರವಿಂದ ಲಿಂಬಾವಳಿ, ಈಶ್ವರಪ್ಪ , ಗೋವಿಂದ ಕಾರಜೋಳ ಅವರುಗಳು ಅನುಮೋದಿಸಿದರು.

ಚುನಾವಣೆಯ ಪ್ರಸ್ತಾವವನ್ನು ಉಪಾಧ್ಯಕ್ಷರು ಮತಕ್ಕೆ ಹಾಕಿದ ದನಿಮತಕ್ಕೆ ಆಡಳಿತ ಪಕ್ಷದ ಶಾಸಕರು ಹೌದು ಎಂದು ಪ್ರತಿಕ್ರಿಯಿಸಿ ಬೆಂಬಲ ವ್ಯಕ್ತಪಡಿಸಿದರು.

ಯಾವುದೇ ವಿರೋಧ ವ್ಯಕ್ತವಾಗದ ಹಿನ್ನೆಲೆಯಲ್ಲಿ ಸರ್ವಾನುಮತದಿಂದ ಪ್ರಸ್ತಾವ ಅಂಗೀಕಾರವಾಯಿತು. ಕಾಗೇರಿ ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಸರ್ವಾನುಮತದ ಆಯ್ಕೆಯಾಗಿದೆ.ಪ್ರತಿಪಕ್ಷಗಳು ಕೂಡ ನೂತನ ಸ್ಪೀಕರ್ ಅವರ ಆಯ್ಕೆಗೆ ಸಹಕರಿಸಿದೆ.

ಸದನದಲ್ಲಿ ಕಾಗೇರಿ ಅವರ ಹೆಸರನ್ನು ಅಧಿಕೃತವಾಗಿ ಪ್ರಕಟಿಸುತ್ತಿದ್ದಂತೆ ಎಲ್ಲ ಸದಸ್ಯರು ಪಕ್ಷ ಬೇಧ ಮರೆತು ಮೇಜು ಕುಟ್ಟಿ ಸ್ವಾಗತಿಸಿದರು. ಬಳಿಕ ಶಿಷ್ಟಾಚಾರದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ , ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಗೇರಿ ಅವರನ್ನು ಸ್ಪೀಕರ್ ಕುರ್ಚಿಯತ್ತ ಕರೆದೊಯ್ದು ಕುಳ್ಳರಿಸಿದರು.

ಈ ವೇಳೆ ಕೃಷ್ಣಾರೆಡ್ಡಿ ಅವರು ನೂತನ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಅಧಿಕಾರ ಹಸ್ತಾಂತರಿಸಿ ಶುಭ ಕೋರಿದರು. ಬಳಿಕ ಯಡಿಯೂರಪ್ಪ, ಸಿದ್ದರಾಮಯ್ಯ, ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ಕಾಗೇರಿ ಅವರ ವ್ಯಕ್ತಿತ್ವವನ್ನು ಕೊಂಡಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ