ಸರಳ ಸಜ್ಜನಿಕೆಯ ವಿಶ್ವೇಶ್ವರ ಹೆಗಡೆ ಕಾಗೇರಿ-ಸ್ಪೀಕರ್ ಹುದ್ದೆಯ ಘನತೆಯನ್ನು ಎತ್ತಿ ಹಿಡಿಯುತ್ತಾರೆ-ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು,ಜು.31- ರಾಗದ್ವೇಷಗಳಿಲ್ಲದೆ ಕೆಲಸ ಮಾಡಿ, ಸರಳ ಸಜ್ಜನಿಕೆಯ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸ್ಪೀಕರ್ ಹುದ್ದೆಯ ಘನತೆಯನ್ನು ಎತ್ತಿ ಹಿಡಿಯುತ್ತಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನೂತನ ಸ್ಪೀಕರ್ ಆಯ್ಕೆ ಮಾಡಿದ ನಂತರ ಅಭಿನಂದನಾ ನುಡಿಗಳನ್ನಾಡಿದ ಅವರು, ಅತ್ಯಂತ ಅರ್ಹ ವ್ಯಕ್ತಿ ಸ್ಪೀಕರ್ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದು ಅತ್ಯಂತ ಸಂತೋಷದ ಸಂಗತಿ. ಸರ್ವಾನುಮತದ ಆಯ್ಕೆಗೆ ಸಹಕರಿಸಿದ ಪ್ರತಿಪಕ್ಷಗಳಾದ ಜೆಡಿಎಸ್-ಕಾಂಗ್ರೆಸ್‍ಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಎಬಿವಿಪಿಯಲ್ಲಿ ಸಕ್ರೀಯರಾಗಿ ಕೆಲಸ ಮಾಡಿ ಹಲವಾರು ಹೋರಾಟಗಳಲ್ಲಿ ತೊಡಗಿಸಿಕೊಂಡು ಉತ್ತರ ಕರ್ನಾಟಕದ ಪರಿಸರ ಚಳುವಳಿಯಲ್ಲಿ ಭಾಗವಹಿಸಿ ಜನರ ಪ್ರೀತಿ ಗಳಿಸಿ ಶಾಸಕರಾಗಿ ಆಯ್ಕೆಯಾದರು.

2008ರಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಶ್ರಮಿಸಿದರು. ರಾಜಕೀಯ ಜೀವನದಲ್ಲಿ ಕಪ್ಪುಚುಕ್ಕೆ ಇಲ್ಲದಂತೆ ಕೆಲಸ ಮಾಡಿದವರು. ವಿಧಾನಸಭೆಯಲ್ಲಿ ಆರೋಗ್ಯಕರ ಚರ್ಚೆಗೆ ಮತ್ತು ಶಾಸನ ರಚನೆಯ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಲು ನೂತನ ಸಭಾಧ್ಯಕ್ಷರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ ಎಂದು ಆಶಿಸಿದರು.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಸಭಾಧ್ಯಕ್ಷರು ಅವಿರೋಧವಾಗಿ ಆಯ್ಕೆಯಾಗುವುದು ಸಂಪ್ರದಾಯ. ಅದಕ್ಕಾಗಿ ಪ್ರತಿಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ಸಹಕಾರ ನೀಡಿದ್ದೇವೆ. ಇತ್ತೀಚಿನ ದಿನಗಳಲ್ಲಿ ಸಂಸದೀಯ ಪ್ರಜಾಪ್ರಭುತ್ವ ಮಹತ್ವ ಕಳೆದುಕೊಳ್ಳುತ್ತಿದೆ. ಸಂಸತ್‍ನಲ್ಲಿ ಒಳ್ಳೆಯ ಚರ್ಚೆಗಳಾಗುತ್ತಿಲ್ಲ.

ಇದೇ ಪರಂಪರೆ ಮುಂದುವರೆದರೆ ಜನರಿಗೆ ನಮ್ಮ ಮೇಲಷ್ಟೇ ಅಲ್ಲ ಪ್ರಜಾ ತಂತ್ರದ ಬಗ್ಗೆಯೂ ಅಪನಂಬಿಕೆ ಸೃಷ್ಟಿಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಆರು ಬಾರಿ ಶಾಸಕರಾಗಿ, ಸಚಿವರಾಗಿ ಕೆಲಸ ಮಾಡಿರುವ ಕಾಗೇರಿ ಅವರು ಎಬಿವಿಪಿಯಿಂದ ಬೆಳೆದು ಬಂದವರು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

ಸಭಾಧ್ಯಕ್ಷರಾದ ಮೇಲೆ ಎಬಿವಿಪಿ ಮತ್ತು ಆರ್‍ಎಸ್‍ಎಸ್ ಸೋಂಕಿನಿಂದ ಮುಕ್ತರಾಗಿರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವದಲ್ಲಿ ವಿಪಕ್ಷಗಳ ಪಾತ್ರ ಬಹಳ ಮುಖ್ಯ. ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ವಿಪಕ್ಷ ಸ್ಥಾನಗಳಲ್ಲಿ ಕುಳಿತಿವೆ. ಸರ್ಕಾರದ ತಪ್ಪು-ಒಪ್ಪುಗಳನ್ನು ತಿದ್ದಿ ಹೇಳುವ ಜವಾಬ್ದಾರಿಯನ್ನು ನಿಭಾಯಿಸುತ್ತವೆ. ವೈಕುಂಠ ಬಾಳಿಗ ಅವರ ಕಾಲದಿಂದ ಈವರೆಗೂ ವಿಧಾನಸಭಾಧ್ಯಕ್ಷರ ಒಳ್ಳೆಯ ನಡವಳಿಕೆಗಳನ್ನು ನೂತನ ಸಭಾಧ್ಯಕ್ಷರು ಅನುಸರಿಸಲಿ. ಸದನದ ಗೌರವ- ಸಂಪ್ರದಾಯಗಳನ್ನು ಎತ್ತರಕ್ಕೆ ತೆಗೆದುಕೊಂಡು ಹೋಗಲಿ ಎಂದು ಆಶಿಸಿದರು.

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ, ಪ್ರತಿ ವರ್ಷ 60 ದಿನಗಳ ವಿಧಾನಸಭೆ ಕಲಾಪ ನಡೆಸಬೇಕು ಎಂದು ನಾವು ಕಾನೂನು ಮಾಡಿಕೊಂಡಿದ್ದೇವೆ. ಆದರೆ ಅದನ್ನು ಪಾಲನೆ ಮಾಡುತ್ತಿಲ್ಲ. ನಿಮ್ಮ ಅವಧಿಯಲ್ಲಾದರೂ ಇದರ ಪಾಲನೆಯಾಗಲಿ ಎಂದು ಮನವಿ ಮಾಡಿದರು.

ಬಿಜೆಪಿ ಹಿರಿಯ ಶಾಸಕರಾದ ಜಗದೀಶ್ ಶೆಟ್ಟರ್ ಮಾತನಾಡಿ, ಮಾಜಿ ಸ್ಪೀಕರ್ ರಮೇಶ್‍ಕುಮಾರ್ ಅವರು ಮನುವಾದ ಮತ್ತು ಅಂಬೇಡ್ಕರ್ ವಾದದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಆರ್‍ಎಸ್‍ಎಸ್ ಮೂಲದಿಂದಲೇ ಬೆಳೆದುಬಂದವರು. ಹಿಂದೂ ದೇಶದಲ್ಲಿ ಯಾರನ್ನೂ ಪ್ರತ್ಯೇಕವಾಗಿ ನೋಡದೆ ಸಮಾನ ಸಮಾಜ ನಿರ್ಮಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾಂಗ್ರೆಸ್ ಶಾಸಕ ಆರ್.ವಿ.ದೇಶಪಾಂಡೆ ಮಾತನಾಡಿ, ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿ , ವಿರೋಧ ಪಕ್ಷದ ನಾಯಕರಾಗುವ ಮೂಲಕ ಜಿಲ್ಲೆಗೆ ಎರಡು ಪ್ರಮುಖ ಸ್ಥಾನಗಳು ದಕ್ಕಿದ್ದವು. ಇಂದು ನೀವು ಸ್ಪೀಕರ್ ಆಗುವ ಮೂಲಕ ಸಭಾಧ್ಯಕ್ಷ ಸ್ಥಾನ ಛಕ್ಕಿದಂತಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ