ಸಿಯೋಲ್, ಜು.31- ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ನಿಷೇಧಕ್ಕೂ ಜಗ್ಗದ ಹಠಮಾರಿ ಉತ್ತರ ಕೊರಿಯಾ ಇಂದು ಮುಂಜಾನೆ ಇನ್ನೆರಡು ಮಾರಕ ಕ್ಷಿಪಣಿಗಳ ಉಡಾವಣೆ ಪರೀಕ್ಷೆ ನಡೆಸಿ ಅಮೆರಿಕಾ ಮತ್ತು ದಕ್ಷಿಣ ಕೊರಿಯಾಗೆ ಎಚ್ಚರಿಕೆ ನೀಡಿದೆ.
ಕೊರಿಯಾ ದ್ವೀಪಕಲ್ಪದಲ್ಲಿ ದಕ್ಷಿಣ ಕೊರಿಯಾ ಮತ್ತು ಅಮೆರಿಕಾ ಉದ್ದೇಶಿತ ಜಂಟಿ ಸಮಾರಾಭ್ಯಸಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಉತ್ತರ ಕೊರಿಯಾ. ಈ ಪ್ರಕ್ರಿಯೆ ವಿರುದ್ಧ ಎಚ್ಚರಿಕೆ ನೀಡಲು ಇಂದು ಇನ್ನೆರಡು ಕ್ಷಿಪಣಿಗಳನ್ನು ಉಡಾಯಿಸಿದೆ.
ಕೊರಿಯಾ ಪರ್ಯಾಯ ದ್ವೀಪದ ಪೂರ್ವ ಕರಾವಳಿ ಓನ್ಸ್ಯಾನ್ ಪ್ರದೇಶದಲ್ಲಿಂದು ಬೆಳಕು ಹರಿಯುವ ಮುನ್ನವೇ ಉತ್ತರ ಕೊರಿಯಾ 250ಕಿ.ಮೀ ದೂರ ಚಿಮ್ಮಬಲ್ಲ ಎರಡು ಖಂಡಾಂತರ ಕ್ಷಿಪಣಿಗಳ ಉಡಾವಣೆ ನಡೆಸಿತು.
ಉತ್ತರ ಕೊರಿಯಾದ ಈ ಮೊಂಡುತನದಿಂದ ಆತಂಕದಿಂದ ದಕ್ಷಿಣ ಕೊರಿಯಾದ ಸೇನಾ ಮುಖ್ಯಸ್ಥರು ಇಂತಹ ಅಪಾಯಕಾರಿ ಕ್ಷಿಪಣಿ ಉಡಾವಣೆ ಪ್ರಯೋಗವನ್ನು ನಿಲ್ಲಿಸುವಂತೆ ಪಯೋಂಗ್ಯಾಂಗ್ನನ್ನು ಆಗ್ರಹಿಸಿದ್ದಾರೆ.
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ಜಾಂಗ್ವುನ್ ಮತ್ತು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಇತ್ತೀಚೆಗೆ ನಡೆದ ಅಣ್ವಸ್ತ್ರ ನಿಷೇಧ ಮಾತುಕತೆ ನಂತರ ಕೊರಿಯಾ ಪ್ರಯೋಗಿಸಿದ ಎರಡನೇ ಕ್ಷಿಪಣಿ ಉಡಾವಣೆ ಇದಾಗಿದೆ.
ಕಳೆದ ವಾರ ಕೂಡ ಉತ್ತರ ಕೊರಿಯಾ ಕ್ಷಿಪಣಿಯನ್ನು ಸಮುದ್ರಕ್ಕೆ ಉಡಾಯಿಸುವ ಮೂಲಕ ದಕ್ಷಿಣ ಕೊರಿಯಾ-ಅಮೆರಿಕಾ ನಡುವಣ ಉದ್ದೇಶಿತ ಜಂಟಿ ಯುದ್ಧ ತಾಲೀಮು ವಿರುದ್ಧ ಆಕ್ರೋಶ ವ್ಯಕ್ತಪಡಿಸಿತು.