ಬಾಂಬ್ ಮೇಲೆ ಹರಿದು ಬಸ್ ಸ್ಪೋಟ-ದುರ್ಘಟನೆಯಲ್ಲಿ 29 ಮಂದಿ ಸಾವು

ಹೆರಾಟ್, ಜು.31- ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕರ ಹಿಂಸಾಕೃತ್ಯಗಳಿಂದ ಸಾರ್ವಜನಿಕರು ಸಾವು-ನೋವಿಗೆ ತುತ್ತಾಗುತ್ತಿದ್ದಾರೆ ಎಂದು ವಿಶ್ವ ಸಂಸ್ಥೆ ಆತಂಕ ವ್ಯಕ್ತಪಡಿಸಿದ ಬೆನ್ನಲೇ ಮತ್ತೊಂದು ಭೀಕರ ಹತ್ಯಾಕಾಂಡ ನಡೆದಿದೆ.

ಪಶ್ಚಿಮ ಅಫ್ಘಾನಿಸ್ತಾನದ ಫಾರಾ ಪ್ರಾಂತ್ಯದಲ್ಲಿ ಇಂದು ಮುಂಜಾನೆ ತಾಲಿಬಾನ್ ಉಗ್ರರು ರಸ್ತೆ ಬದಿ ಅಡಗಿಸಿಟ್ಟಿದ್ದ ಬಾಂಬ್ ಸ್ಪೋಟಗೊಂಡು ಬಸ್ಸಿನಲ್ಲಿದ್ದ 29 ಮಂದಿ ಹತರಾಗಿ 10ಕ್ಕೂ ಹೆಚ್ಚು ತೀವ್ರ ಗಾಯಗೊಂಡಿದ್ದಾರೆ.

ಮೃತರಲ್ಲಿ ಮಹಿಳೆಯರು ಮತ್ತು ಮಕ್ಕಳೇ ಹೆಚ್ಚಾಗಿದ್ದಾರೆ.

ಕಂದಹಾರ-ಹೆರಾಟ್ ಹೆದ್ದಾರಿಯಲ್ಲಿ ಇಂದು ಬೆಳಿಗ್ಗೆ ಈ ನರಮೇಧ ನಡೆದಿದೆ ಎಂದು ಫಾರಾ ಪ್ರಾಂತ್ಯದ ವಕ್ತಾರ ಮುಜಿಬುಲ್ಲಾ ಮುಜಿಬ್ ತಿಳಿಸಿದ್ದಾರೆ.

ಮಹಿಳೆಯರು ಮತ್ತು ಮಕ್ಕಳನ್ನು ಒಳಗೊಂಡ ಸಾರ್ವಜನಿಕರ ಪ್ರಯಾಣಿಕರು ಬಸ್‍ನಲ್ಲಿ ತೆರಳುತ್ತಿದ್ದರು. ರಸ್ತೆ ಬದಿ ತಾಲಿಬಾನ್ ಬಂಡುಕೋರರು ಅಡಗಿಸಿಟ್ಟಿದ್ದ ಬಾಂಬ್ ಮೇಲೆ ಬಸ್ ಹರಿದು ಸ್ಫೋಟಗೊಂಡಿತು. ಈ ವಿಧ್ವಂಸಕ ಕೃತ್ಯದಲ್ಲಿ ಸಾವು-ನೋವು ಉಂಟಾಗಿದೆ. ಇವರೆಗೆ 29 ಮಂದಿ ಹತರಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಫಾರಾ ಪ್ರಾಂತ್ಯದ ಗರ್ವನರ್ ಅವರ ವಕ್ತಾರ ಫಾರೂಕ್ ಬರಾಕ್ ಝೈ ಹೇಳಿದ್ದಾರೆ.

ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಕೆಲವರ ಸ್ಥಿತಿ ಶೋಚನೀಯವಾಗಿದೆ.

ತಾಲಿಬಾನ್, ಅಲ್‍ಖೈದಾ ಮತ್ತು ಇಸ್ಲಾಮಿಕ್ ಸ್ಟೇಟ್ ಉಗ್ರರು ಸೇನಾಪಡೆಗಳು ಮತ್ತು ಸಾರ್ವಜನಿಕರನ್ನು ಗುರಿಯಾಗಿಟ್ಟುಕೊಂಡು ವಿಧ್ವಂಸಕಕೃತ್ಯಗಳನ್ನು ಎಸಗುತ್ತಿರುವ ಬಗ್ಗೆ ವಿಶ್ವ ಸಂಸ್ಥೆ ಭದ್ರತಾ ಮಂಡಳಿ ನಿನ್ನೆಯಷ್ಟೆ ತೀವ್ರ ಆತಂಕ ವ್ಯಕ್ತಪಡಿಸಿತ್ತು.

ಇದರ ಬೆನ್ನಲ್ಲೇ ಭಯೋತ್ಪಾದಕರ ಹಿಂಸಾಕೃತ್ಯಕ್ಕೆ ಸಾವು-ನೋವು ಮರುಕಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ