ಬೆಂಗಳೂರು,ಜು.30- ನಿಗೂಢವಾಗಿ ನಾಪತ್ತೆಯಾಗಿರುವ ಪ್ರತಿಷ್ಠಿತ ಉದ್ಯಮಿ, ಕಾಫಿ ಡೇ ಮಾಲೀಕ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಳಿಯ ವಿ.ಜಿ. ಸಿದ್ಧಾರ್ಥ್ ಅವರ ಶೋಧ ಕಾರ್ಯ ತೀವ್ರಗೊಂಡಿದೆ.
ರಾತ್ರಿ ಮಂಗಳೂರಿನ ಉಳ್ಳಾಲ ಸಮೀಪ ಕಾರಿನಿಂದ ಇಳಿದು ಹೋಗಿ ಕಾಣೆಯಾದ ಸಿದ್ಧಾರ್ಥ್ ಅವರ ಪತ್ತೆಗಾಗಿ ತೀವ್ರ ಶೋಧ ನಡೆದಿದ್ದು ಶಾಸಕ ಯು.ಟಿ.ಖಾದರ್, ಡಿಸಿಪಿಗಳಾದ ಹನುಮಂತರಾಯ, ಲಕ್ಷ್ಮೀ ಗಣೇಶ್ ನೇತೃತ್ವದಲ್ಲಿ ಸುಮಾರು 200 ಪೊಲೀಸರ ತಂಡದಿಂದ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆಯಾದರೂ ಬೆಳಗ್ಗೆಯಿಂದ ಮಳೆ ಬೀಳುತ್ತಿರುವುದರಿಂದ ಹುಡುಕಾಟಕ್ಕೆ ಅಡ್ಡಿಯಾಗುತ್ತಿದೆ.
ಶೋಧಕ್ಕಾಗಿ 25 ದೋಣಿ, ನುರಿತ ಈಜುಗಾರರು, ಮುಳುಗು ತಜ್ಞರು ಹಲವು ತಂಡಗಳಲ್ಲಿ ಸಿದ್ಧಾರ್ಥ್ ಅವರ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸೇನಾ ಹೆಲಿಕಾಫ್ಟರ್ ನೆರವು ಪಡೆಯಲು ಕೂಡ ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ.
ಎಬಿಸಿ ಕಂಪನಿಯ ಸ್ಥಾಪಕ, ಕಾಫಿ ಡೇ ಸೇರಿದಂತೆ ಹಲವು ಕಂಪನಿಗಳನ್ನು ಮುನ್ನಡೆಸುತ್ತಿದ್ದ ಸಿದ್ಧಾರ್ಥ್ ಅವರು ನಿನ್ನೆ ಬೆಂಗಳೂರಿನಿಂದ ಮಂಗಳೂರಿಗೆ ಕೆಎ 03 ಎನ್ಸಿ 2592 ನೋಂದಣಿಯ ಕಾರಿನಲ್ಲಿ ತೆರಳಿದ್ದು, ನೇತ್ರಾವತಿ ನದಿ ಸೇತುವೆ ಬಳಿ ಕಾರು ನಿಲ್ಲಿಸಿ ನಡೆದುಕೊಂಡು ಎಲ್ಲಿಗೆ ಹೋದರೆಂಬುದು ನಿಗೂಢವಾಗಿದ್ದು, ತನಿಖೆ ತೀವ್ರಗೊಂಡಿದೆ.
ಸಂಜೆಯಿಂದ ಶೋಧ ಕಾರ್ಯ ನಡೆಸಲಾಗುತ್ತಿದೆ. ಸ್ಥಳದಲ್ಲಿ ಜಿಲ್ಲಾಧಿಕಾರಿ, ಡಿಸಿಪಿ ಲಕ್ಷ್ಮೀಗಣೇಶ್ ಸೇರಿದಂತೆ ಹಲವಾರು ಉನ್ನತ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ. ಕೋಟೇಕಾರ್ ಬಳಿಯ ನದಿಯಲ್ಲಿ ದೋಣಿಗಳ ಮೂಲಕ ಹುಡುಕಾಟ ನಡೆಸಲಾಗಿದೆ. ಅಗ್ನಿಶಾಮಕ ದಳ, ಮುಳುಗು ತಜ್ಞರನ್ನು ಬಳಸಿ ನದಿಯಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.
ಕಾರು ಚಾಲಕನಿಗೆ ನೀನು ಇಲ್ಲೇ ಇರು ವಾಪಸ್ ಬರುತ್ತೇನೆ ಎಂದು ಹೇಳಿ ಮೊಬೈಲ್ನಲ್ಲಿ ಮಾತನಾಡುತ್ತ ತೆರಳಿದ ಅವರು ನಿಗೂಢವಾಗಿ ನಾಪತ್ತೆಯಾಗಿದ್ದು, ಅರ್ಧ ಗಂಟೆಯಾದರೂ ವಾಪಸ್ ಬರದಿದ್ದರಿಂದ ಚಾಲಕ ಅವರ ಮೊಬೈಲ್ಗೆ ಕರೆ ಮಾಡಿದ್ದಾನೆ. ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ.ಗಾಬರಿಯಾಗಿ ಅವರ ಮನೆಗೆ ವಿಷಯ ತಿಳಿಸಿರುವುದಾಗಿ ಹೇಳಿದ್ದಾನೆ.
ಸಿದ್ದಾರ್ಥ್ ಅವರು ಇಳಿದ ಸ್ಥಳ ಜಪ್ಪಿನಮೊಗರು ಪ್ರದೇಶ ನೇತ್ರಾವತಿ ತಟದಲ್ಲಿರುವುದು ಕುಟುಂಬಸ್ಥರ ಆತಂಕಕ್ಕೆ ಕಾರಣವಾಗಿದೆ.
ಕಾರು ಚಾಲಕನಿಂದ ಮಾಹಿತಿ ಪಡೆದ ಪೊಲೀಸರು ಸಿದ್ಧಾರ್ಥ್ ಅವರ ಪತ್ತೆಗಾಗಿ ತೀವ್ರ ಕಾರ್ಯಾಚರಣೆ ನಡೆಸಿದ್ದಾರೆ.