ಜಿಲ್ಲೆಗೆ ನೂತನ ಸಚಿವರು ಯಾರು ಎನ್ನುವ ಲೆಕ್ಕಾಚಾರ ಜಿಲ್ಲೆಯಾದ್ಯಂತ ವ್ಯಾಪಕ ಚರ್ಚೆ

ಚಿತ್ರದುರ್ಗ, ಜು.30- ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಇತ್ತ ಕೋಟೆ ನಾಡಿನ ಜನರಲ್ಲಿ ನಮ್ಮ ಜಿಲ್ಲೆಗೆ ನೂತನ ಸಚಿವರು ಯಾರು ಎನ್ನುವ ಲೆಕ್ಕಾಚಾರ ಜಿಲ್ಲೆಯಾದ್ಯಂತ ವ್ಯಾಪಕ ಚರ್ಚೆಯಾಗ ತೊಡಗಿದೆ.

ಮೊಳಕಾಲ್ಮೂರು ಶಾಸಕ ಶ್ರೀರಾಮುಲು , ಚಿತ್ರದುರ್ಗ ಕ್ಷೇತ್ರದ ತಿಪ್ಪಾರೆಡ್ಡಿ ಹಾಗೂ ಹಿರಿಯೂರು ಕ್ಷೇತ್ರದ ಪೂರ್ಣಿಮಾ ಶ್ರೀನಿವಾಸ್‍ಅವರುಗಳ ಹೆಸರುಗಳು ಪ್ರಮುಖವಾಗಿ ಕೇಳಿ ಬರುತ್ತಿದೆ.

ಚುನಾವಣಾ ಸಂದರ್ಭದಲ್ಲಿ ಜಿಲ್ಲೆಗೆ ರಾಷ್ಟ್ರೀಯ ಅಧ್ಯಕ್ಷ, ಹಾಗೂ ರಾಜ್ಯಾಧ್ಯಕ್ಷರು ಆಗಮಿಸಿ ಜಿಲ್ಲೆಯಲ್ಲಿ ಬಿಜೆಪಿಯ ಹೆಚ್ಚು ಸದಸ್ಯರನ್ನು ಆಯ್ಕೆ ಮಾಡಿದರೆ ಶ್ರೀರಾಮಲು ಅವರನ್ನು ಡಿಸಿಎಂ ಮಾಡಲಾಗುವುದು ಎಂದು ಹೇಳಿ ನಾಯಕ ಸಮುದಾಯದ ಮತಗಳನ್ನು ಸೆಳೆಯುವ ಪ್ರಯತ್ನ ಮಾಡಿದ್ದರು.

ಈಗ ಅದರಂತೆ, ಚಳ್ಳಕೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ರಘುಮೂರ್ತಿ ಅವರನ್ನು ಹೊರತುಪಡಿಸಿ ಜಿಲ್ಲೆಯಲ್ಲಿ ಐದು ಬಿಜೆಪಿ ಶಾಸಕರು ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.

ರಾಜ್ಯ ಹಾಗೂ ರಾಷ್ಟ್ರ ನಾಯಕರು ಚುನಾವಣಾ ಸಂದರ್ಭದಲ್ಲಿ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಶ್ರೀರಾಮುಲು ಅವರನ್ನು ಡಿಸಿಎಂ ಮಾಡಬೇಕೆಂದು ಸಾಮಾಜಿಕ ಜಾಲ ತಾಣಗಳಲ್ಲಿ ಕೂಗು ಕೇಳಿ ಬಂದಿದೆ.

ಅಲ್ಲದೆ ಮೊಳಕಾಲ್ಮೂರು ಕ್ಷೇತ್ರದ ಜನರು ಸಹ ಕಳೆದ ಹಲವಾರು ದಶಕಗಳಿಂದ ನಮ್ಮ ಕ್ಷೇತ್ರಕ್ಕೆ ಮಂತ್ರಿ ಸ್ಥಾನ ನೀಡಿಲ್ಲ. ಈ ಬಾರಿ ಶ್ರೀರಾಮುಲು ಅವರನ್ನು ಡಿಸಿಎಂ ಮಾಡಿ ಅತ್ಯಂತ ಹಿಂದುಳಿದ ಪ್ರದೇಶವಾಗಿರುವ ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಒತ್ತು ನೀಡಬೇಕು ಎಂಬುದು ಇಲ್ಲಿನ ಜನರ ಒತ್ತಾಯವಾಗಿದೆ.

ಇನ್ನು ಚಿತ್ರದುರ್ಗ ಕ್ಷೇತ್ರದ ಶಾಸಕ ಜಿ. ಎಚ್.ತಿಪ್ಪಾರೆಡ್ಡಿ ಸಹ, ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಪಕ್ಷ ನನಗೆ ಮಂತ್ರಿಸ್ಥಾನ ನೀಡಿದರೆ ಉತ್ತಮವಾಗಿ ನಿಭಾಯಿಸಿ ಕ್ಷೇತ್ರದ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎನ್ನುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಆರನೇ ಬಾರಿ ಗೆದ್ದು ಶಾಸಕರಾಗಿದ್ದಾರೆ.ಅವರು ಅನೇಕ ಬಾರಿ ಶಾಸಕರಾದ ಸಂದರ್ಭದಲ್ಲಿ ರಾಜ್ಯದಲ್ಲಿ ಸರ್ಕಾರ ಬೇರೆ ಇರುತ್ತಿತ್ತು. ಈಗ ಬಿಜೆಪಿ ಸರ್ಕಾರ ಇದೆ.ಜೊತೆಗೆ, ಈ ಬಾರಿ ನಗರಸಭೆಯಲ್ಲೂ ಬಿಜೆಪಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಹೀಗಾಗಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬುದು ಕೆಲವರ ವಾದವಾಗಿದೆ.

ಹಿರಿಯರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಪರವಾಗಿಯೂ ಸಹ ಜಿಲ್ಲೆಯ ಯಾದವ ಗುರುಪೀಠದ ಪೀಠಾಧ್ಯಕ್ಷರಾದ ಯಾದವಾನಂದ ಸ್ವಾಮಿ ಹಾಗೂ ಸಮಾಜದ ಮುಖಂಡರ ನಿಯೋಗ ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಬೇಡಿಕೆ ಸಲ್ಲಿಸಿದೆ.

ಯಾದವ ಸಮುದಾಯದಿಂದ ಪೂರ್ಣಿಮಾ ಶ್ರೀನಿವಾಸ್ ಒಬ್ಬರೇ ಶಾಸಕಿಯಾಗಿರುವುದರಿಂದ ಅವರಿಗೆ ಸಚಿವ ಸ್ಥಾನ ನೀಡಲೇಬೇಕು ಎಂಬುದು ಯಾದವ ಸಮುದಾಯದ ಜನರ ಒತ್ತಾಯವಾಗಿದೆ.

ಇನ್ನು ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಹಾಗೂ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಸಹ ಯಡಿಯೂರಪ್ಪನವರಿಗೆ ಆಪ್ತರಾಗಿದ್ದರೂ ಈಗಾಗಲೇ ಭೋವಿ ಸಮಾಜದ ಅರವಿಂದ ಲಿಂಬಾವಳಿ ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ಇಬ್ಬರಿಗೂ ಸಚಿವ ಸ್ಥಾನ ಡೌಟ್.

ಮೂಲಗಳ ಪ್ರಕಾರ ಶ್ರೀರಾಮುಲು ಅವರಿಗೆ ಡಿಸಿಎಂ ಸ್ಥಾನ ಲಭಿಸುವ ಬದಲು ಸಚಿವ ಸ್ಥಾನ ನೀಡಲು ತೀರ್ಮಾನಿಸಿದೆ ಎನ್ನಲಾಗಿದ್ದು , ಮುಂದಿನ ದಿನಗಳಲ್ಲಿ ಪೂರ್ಣಿಮಾ ಶ್ರೀನಿವಾಸ್ ಹಾಗೂ ತಿಪ್ಪಾರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿ ಅವರ ಮನವೊಲಿಸಲು ಬಿಜೆಪಿ ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ