ಬೆಂಗಳೂರು, ಜು.30- ನಗರದಲ್ಲಿ ಹೊಸ ಜಾಹಿರಾತು ಬೈಲಾ ಅನುಷ್ಠಾನಗೊಳ್ಳದಿರುವ ಹಿನ್ನೆಲೆಯಲ್ಲಿ ಎಲ್ಇಡಿ ಜಾಹಿರಾತು ಫಲಕ ಅಳವಡಿಸಿರುವವರ ವಿರುದ್ಧ ಎಫ್ಐಆರ್ ದಾಖಲಿಸಲಾಗುವುದು ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ಪಾಲಿಕೆ ಸಭೆಯಲ್ಲಿ ಎಚ್ಚರಿಸಿದರು.
ಸಭೆ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯ ಉಮೇಶ್ ಶೆಟ್ಟಿ ಅವರು 2006ರ ಜಾಹಿರಾತು ಬೈಲಾ ಅಮಾನತುಗೊಂಡಿದೆ. ಹೊಸ ಬೈಲಾಗೆ ನಾವು ಇನ್ನು ಸಭೆಯಲ್ಲಿ ನಿರ್ಣಯ ಕೈಗೊಳ್ಳಬೇಕಿದೆ. ಇಂತಹ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಹೊಸ ಜಾಹಿರಾತು ಬೈಲಾ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳಿ ಎಂದು ಪಾಲಿಕೆಗೆ ಪತ್ರ ಬರೆದಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್, ಮಾಜಿ ನಾಯಕ ಶಿವರಾಜ್, ರಿಜ್ವಾನ್, ಗುಣಶೇಖರ್ ಮತ್ತಿತರರು ಪ್ರತಿಕ್ರಿಯಿಸಿ, ಮಾಜಿ ಡಿಸಿಎಂ ಸಭೆಯಲ್ಲಿಲ್ಲ. ಅವರ ಹೆಸರನ್ನು ಪ್ರಸ್ತಾಪ ಮಾಡುವುದು ಸರಿಯಲ್ಲ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಅವರು, ಮಾಜಿ ಡಿಸಿಎಂ ಬರೆದ ಪತ್ರದ ಬಗ್ಗೆ ಪ್ರಸ್ತಾಪ ಮಾಡಿದ್ದೇವೆ. ಅವರ ಹೆಸರನ್ನು ಪ್ರಸ್ತಾಪಿಸಿಲ್ಲ ಎಂದರು. ಆಗ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.
ಪ್ರತಿಪಕ್ಷಗಳ ಸದಸ್ಯರಿಗೆ ಉತ್ತರ ಕೊಡುವಂತೆ ಮೇಯರ್ ಗಂಗಾಂಬಿಕೆ ಅವರು ಆಯುಕ್ತರಿಗೆ ಸೂಚಿಸಿದರು. ಆಗ ಮಂಜುನಾಥ್ ಪ್ರಸಾದ್ ಮಾಜಿ ಡಿಸಿಎಂ ಬರೆದ ಪತ್ರವನ್ನು ಓದಿದರು.
ಹೊಸ ಮಾರ್ಗಸೂಚಿ ಅಳವಡಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡುವುದು, ಪಾರದರ್ಶಕವಾಗಿ ಟೆಂಡರ್ ಆಹ್ವಾನಿಸುವಂತೆ ಪತ್ರ ಬರೆದಿದ್ದಾರೆ. ಇದರಲ್ಲಿ ತಪ್ಪೇನು ಇಲ್ಲ. ಹೊಸ ಜಾಹೀರಾತು ಬೈಲಾ ಮಾಡಲು ಚುನಾವಣಾ ನೀತಿ ಜಾರಿಯಲ್ಲಿತ್ತು. ಹಾಗಾಗಿ ನಾವು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆದ್ದರಿಂದ ಹಳೆ ಬೈಲಾ ಜಾರಿಯಲ್ಲಿದೆ. ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಸ್ಕೈವಾಕ್ ನಿರ್ಮಾಣ ಮಾಡಲು ಅವಕಾಶ ಇರುವುದರಿಂದ ಅವುಗಳನ್ನು ಮಾಡಿದ್ದೇವೆ ಎಂದು ಹೇಳಿದರು.
ಎಲ್ಇಡಿ ಜಾಹಿರಾತು ತೆರವುಗೊಳಿಸುವಂತೆ ಈಗಾಗಲೇ ಸೂಚನೆ ಕೊಟ್ಟಿದ್ದೇವೆ. ಇನ್ನು ಮುಂದೆ ಯಾರಾದರೂ ಎಲ್ಇಡಿ ಜಾಹಿರಾತು ಹಾಕಿದರೆ ಎಫ್ಐಆರ್ ದಾಖಲಿಸಲಾಗುವುದು ಎಂದು ಆಯುಕ್ತರು ಎಚ್ಚರಿಸಿದರು.
ದೆವ್ವ ಓಡಾಡಲು ಸ್ಕೈವಾಕಾ ?:
ಆಯುಕ್ತರ ಉತ್ತರಕ್ಕೂ ಮುನ್ನ ಮಾತನಾಡಿದ ಉಮೇಶ್ ಶೆಟ್ಟಿ, ನೀವು ನಗರದಲ್ಲಿ ಅವೈಜ್ಞಾನಿಕ ಸ್ಕೈ ವಾಕ್ ಹಾಕಿದ್ದೀರಾ? ಮೈಸೂರು ರಸ್ತೆಯ ಗೋಪಾಲನ್ ಮಾಲ್ ಎದುರು ಒಂದು ಸ್ಕೈವಾಕ್ ಹಾಕಿದ್ದೀರ. ಮೈಸೂರು ರಸ್ತೆಯ ಗೋಪಾಲನ್ ಮಾಲ್ ಎದುರು ಒಂದು ಸ್ಕೈವಾಕ್ ಹಾಕಿದ್ದಾರೆ? ಅದರಿಂದ ನೂರು ಮೀಟರ್ ಅಂತರದಲ್ಲಿ ಸ್ಮಶಾನದ ಎದುರು ಸ್ಕೈವಾಕ್ ಮಾಡಿದ್ದೀರಿ. ಅದರ ಅವಶ್ಯಕತೆ ಏನಿತ್ತು ?ರಾತ್ರಿ ವೇಳೆ ದೆವ್ವಗಳು ಓಡಾಡುವುದಕ್ಕೆ ಹಾಕಿದ್ದೀರಾ ಎಂದು ಖಾರವಾಗಿ ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಮಂಜುನಾಥ್ ಪ್ರಸಾದ್, ಮೈಸೂರು ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಅಪಘಾತದಲ್ಲಿ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದ ಹಾಗಾಗಿ ಅಲ್ಲಿ ಸ್ಕೈವಾಕ್ ನಿರ್ಮಾಣ ಮಾಡಲು ಅವಕಾಶ ಮಾಡಿಕೊಡಲಾಯಿತು ಎಂದು ಉತ್ತರಿಸಿದರು.