ತೀವ್ರಗೊಂಡ ಸಿದ್ಧಾರ್ಥ್ ಅವರ ಶೋಧ ಕಾರ್ಯ

ಬೆಂಗಳೂರು,ಜು.30- ನಿಗೂಢವಾಗಿ ನಾಪತ್ತೆಯಾಗಿರುವ ಪ್ರತಿಷ್ಠಿತ ಉದ್ಯಮಿ, ಕಾಫಿ ಡೇ ಮಾಲೀಕ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಳಿಯ ವಿ.ಜಿ. ಸಿದ್ಧಾರ್ಥ್ ಅವರ ಶೋಧ ಕಾರ್ಯ ತೀವ್ರಗೊಂಡಿದೆ.

ರಾತ್ರಿ ಮಂಗಳೂರಿನ ಉಳ್ಳಾಲ ಸಮೀಪ ಕಾರಿನಿಂದ ಇಳಿದು ಹೋಗಿ ಕಾಣೆಯಾದ ಸಿದ್ಧಾರ್ಥ್ ಅವರ ಪತ್ತೆಗಾಗಿ ತೀವ್ರ ಶೋಧ ನಡೆದಿದ್ದು ಶಾಸಕ ಯು.ಟಿ.ಖಾದರ್, ಡಿಸಿಪಿಗಳಾದ ಹನುಮಂತರಾಯ, ಲಕ್ಷ್ಮೀ ಗಣೇಶ್ ನೇತೃತ್ವದಲ್ಲಿ ಸುಮಾರು 200 ಪೊಲೀಸರ ತಂಡದಿಂದ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆಯಾದರೂ ಬೆಳಗ್ಗೆಯಿಂದ ಮಳೆ ಬೀಳುತ್ತಿರುವುದರಿಂದ ಹುಡುಕಾಟಕ್ಕೆ ಅಡ್ಡಿಯಾಗುತ್ತಿದೆ.

ಶೋಧಕ್ಕಾಗಿ 25 ದೋಣಿ, ನುರಿತ ಈಜುಗಾರರು, ಮುಳುಗು ತಜ್ಞರು ಹಲವು ತಂಡಗಳಲ್ಲಿ ಸಿದ್ಧಾರ್ಥ್ ಅವರ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸೇನಾ ಹೆಲಿಕಾಫ್ಟರ್ ನೆರವು ಪಡೆಯಲು ಕೂಡ ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ.

ಎಬಿಸಿ ಕಂಪನಿಯ ಸ್ಥಾಪಕ, ಕಾಫಿ ಡೇ ಸೇರಿದಂತೆ ಹಲವು ಕಂಪನಿಗಳನ್ನು ಮುನ್ನಡೆಸುತ್ತಿದ್ದ ಸಿದ್ಧಾರ್ಥ್ ಅವರು ನಿನ್ನೆ ಬೆಂಗಳೂರಿನಿಂದ ಮಂಗಳೂರಿಗೆ ಕೆಎ 03 ಎನ್‍ಸಿ 2592 ನೋಂದಣಿಯ ಕಾರಿನಲ್ಲಿ ತೆರಳಿದ್ದು, ನೇತ್ರಾವತಿ ನದಿ ಸೇತುವೆ ಬಳಿ ಕಾರು ನಿಲ್ಲಿಸಿ ನಡೆದುಕೊಂಡು ಎಲ್ಲಿಗೆ ಹೋದರೆಂಬುದು ನಿಗೂಢವಾಗಿದ್ದು, ತನಿಖೆ ತೀವ್ರಗೊಂಡಿದೆ.

ಸಂಜೆಯಿಂದ ಶೋಧ ಕಾರ್ಯ ನಡೆಸಲಾಗುತ್ತಿದೆ.ಸ್ಥಳದಲ್ಲಿ ಜಿಲ್ಲಾಧಿಕಾರಿ, ಡಿಸಿಪಿ ಲಕ್ಷ್ಮೀಗಣೇಶ್ ಸೇರಿದಂತೆ ಹಲವಾರು ಉನ್ನತ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ.ಕೋಟೇಕಾರ್ ಬಳಿಯ ನದಿಯಲ್ಲಿ ದೋಣಿಗಳ ಮೂಲಕ ಹುಡುಕಾಟ ನಡೆಸಲಾಗಿದೆ. ಅಗ್ನಿಶಾಮಕ ದಳ, ಮುಳುಗು ತಜ್ಞರನ್ನು ಬಳಸಿ ನದಿಯಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.

ಕಾರು ಚಾಲಕನಿಗೆ ನೀನು ಇಲ್ಲೇ ಇರು ವಾಪಸ್ ಬರುತ್ತೇನೆ ಎಂದು ಹೇಳಿ ಮೊಬೈಲ್‍ನಲ್ಲಿ ಮಾತನಾಡುತ್ತ ತೆರಳಿದ ಅವರು ನಿಗೂಢವಾಗಿ ನಾಪತ್ತೆಯಾಗಿದ್ದು, ಅರ್ಧ ಗಂಟೆಯಾದರೂ ವಾಪಸ್ ಬರದಿದ್ದರಿಂದ ಚಾಲಕ ಅವರ ಮೊಬೈಲ್‍ಗೆ ಕರೆ ಮಾಡಿದ್ದಾನೆ. ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ. ಗಾಬರಿಯಾಗಿ ಅವರ ಮನೆಗೆ ವಿಷಯ ತಿಳಿಸಿರುವುದಾಗಿ ಹೇಳಿದ್ದಾನೆ.

ಸಿದ್ದಾರ್ಥ್ ಅವರು ಇಳಿದ ಸ್ಥಳ ಜಪ್ಪಿನಮೊಗರು ಪ್ರದೇಶ ನೇತ್ರಾವತಿ ತಟದಲ್ಲಿರುವುದು ಕುಟುಂಬಸ್ಥರ ಆತಂಕಕ್ಕೆ ಕಾರಣವಾಗಿದೆ.

ಕಾರು ಚಾಲಕನಿಂದ ಮಾಹಿತಿ ಪಡೆದ ಪೊಲೀಸರು ಸಿದ್ಧಾರ್ಥ್ ಅವರ ಪತ್ತೆಗಾಗಿ ತೀವ್ರ ಕಾರ್ಯಾಚರಣೆ ನಡೆಸಿದ್ದಾರೆ.

ಇತ್ತ ಬೆಂಗಳೂರಿನಲ್ಲಿರುವ ಎಸ್.ಎಂ.ಕೃಷ್ಣ ಅವರ ಮನೆಯಲ್ಲಿ ಆತಂಕ ಮನೆ ಮಾಡಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ರಾಜ್ ಕುಟುಂಬದವರು, ಸಂಸದರು, ಗಣ್ಯರು, ಉದ್ಯಮಿಗಳು, ರಾಜಕೀಯ ಮುಖಂಡರು ಅವರ ಕುಟುಂಬದವರಿಗೆ ಧೈರ್ಯ ಹೇಳುತ್ತಿದ್ದಾರೆ.

ಡಿ.ಕೆ.ಶಿವಕುಮಾರ್, ಬಿ.ಎಲ್. ಶಂಕರ್, ಕುಮಾರಬಂಗಾರಪ್ಪ ಸೇರಿದಂತೆ ಹಲವು ಆಪ್ತರು ಇಂದು ಭೇಟಿ ನೀಡಿ ಅವರೊಂದಿಗೆ ಚರ್ಚಿಸಿ ಧೈರ್ಯ ಹೇಳಿದ್ದಾರೆ. ಸಿಎಂ ಯಡಿಯೂರಪ್ಪ ಅವರು, ಪೊಲೀಸ್ ಮಹಾನಿರ್ದೇಶಕರೊಂದಿಗೆ ಹಾಗೂ ಗುಪ್ತಚರ ಇಲಾಖಾ ಮುಖ್ಯಸ್ಥರೊಂದಿಗೆ ಮಾತನಾಡಿ ಶೋಧ ಕಾರ್ಯವನ್ನು ತೀವ್ರಗೊಳಿಸುವಂತೆ ಸೂಚಿಸಿದ್ದಾರೆ.

ಅತ್ತ ಚಿಕ್ಕಮಗಳೂರಿನಲ್ಲಿ ಎಬಿಸಿ ಕಂಪನಿ ಕಾರ್ಮಿಕರು, ಸಿಬ್ಬಂದಿ ಆತಂಕಕ್ಕೊಳಗಾಗಿದ್ದು ಕಂಪನಿಯನ್ನು ಬಂದ್ ಮಾಡಿ ತಮ್ಮ ಮಾಲೀಕರು ಶೀಘ್ರ ಹಿಂತಿರುಗಿ ಬರಲೆಂದು ಪ್ರಾರ್ಥಿಸುತ್ತಿದ್ದಾರೆ. ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ ಸಿದ್ದಾರ್ಥ್ ಸಾಹೇಬರಿಗೆ ಏನಾಗಿದೆಯೋ ಏನೋ ಎಂಬ ಆತಂಕಕ್ಕೆ ಒಳಗಾಗಿದ್ದ ಕಾಫಿ ಕ್ಯೂರಿಂಗ್ ಸೆಂಟರ್‍ನ ಕಾರ್ಮಿಕರು, ಸಿಬ್ಬಂದಿಗಳು ಕಂಪನಿ ಬಂದ್ ಮಾಡಿ ಆತಂಕದಿಂದ ಎದುರು ನೋಡುತ್ತಿದ್ದರು.

ಯಾರು ಸಿದ್ಧಾರ್ಥ್:
ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರ ಅಳಿಯ ಸಿದ್ಧಾರ್ಥ್ ಅವರು ಮಂಗಳೂರಿನ ಸಾಫ್ಟ್‍ವೇರ್ ಕಂಪನಿಗಳಿಗೆ ಹೂಡಿಕೆ ಮಾಡಿದ್ದಾರೆ. ಶೇರು ಮಾರುಕಟ್ಟೆ ವ್ಯವಹಾರದಲ್ಲೂ ತೊಡಗಿಸಿಕೊಂಡಿದ್ದಾರೆ. ಜೊತೆಗೆ ಮುಂಬೈನ ಜೆ.ಎಂ.ಫೈನಾಷಿಯಲ್ ಲಿಮಿಟೆಡ್‍ನಲ್ಲೂ ಕಾರ್ಯನಿರ್ವಹಿಸಿದ್ದರು. ಎರಡು ವರ್ಷಗಳ ನಂತರ ಬೆಂಗಳೂರಿಗೆ ಆಗಮಿಸಿ ಷೇರು ಮಾರುಕಟ್ಟೆ ವ್ಯವಹಾರದಲ್ಲಿ ತೊಡಗಿದ್ದರು. ಸೀವಾನ್ ಸೆಕ್ಯುರಿಟಿಸ್ ಎಂಬ ಹೆಸರಿನಲ್ಲಿ ಮೊದಲು ಕಂಪನಿ ಆರಂಭಿಸಿದರು.2000ನೇ ಇಸವಿಯಲ್ಲಿ ಇದಕ್ಕೆ ಗ್ಲೋಬಲ್ ಟೆಕ್ನಾಲಜಿ ವೆಂಚರ್ಸ್ ಎಂದು ನಾಮಕರಣ ಮಾಡಲಾಯಿತು. ಇದರ ಜೊತೆಗೆ ಇಂದು ಖ್ಯಾತವಾಗಿರುವ ಕಾಫಿ ಡೇ ಉದ್ಯಮವನ್ನು ಆರಂಭಿಸಿದರು. ಚಿಕ್ಕಮಗಳೂರಿನ ಕಾಫಿ ಘಮವನ್ನು ಇಡೀ ಪ್ರಪಂಚದಾದ್ಯಂತ ಪರಿಚಯಿಸಿದ ಕೀರ್ತಿ ಸಿದ್ಧಾರ್ಥ್ ಅವರಿಗೆ ಸಲ್ಲುತ್ತದೆ.

ಖಾದರ್ ಸಾಥ್: ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರು ನಿನ್ನೆ ರಾತ್ರಿ ಜಪ್ಪಿನಮೊಗರು ಸೇತುವೆ ಬಳಿ ನಿಗೂಢವಾಗಿ ನಾಪತ್ತೆಯಾಗಿದ್ದು ಮಂಗಳೂರು ನಗರ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆಗೆ ಸ್ಥಳೀಯ ಶಾಸಕರಾದ ಯು.ಟಿ.ಖಾದರ್ ಸಾಥ್ ನೀಡಿದ್ದಾರೆ.

ನಿನ್ನೆ ಸಿದ್ಧಾರ್ಥ್ ನಾಪತ್ತೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಯು.ಟಿ.ಖಾದರ್ ಅವರು, ಶೋಧ ಕಾರ್ಯಾಚರಣೆಗೆ ಜಿಲ್ಲಾಧಿಕಾರಿ, ಪೊಲೀಸ್ ಅಧಿಕಾರಿಯೊಂದಿಗೆ ಚರ್ಚೆ ನಡೆಸಿದರಲ್ಲದೆ ಸ್ಥಳದಲ್ಲೇ ಮೊಕ್ಕಾಂ ಹೂಡಿ ಪೊಲೀಸರು, ಅಗ್ನಿಶಾಮಕ ದಳ, ಮುಳುಗು ತಜ್ಞರಿಗೆ ಸಲಹೆ ಮಾರ್ಗದರ್ಶನ ನೀಡಿದರು.

ಎಬಿಸಿ ಕಂಪೆನಿಯ ಸ್ಥಾಪಕ, ಕಾಫಿ ಡೇ ಸೇರಿದಂತೆ ಹಲವು ಕಂಪೆನಿಗಳನ್ನು ಮುನ್ನಡೆಸುತ್ತಿರುವ ಸಿದ್ಧಾರ್ಥ್ ಅವರು ವ್ಯವಹಾರ ನಿಮಿತ್ತ ನಿನ್ನೆ ತಮ್ಮ ಕಾರಿನಲ್ಲಿ ಚಿಕ್ಕಮಗಳೂರಿಗೆ ತೆರಳಿದ್ದರು.ಅಲ್ಲಿಂದ ಮಂಗಳೂರಿಗೆ ಹೋಗಿದ್ದರು. ಕೇರಳಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯ ಜಪ್ಪಿನಮೊಗರು ಎಂಬಲ್ಲಿ ನೇತ್ರಾವತಿ ಸೇತುವೆ ಇದ್ದು, ಇಲ್ಲಿಗೆ ತಲುಪುತ್ತಿದ್ದಂತೆ ಕಾರನ್ನು ನಿಲ್ಲಿಸಲು ಚಾಲಕನಿಗೆ ಹೇಳಿದ್ದಾರೆ.

ಬಳಿಕ ಕಾರಿನಿಂದ ಇಳಿದ ಅವರು ಚಾಲಕನಿಗೆ ಕಾರನ್ನು ತಿರುಗಿಸಿಕೊಂಡು ವಾಪಸ್ ಬರುವಂತೆ ಹೇಳಿ ಪೋನ್‍ನಲ್ಲಿ ಮಾತನಾಡುತ್ತ ಹೋಗಿದ್ದಾರೆ. ಸ್ಥಳಕ್ಕೆ ಬಂದು ಅರ್ಧಗಂಟೆಯಾದರೂ ಸಿದ್ಧಾರ್ಥ್ ಅವರು ವಾಪಸ್ ಬರದೆ ಇದ್ದುದನ್ನು ಕಂಡು ಚಾಲಕ ಅವರಿಗೆ ಪೋನ್ ಮಾಡಿದ್ದಾನೆ. ಈ ವೇಳೆ ಅವರ ಪೋನ್ ಸ್ವಿಚ್ಡ್ ಆಫ್ ಆಗಿದ್ದರಿಂದ ಗಾಬರಿಗೊಂಡು ಅವರ ಮನೆಗೆ ವಿಷಯ ತಿಳಿಸಿದ್ದಾನೆ.

ನಂತರ ಕಾರು ಚಾಲಕ ಕಂಕನಾಡಿ ಪೊಲೀಸ್ ಠಾಣೆಗೆ ದೂರು ಸಹ ನೀಡಿದ್ದಾನೆ. ಈ ಬಗ್ಗೆ ಮಾಹಿತಿ ಪಡೆದ ಮಂಗಳೂರು ನಗರ ಪೊಲೀಸರು ರಾತ್ರಿಯಿಂದಲೇ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.

ಸಿದ್ದಾರ್ಥ್ ಅವರು ಇಳಿದ ಸ್ಥಳ ಜಪ್ಪಿನಮೊಗರು ಪ್ರದೇಶ ನೇತ್ರಾವತಿ ತಟದಲ್ಲಿರುವುದು ಕುಟುಂಬಸ್ಥರ ಆತಂಕಕ್ಕೆ ಕಾರಣವಾಗಿದೆ. ಇತ್ತ ಬೆಂಗಳೂರಿನಲ್ಲಿರುವ ಎಸ್.ಎಂ.ಕೃಷ್ಣ ಅವರ ಮನೆಯಲ್ಲಿಯೂ ಆತಂಕ ಮನೆ ಮಾಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ