ಕ್ವಾರಿಗಳು ಸರ್ಕಾರದ್ದಲ್ಲ-ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್

ಬೆಂಗಳೂರು, ಜು.30- ಪಾಲಿಕೆ ಸದಸ್ಯರು ಕಸ ಸಮಸ್ಯೆ ಬಗ್ಗೆ ಗಮನ ಸೆಳೆದಾಗ ಆಯುಕ್ತ ಮಂಜುನಾಥ್ ಪ್ರಸಾದ್ ಉತ್ತರಿಸಿ, ಕ್ವಾರಿಗಳು ಸರ್ಕಾರದ್ದಲ್ಲ. ಆರು ಕ್ವಾರಿಗೆ ಕಸ ಹಾಕಲು ನೂರು ಕೋಟಿ ಅನುದಾನ ನೀಡಿದ್ದರು. ಆದರೆ, ಮೂರು ಕ್ವಾರಿಗೆ ಮಾತ್ರ ಕಸ ಹಾಕಲು ಸಾಧ್ಯವಾಯಿತು ಎಂದರು.

ಬಾಗಲೂರು, ಬೆಳ್ಳಳ್ಳಿ, ಮಿಟಗಾನಹಳ್ಳಿಯಲ್ಲಿರುವ ಕ್ವಾರಿಗಳಿಗೆ ಕಸ ವಿಲೇವಾರಿ ಮಾಡಲಾಗುತ್ತಿದೆ. ಆದರೆ, ಬಾಗಲೂರಿನ ಕ್ವಾರಿಗೆ ಕಸ ಹಾಕಬಾರದು ಎಂದು ಎನ್‍ಜಿಟಿ ಆದೇಶ ನೀಡಿತ್ತು. ಮೆಟಗಾನಹಳ್ಳಿಯಲ್ಲಿ ಕಸ ಹಾಕಲು ಸಾರ್ವಜನಿಕರು ವಿರೋಧ ಮಾಡಿದ್ದರಿಂದ ಸ್ಥಗಿತಗೊಳಿಸಲಾಯಿತು. ಈಗ ಸದ್ಯಕ್ಕೆ ಬೆಳ್ಳಳಿ ಕ್ವಾರಿಗೆ ಮಾತ್ರ ಕಸ ವಿಲೇವಾರಿ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಈಗ ಹುಲ್ಲಳ್ಳಿ, ಮಿಟಗಾನಹಳ್ಳಿಗೆ ಹೊಸದಾಗಿ ಕಸ ವಿಲೇವಾರಿ ಮಾಡಲು ಜಾಗ ಗುರುತಿಸಲಾಗಿದೆ. ಮಿಟಗಾನಹಳ್ಳಿಗೆ ಕಸ ಹಾಕಲು ಟೆಂಡರ್ ಕರೆಯಲಾಗಿದೆ ಎಂದು ಆಯುಕ್ತರು ಹೇಳಿದರು.

ಫ್ರೀ ಬಿಡ್ ಮೀಟಿಂಗ್‍ನಲ್ಲಿ ನಾಲ್ಕು ಜನ ಮಾತ್ರ ಭಾಗಿಯಾಗಿದ್ದರು ಆ.7ರಂದು ಬಿಡ್ಡಿಂಗ್ ಹಾಕಲು ಕೊನೆ ದಿನವಾಗಿದೆ. ಬೆಳ್ಳಳ್ಳಿ ಪಕ್ಕದಲ್ಲಿ ಜಾಗವಿದ್ದು, ಇನ್ನೆರಡು ದಿನಗಳಲ್ಲಿ ಅಲ್ಲಿಗೆ ಕಸ ಹಾಕಲಾವುದು ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಎಲ್ಲೂ ಕಸ ಇರಬಾರದು. ನಾವು ಸಹಕಾರ ನೀಡುತ್ತೇವೆ ಎಂದು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಹಾಗಾಗಿ ಸ್ಥಳೀಯ ಶಾಸಕರ ಜತೆ ಈ ಕುರಿತು ಮಾತನಾಡಿದ್ದೇನೆ. ಸಾರ್ವಜನಿಕರಿಗೂ ಕೂಡ ಕಸ ವಿಂಗಡಿಸಿಕೊಡುವಂತೆ ಮಂಜುನಾಥ್ ಪ್ರಸಾದ್ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ