ರಾಜೀನಾಮೆ ಕೊಟ್ಟವರಿಗೂ ನಮಗೂ ಯಾವ ಸಂಬಂಧವಿಲ್ಲ-ಬಿಜೆಪಿ ಮುಖಂಡ ಆರ್.ಆಶೋಕ್

ಬೆಂಗಳೂರು,ಜು.29-ರಾಜೀನಾಮೆ ಕೊಟ್ಟವರಿಗೂ ನಮಗೂ ಯಾವ ಸಂಬಂಧವಿಲ್ಲ. ನಾವು ಯಾರೂ ಅವರನ್ನು ನೋಡಿಲ್ಲ. ಮಾತಾಡಿಸಿಯೂ ಇಲ್ಲ ಎಂದು ಬಿಜೆಪಿ ಮುಖಂಡ , ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ನಾವು ಅತೃಪ್ತ ಶಾಸಕರ ಜೊತೆ ಹೋಗಿಲ್ಲ, ಬಂದಿಲ್ಲ. ಅವರ ಜೊತೆಗೆ ಕಾಣಿಸಿಕೊಂಡಿಲ್ಲ. ನಮ್ಮ ಪಾಡಿಗೆ ನಾವು ಬಂದಿದ್ದೇವೆ. ಅವರ ಪಾಡಿಗೆ ಅವರು ಬಂದಿದ್ದಾರೆ ಅಷ್ಟೇ. ನಾನು ಅಶ್ವತ್ಥ್ ನಾರಾಯಣ್ ಬೇರೆ ಕೆಲಸಕ್ಕೆ ಹೋಗಿದ್ದೆವು ಎಂದು ಅತೃಪ್ತ ಶಾಸಕರ ಜೊತೆಗಿದ್ದ ಮಾತುಗಳನ್ನು ತಳ್ಳಿಹಾಕಿದರು.

ನೂರಕ್ಕೆ ನೂರಷ್ಟು ಬಹುಮತ ಸಾಬೀತುಪಡಿಸುತ್ತೇವೆ. ರಾಜ್ಯದ ಜನರು ಜೆಡಿಎಸ್‍ಗೆ 37 ಸ್ಥಾನ ಕೊಟ್ಟು ಮೂರನೇ ಸ್ಥಾನದಲ್ಲಿಟ್ಟಿದ್ದಾರೆ. ಆದರೆ ಅಂಥವರು ಮೊದಲ ಸ್ಥಾನಕ್ಕೆ ಬಂದರು. ಇದು ರಾಜ್ಯದ ದುರಂತ. ಈ ದುರಂತ ಹೋಗಿ, ಒಳ್ಳೆಯ ದಿನಗಳು ಬಂದಿವೆ ಮತ್ತೆ ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ ಎಂದರು.

ರಾಜ್ಯದ ಜನತೆಗೆ ಅಭಿವೃದ್ಧಿ, ಸುಭದ್ರ ಹಾಗೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಡಳಿತ ನೀಡಬೇಕಿದೆ. ಕೇಂದ್ರ ಹಾಗೂ ರಾಜ್ಯದಲ್ಲೂ ಬಿಜೆಪಿ ಸರ್ಕಾರ ಇದೆ.ಮೂವತ್ತು ವರ್ಷದ ಬಳಿಕ ಇಂತಹ ಅವಕಾಶ ಬಂದಿದೆ.ಕೇಂದ್ರದ ಯೋಜನೆ, ಅನುದಾನ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಅತೃಪ್ತ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ರಮೇಶ್ ಕುಮಾರ್ ಅವರ ಆದೇಶದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸ್ಪೀಕರ್ ಅವರು ದ್ವೇಷದ ತೀರ್ಪು ಕೊಡುವುದು ಒಳ್ಳೆಯದಲ್ಲ. ರಮೇಶ್ ಕುಮಾರ್ ಕೂಡ ಒಬ್ಬ ಶಾಸಕರೇ. ಅವರು ಸ್ಪೀಕರ್ ಹುದ್ದೆಗೆ ಗೌರವ ಕೊಡಬೇಕಿತ್ತು. ಈ ಹಿಂದೆ ಎಂದೂ ಇಂತಹ ತೀರ್ಪು ಬಂದಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಭಾನುವಾರ ಮಧ್ಯಾರಾತ್ರಿ 12.50ರ ಸುಮಾರಿಗೆ ಕೆಂಪೇಗೌಡ ವಿಮಾನ ನಿಲ್ದಾಣದಕ್ಕೆ ಅನರ್ಹಗೊಂಡ ಬೈರತಿ ಬಸವರಾಜು, ಎಸ್.ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್, ಮುನಿರತ್ನ ಹಾಗೂ ಎಂ ಟಿಬಿ ನಾಗರಾಜ್ ಬಂದಿಳಿದಿದ್ದಾರೆ.

ಅನರ್ಹರು ವಿಮಾನ ನಿಲ್ದಾಣದಿಂದ ಹೊರಬಂದ ಬಳಿಕ ಆರ್.ಅಶೋಕ್, ಅಶ್ವತ್ಥ್ ನಾರಾಯಣ್ ಕೂಡ ಆಗಮಿಸಿದ್ದಾರೆ. ಇವರ ಜೊತೆ ಪಕ್ಷೇತರ ಶಾಸಕ ನಾಗೇಶ್ ಕೂಡ ಬಂದಿದ್ದು, ಮಾಧ್ಯಮಗಳ ಕಣ್ತಪ್ಪಿಸಿ ಹೊರನಡೆದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ