ಸ್ಪೀಕರ್ ವಿರುದ್ಧ ಕಾನೂನು ಸಮರ ಸಾರಿದ ಅನರ್ಹಗೊಂಡ ಶಾಸಕರು

ನವದೆಹಲಿ, ಜು.29-ಅನರ್ಹ ಮತ್ತು ಬಂಡಾಯ ಶಾಸಕರನ್ನು ಅನರ್ಹಗೊಳಿಸುವ ಆದೇಶವನ್ನು ಕರ್ನಾಟಕ ವಿಧಾನ ಸಭಾಧ್ಯಕ್ಷ ರಮೇಶ್‍ಕುಮಾರ್ ನಿನ್ನೆ ಪ್ರಕಟಿಸುತ್ತಿದ್ದಂತೆ ಸ್ಪೀಕರ್ ವಿರುದ್ಧ ಕಾನೂನು ಸಮರ ಸಾರಲಾಗಿದೆ.

ತಮ್ಮ ಅನರ್ಹ ಆದೇಶವನ್ನು ಪ್ರಶ್ನಿಸಿ ವಿಧಾನ ಸಭಾಧ್ಯಕ್ಷರ ವಿರುದ್ಧ ಅನರ್ಹಗೊಂಡ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಮತ್ತು ಆರ್.ಶಂಕರ್ ಇಂದು ಬೆಳಿಗ್ಗೆ ತಮ್ಮ ವಕೀಲರ ಮೂಲಕ ಸುಪ್ರೀಂ ಕೋರ್ಟ್‍ಗೆ ಮೇಲ್ವನವಿ ಸಲ್ಲಿಸಿದ್ದಾರೆ. ಇದರೊಂದಿಗೆ ಸ್ಪೀಕರ್ ವಿರುದ್ಧ ಕಾನೂನು ಹೋರಾಟ ಮತ್ತಷ್ಟು ತೀವ್ರಗೊಂಡಿದೆ.

ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಮತ್ತು ಆರ್.ಶಂಕರ್ ಈ ಮೂವರನ್ನು ಸ್ಪೀಕರ್ ಮೊದಲು ಅನರ್ಹಗೊಳಿಸಿದ್ದರು.

ಸ್ಪೀಕರ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಈ ಮೂವರು ತಮ್ಮ ರಾಜೀನಾಮೆಗಳನ್ನು ಅಂಗೀಕರಿಸದೆ ತಮ್ಮನ್ನು ಅನರ್ಹಗೊಳಿಸಿರುವುದು, ಕಾನೂನು ಬಾಹಿರ ಕ್ರಮ ಎಂದು ಅರ್ಜಿಯಲ್ಲಿ ವಾದಿಸಿದ್ದಾರೆ.

ಜುಲೈ 25ರ ಆದೇಶವನ್ನು ಈ ಕೂಡಲೇ ರದ್ದುಗೊಳಿಸಲು ರಮೇಶ್‍ಕುಮಾರ್ ಅವರಿಗೆ ಸೂಚನೆ ನೀಡಬೇಕು ಎಂದು ಈ ಮೂವರು ಸುಪ್ರೀಂ ಕೋರ್ಟ್‍ಗೆ ತಮ್ಮ ವಕೀಲರ ಮೂಲಕ ಮೇಲ್ವನವಿ ಸಲ್ಲಿಸಿದ್ದಾರೆ.

ಎರಡನೇ ಕಂತಿನಲ್ಲಿ ನಿನ್ನೆ 14 ಬಂಡಾಯ ಮತ್ತು ಅತೃಪ್ತ ಶಾಸಕರನ್ನು ಅನರ್ಹಗೊಳಿಸುವ ಆದೇಶವನ್ನು ಸ್ಪೀಕರ್ ಘೋಷಿಸುತ್ತಿದ್ದಂತೆ ಮುಂಬೈನಲ್ಲಿ ವಾಸ್ತವ್ಯ ಹೂಡಿರುವ ರೆಬಲ್‍ಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಇದು ನಿರೀಕ್ಷಿತ ತೀರ್ಪು. ಇದನ್ನು ಪ್ರಶ್ನಿಸಿ ಸರ್ವೋಚ್ಛ ನ್ಯಾಯಾಲಯದ ಮೊರೆ ಹೋಗುವುದಾಗಿ ನಿನ್ನೆಯೇ ತಿಳಿಸಿದ್ದರು. ಅದರಂತೆ ಇಂದು ಬೆಳಿಗ್ಗೆ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಮತ್ತು ಆರ್.ಶಂಕರ್ ತಮ್ಮ ವಕೀಲರ ಮೂಲಕ ರಿಟ್ ಅರ್ಜಿ ಸಲ್ಲಿಸಿದ್ದು ಕಾನೂನು ಸಮರಕ್ಕೆ ಆಹ್ವಾನ ನೀಡಿದ್ದಾರೆ.

ಸ್ಪೀಕರ್ ರಮೇಶ್‍ಕುಮಾರ ಅವರಲ್ಲದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಸೇರಿದಂತೆ ಪಕ್ಷದ ಕೆಲವು ಮುಖಂಡರ ವಿರುದ್ಧವು ಈ ರಿಟ್ ಅರ್ಜಿಯಲ್ಲಿ ಈ ಮೂವರು ಅನರ್ಹ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಿಟ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಾನ್ಯ ಮಾಡಿದ್ದು, ವಿಚಾರಣೆ ದಿನಾಂಕವನ್ನು ತಿಳಿಸಲಿದೆ.

ಸುಪ್ರೀಂ ಕೋರ್ಟ್‍ನಲ್ಲಿ ಕಾನೂನು ಸಂಘರ್ಷ ನಡೆಸುವ ಸಂಬಂಧ 17 ಮಂದಿ ಅನರ್ಹರು ಪೂರ್ವ ತಯಾರಿ ನಡೆಸಿದ್ದು, ಮೊದಲ ಹಂತವಾಗಿ ಈ ಮೂವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ನಂತರದ ಹಂತದಲ್ಲಿ ಉಳಿದ 14 ಅನರ್ಹ ಶಾಸಕರೂ ಕೂಡ ಸ್ಪೀಕರ್ ವಿರುದ್ಧ ನ್ಯಾಯ ನಿರ್ಣಯನದ ಹೋರಾಟ ನಡೆಸಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ