ಅತೃಪ್ತ ಶಾಸಕರು ಅನರ್ಹತೆಗೊಂಡ ಹಿನ್ನಲೆ-ಸಂಪುಟ ರಚನೆಯ ಲೆಕ್ಕಾಚಾರವನ್ನು ಬದಲಿಸಿಕೊಂಡ ಮುಖ್ಯಮಂತ್ರಿ ಯಡಿಯೂರಪ್ಪ

ಸಬೆಂಗಳೂರು,ಜು.29- ಅತೃಪ್ತ ಶಾಸಕರು ಅನರ್ಹತೆಗೊಂಡ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಪುಟ ರಚನೆಯ ಲೆಕ್ಕಾಚಾರವನ್ನು ಬದಲಿಸಿಕೊಂಡಿದ್ದಾರೆ.

ರಾಜೀನಾಮೆ ನೀಡುವ ಮೊದಲು ಶಾಸಕರಿಗೆ ಮಂತ್ರಿಗಿರಿ ನೀಡುವುದಾಗಿ ಬಿಜೆಪಿ ಭರವಸೆ ನೀಡಿತ್ತು. ಒಂದು ವೇಳೆ ರಾಜೀನಾಮೆ ಅಂಗೀಕಾರವಾಗಿದ್ದರೆ ಮಂತ್ರಿ ಸ್ಥಾನ ನೀಡಿ ಚುನಾವಣೆಗೆ ಹೋಗುವ ಪ್ಲಾನ್. ಆದರೆ ಈಗ ಶಾಸಕರನ್ನು ಸ್ಪೀಕರ್ ಅವರು ಅನರ್ಹಗೊಳಿಸಿರುವುದರಿಂದ ಮಂತ್ರಿ ಸ್ಥಾನ ನೀಡಲು ಸಾಧ್ಯವಿಲ್ಲ.

ಸ್ಪೀಕರ್ ಆದೇಶವನ್ನು ಪ್ರಶ್ನಿಸಿ ಅನರ್ಹ ಶಾಸಕರು ಸುಪ್ರೀಂಕೋರ್ಟ್ ಮೊರೆ ಹೋಗಲಿದ್ದಾರೆ. ಅನರ್ಹತೆಯನ್ನು ರದ್ದುಗೊಳಿಸುವ ಆದೇಶ ನ್ಯಾಯಾಲಯದಿಂದ ಪ್ರಕಟವಾದರೆ ಮಾತ್ರ ಅವರೆಲ್ಲರಿಗೂ ಸಂಪುಟದಲ್ಲಿ ಸ್ಥಾನ ನೀಡಲು ಯಡಿಯೂರಪ್ಪನವರು ನಿರ್ಧರಿಸಿದ್ದಾರೆ.

ಹೀಗಾಗಿ ತನ್ನ ಸಂಪುಟದಲ್ಲಿ ಈಗ ಯಾರಿಗೆ ಸ್ಥಾನ ನೀಡಬೇಕು ಎನ್ನುವ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಜಿಲ್ಲಾವಾರು/ ಜಾತಿವಾರು ಪ್ರಾತಿನಿಧ್ಯ ನೀಡಬೇಕಾದ ಕಾರಣ ಬಿಎಸ್‍ವೈ ಅಳೆದು ತೂಗಿ ಕೆಲ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಶಾಸಕರಿಗೆ ಮಂತ್ರಿ ಸ್ಥಾನ ನೀಡಲು ಮುಂದಾಗಿದ್ದಾರೆ.

ಮುಂಜಾಗ್ರತಾ ಕ್ರಮಗಳೇನು?

ಕಾನೂನು ಪ್ರಕಾರ ಮುಖ್ಯಮಂತ್ರಿ ಸೇರಿ ಗರಿಷ್ಠ ಒಟ್ಟು 34 ಮಂದಿಗಷ್ಟೇ ಮಂತ್ರಿಯಾಗಲು ಸಾಧ್ಯ. ಸದ್ಯ ಅನರ್ಹಗೊಂಡಿರುವ ಶಾಸಕರನ್ನು ಹೊರತುಪಡಿಸಿ ಕೇವಲ 23 ಶಾಸಕರನ್ನು ಒಳಗೊಂಡ ಸಚಿವ ಸಂಪುಟ ರಚನೆ ಮಾಡುವುದು. 11 ಮಂತ್ರಿ ಸ್ಥಾನಗಳನ್ನು ಖಾಲಿ ಉಳಿಸಿಕೊಳ್ಳಲು ಮುಖ್ಯಮಂತ್ರಿಗಳು ತೀರ್ಮಾನಿಸಿದ್ದು, 6 ತಿಂಗಳ ಬಳಿಕ ಸಂಪುಟ ವಿಸ್ತರಣೆಗೆ ಮುಂದಾಗುವುದು.

ಈ ಸಮಯದಲ್ಲಿ ರೆಬೆಲ್ ಶಾಸಕರು ಅನರ್ಹತೆಯಿಂದ ಪಾರಾಗಿದ್ದರೆ, ಅವರಲ್ಲಿ 11 ನಾಯಕರು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವುದು. ಹಾಗಾಗಿ ಕಾದು ನೋಡುವ ತಂತ್ರಕ್ಕೆ ಯಡಿಯೂರಪ್ಪ ಮುಂದಾಗಿದ್ದಾರೆ.

ಕಾದು ನೋಡುವ ತಂತ್ರ ಸೇರಿದಂತೆ ಸಂಪುಟ ರಚನೆಯ ನಾಲ್ಕೈದು ಅಂಶಗಳನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ಅಮಿತ್ ಷಾ ಮುಂದೆ ಇಡಲು ಯಡಿಯೂರಪ್ಪನವರು ತೀರ್ಮಾನಿಸಿದ್ದಾರೆ. ಅಮಿತ್ ಷಾ ಅವರಿಂದ ಗ್ರೀನ್ ಸಿಗ್ನಲ್ ಸಿಕ್ಕ ಕೂಡಲೇ ರಾಜ್ಯ ಬಿಜೆಪಿಯ ಸಂಪುಟ ರಚನೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ