ಬೆಂಗಳೂರು,ಜು.29-ಬಹುನಿರೀಕ್ಷಿತ ಕರ್ನಾಟಕ ಧನ ವಿನಿಯೋಗ (ಲೇಖಾನುದಾನ ಸಂಖ್ಯೆ2) ವಿಧೇಯಕ-2019ನ್ನು ವಿಧಾನಸಭೆಯಲ್ಲಿ ಯಾವುದೇ ಚರ್ಚೆ ಇಲ್ಲದೆ ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು.
ಸಿಎಂ ಯಡಿಯೂರಪ್ಪ ಮಂಡಿಸಿದ 2019-20ನೇ ಸಾಲಿನ ಲೇಖಾನುದಾನಕ್ಕೆ ವಿಧಾನಸಭೆಯಲ್ಲಿ ಎಲ್ಲ ಸದಸ್ಯರು ಧ್ವನಿ ಮತದ ಮೂಲಕ ಒಪ್ಪಿಗೆ ಸೂಚಿಸಿದರು.
ಇದಕ್ಕೂ ಮುನ್ನ ಬಿ.ಎಸ್.ಯಡಿಯೂರಪ್ಪನವರು ವಿಷಯ ಪ್ರಸ್ತಾಪಿಸಿ ವಿಧೇಯಕವನ್ನು ಅಂಗೀಕರಿಸುವಂತೆ ಸದಸ್ಯರಲ್ಲಿ ಮನವಿ ಮಾಡಿದರು.
ಆದರೆ ಈ ಹಂತದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವರಾದ ಡಿ.ಕೆ.ಶಿವಕುಮಾರ್, ಎಚ್.ಕೆ.ಪಾಟೀಲ್ ಮತ್ತಿತರರು ಮೂರು ತಿಂಗಳ ಅವಧಿಗೆ ಲೇಖಾನುದಾನ ಮಂಡಿಸುತ್ತಿರುವ ಉದ್ದೇಶವಾದರೂ ಏನು? ಪೂರ್ಣ ಅವಧಿಗೆ ಒಪ್ಪಿಗೆ ಪಡೆದುಕೊಳ್ಳಿ ಎಂದು ಸಲಹೆ ಮಾಡಿದರು.
ಒಂದು ಕಡೆ ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ನೀವೇ ಹೇಳುತ್ತೀರಿ, ಮತ್ತೊಂದು ಕಡೆ ಕೇವಲ ಮೂರು ತಿಂಗಳ ಅವಧಿಗೆ ಲೇಖಾನುದಾನಕ್ಕೆ ಒಪ್ಪಿಗೆ ಪಡೆಯುತ್ತಿದ್ದೀರಿ.ಇದರ ಹಿಂದಿನ ಉದ್ದೇಶ ಏನು ಎಂದು ಪ್ರಶ್ನಿಸಿದರು.
ಈ ಹಂತದಲ್ಲಿ ಯಡಿಯೂರಪ್ಪ , ನೀವೇ ಮಂಡಿಸಿದ ಬಜೆಟ್ನಲ್ಲಿ ಒಂದಿಷ್ಟು ಅಕ್ಷರಗಳನ್ನೂ ಬದಲಾವಣೆ ಮಾಡಿಲ್ಲ. ಇದು ಮೂರು ತಿಂಗಳ ಅವಧಿಗೆ ಮಾತ್ರ. ಹೀಗಾಗಿ ಒಪ್ಪಿಗೆ ಕೊಡಬೇಕೆಂದು ಮನವಿ ಮಾಡಿದರು.
ಆದರೆ ಇದನ್ನು ಒಪ್ಪದ ಸಿದ್ದರಾಮಯ್ಯ, ನೀವು ಮೂರು ತಿಂಗಳ ಅವಧಿಗೆ ಚರ್ಚೆ ಇಲ್ಲದೆ ಒಪ್ಪಿಗೆ ಕೊಡಿ ಎಂದು ಹೇಳಿದರೆ ಹೇಗೆ ಸಾಧ್ಯ? ಪೂರ್ಣಾವಧಿಗೆ ಲೇಖಾನುದಾನ ಮಂಡಿಸಿದರೆ ನಮ್ಮ ಅಭ್ಯಂತರವೇನಿಲ್ಲ. ಚರ್ಚೆ ಇಲ್ಲದೆ ಲೇಖಾನುದಾನಕ್ಕೆ ಒಪ್ಪಿಗೆ ಸೂಚಿಸುವುದೆಂದರೆ ಹೇಗೆ? ಇಂತಹ ಹೊಸ ಸಂಪ್ರದಾಯವನ್ನು ಹುಟ್ಟು ಹಾಕಬೇಡಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇರುವ ಹಣವನ್ನು ಖರ್ಚು ಮಾಡಿಕೊಳ್ಳಿ. ಲೇಖಾನುದಾನ ಕುರಿತಂತೆ ತಕ್ಷಣವೇ ಅಧಿವೇಶನ ಕರೆಯಿರಿ. ಚರ್ಚೆ ಇಲ್ಲದೆ ಧ್ವನಿ ಮತದ ಮೂಲಕ ಅಂಗೀಕಾರ ಪಡೆದುಕೊಳ್ಳುವುದು ಕೆಟ್ಟ ಸಂಪ್ರದಾಯವಾಗಿದೆ ಎಂದರು.
ಸಿದ್ದರಾಮಯ್ಯನವರ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಮೂರು ತಿಂಗಳ ಅವಧಿಯಲ್ಲಿ 54,41,402.20 ಕೋಟಿ ಒಟ್ಟು ಲೇಖಾನುದಾನದ ಹಣವಾಗಿದೆ.
ಈ ಹಂತದಲ್ಲಿ ಬಿಜೆಪಿಯ ಮಾಧುಸ್ವಾಮಿ ರಾಷ್ಟ್ರೀಯ ವಿಪತ್ತು, ಬರಗಾಲ ನಿರ್ವಹಣೆಗೆ ಹಣವನ್ನು ವೆಚ್ಚ ಮಾಡಬೇಕಾಗುತ್ತದೆ. ನೀವೇ ಮಂಡಿಸಿದ ಬಜೆಟ್ಗೆ ಒಪ್ಪಿಗೆ ನೀಡದಿದ್ದರೆ ಹೇಗೆ? ಅಗತ್ಯವಿದ್ದರೆ ಇದರ ಬಗ್ಗೆ ಚರ್ಚೆ ಮಾಡೋಣ, ಮೊದಲು ಸದನ ಒಪ್ಪಿಗೆ ನೀಡಲಿ ಎಂದು ಕೋರಿದರು.
ಬಳಿಕ ಸ್ಪೀಕರ್ ರಮೇಶ್ಕುಮಾರ್ ಅವರು ಧ್ವನಿ ಮತದ ಮೂಲಕ ಲೇಖಾನುದಾನಕ್ಕೆ ಒಪ್ಪಿಗೆ ಪಡೆದರು.