ಅತೃಪ್ತ 17 ಶಾಸಕರಿಗೆ ವಿಧಾನಸಭೆ ಬಾಗಿಲು ಬಂದ್

ಬೆಂಗಳೂರು,ಜು.29- ಮೈತ್ರಿ ಸರ್ಕಾರದ ವಿರುದ್ಧ ಬಂಡಾಯವೆದ್ದು ಮುಂಬೈ ಸೇರಿಕೊಂಡಿದ್ದ 17 ಶಾಸಕರಿಗೆ ವಿಧಾನಸಭೆ ಬಾಗಿಲು ಬಂದ್ ಆಗಿದೆ.

ಸ್ಪೀಕರ್ ರಮೇಶ್ ಕುಮಾರ್ ಶಾಸಕರನ್ನು ಅನರ್ಹಗೊಳಿಸಿದ ಬೆನ್ನಲ್ಲೇ ಬಿಜೆಪಿ ಮತ್ತೊಮ್ಮೆ ಆಪರೇಷನ್ ಕಮಲಕ್ಕೆ ಮುಂದಾಗಿದೆ ಎನ್ನಲಾಗಿದ್ದು, ದೋಸ್ತಿ ಪಕ್ಷಗಳ ಆರು ಮಂದಿ ಶಾಸಕರು ಬಿಜೆಪಿಯತ್ತ ಮುಖ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜೆಡಿಎಸ್‍ನ ಶಾಸಕರೊಬ್ಬರು ಸೇರಿದಂತೆ ಒಟ್ಟು ಆರು ಮಂದಿ ಶಾಸಕರು ಬಿಜೆಪಿ ಸೇರಲು ಮುಂದಾಗಿದ್ದರು. ಅನರ್ಹತೆ ಭೀತಿಯಿಂದಾಗಿ ಇಷ್ಟು ದಿನ ದೂರ ಉಳಿದಿದ್ದರು ಎನ್ನಲಾಗಿದೆ.

ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಹುಮತ ಸಾಬೀತುಪಡಿಸಿದ ಬಳಿಕ ರಮೇಶ್ ಕುಮಾರ್ ತಮ್ಮ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಗಳಿವೆ.

ರಮೇಶ್ ಕುಮಾರ್ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಬಿಜೆಪಿಯ ನಾಯಕರೊಬ್ಬರು ಸಭಾಧ್ಯಕ್ಷರಾಗಲಿದ್ದಾರೆ. ಬಿಜೆಪಿ ಬೆಂಬಲಿತ ಸ್ಪೀಕರ್ ಆಯ್ಕೆಯಾದರೆ ರಾಜೀನಾಮೆ ಸಹ ಬೇಗ ಅಂಗೀಕಾರವಾಗಲಿದೆ ಎಂಬ ಚಿಂತನೆಯಲ್ಲಿ ಅತೃಪ್ತರಿದ್ದರು. ಹಾಗಾಗಿ ಇಷ್ಟು ದಿನ ರಾಜೀನಾಮೆಯಿಂದ ದೂರ ಉಳಿದುಕೊಂಡಿದ್ದರು.

ಬಹುಮತ ಸಾಬೀತುಪಡಿಸುವ ನೂತನ ಬಿಜೆಪಿ ಸರ್ಕಾರ, ಸ್ಪೀಕರ್ ವಿರುದ್ಧ ಅವಿಶ್ವಾಸ ಮಂಡಿಸಬಹುದು. ಸಭಾಧ್ಯಕ್ಷರನ್ನು ಮುಂದುವರಿಸಲು ಸಾಧ್ಯವಿಲ್ಲ ಎಂಬ ನೋಟಿಸ್ ನೀಡಲಾಗುತ್ತದೆ. 15 ದಿನಗಳ ಬಳಿಕ ದಿನಾಂಕ ನಿಗದಿ ಮಾಡಿ ಅವಿಶ್ವಾಸವನ್ನು ಅದನ್ನು ಮತಕ್ಕೆ ಹಾಕಲಾಗುತ್ತದೆ. ಬಹುಮತ ಸಿಗದೇ ಇದ್ದಲ್ಲಿ ಸ್ಪೀಕರ್ ಸ್ಥಾನದಿಂದ ರಮೇಶ್ ಕುಮಾರ್ ಕೆಳಗಿಳಿಯಬೇಕಾಗುತ್ತದೆ.

ಯಾಕೆ ಈ ಆಪರೇಷನ್?
ಅನರ್ಹಗೊಂಡ ಶಾಸಕರ ಪೈಕಿ ಹಳೆ ಮೈಸೂರು ಭಾಗದವರು ಇದ್ದಾರೆ. ಈ ಭಾಗದಲ್ಲಿ ಬಿಜೆಪಿಗೆ ಗಟ್ಟಿ ನೆಲೆ ಇಲ್ಲ. ಉಪಚುನಾವಣೆ ನಡೆದರೆ ಇಲ್ಲಿ ಜಯಗಳಿಸುವುದು ಅಷ್ಟು ಸುಲಭವಲ್ಲ. ಹೀಗಾಗಿ ಮತ್ತೆ ಶಾಸಕರನ್ನು ಸೆಳೆಯಲು ಬಿಜೆಪಿ ಮುಂದಾಗಿದೆ.

ಉತ್ತರ ಕರ್ನಾಟಕದಲ್ಲಿ ಬಿಜೆಪಿಯ ಹಿಡಿತ ಹೆಚ್ಚಿದೆ. ಅದರಲ್ಲೂ ಹಲವಾರು ಕ್ಷೇತ್ರಗಳಲ್ಲಿ ಲಿಂಗಾಯತರೇ ನಿರ್ಣಾಯಕರಾಗಿದ್ದಾರೆ. ಹೀಗಾಗಿ ಲಿಂಗಾಯತ ಶಾಸಕರನ್ನು ಸೆಳೆಯಲು ತೆರೆಮರೆಯಲ್ಲಿ ಪ್ರಯತ್ನ ನಡೆಸುತ್ತಿದೆ ಎನ್ನುವ ವಿಚಾರ ಮೂಲಗಳಿಂದ ಲಭ್ಯವಾಗಿದೆ.

ಒಂದು ವೇಳೆ ರಾಜೀನಾಮೆ ನೀಡಿರುವ ಶಾಸಕರು ಸೋತರೆ ಮತ್ತೆ ಸರ್ಕಾರ ಅಲ್ಪ ಮತಕ್ಕೆ ಕುಸಿಯಬಹುದು. ಈ ರೀತಿ ಆಗದಂತೆ ತಡೆಯಲು ಬಿಜೆಪಿ ಈಗ ಉತ್ತರ ಕರ್ನಾಟಕ ಭಾಗದ ಶಾಸಕರನ್ನು ಸೆಳೆಯಲು ಪ್ರಯತ್ನ ನಡೆಸುತ್ತಿದೆ. ಅತೃಪ್ತ ಶಾಸಕರ ಜೊತೆ ಸ್ನೇಹಿತರಾಗಿರುವ ಶಾಸಕರನ್ನು ಸೆಳೆಯಲು ಬಿಜೆಪಿ ಮುಂದಾಗಿದ್ದು, ಈಗಾಗಲೇ ಶಾಸಕರು ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ