
ಮುಂಬೈ:ವಾಣಿಜ್ಯ ಮಹಾನಗರಿ ಮುಂಬೈಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದ್ದು, ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದೆ. ನಗರದ ಹಲವು ಕಡೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ ಎಂದು ವರದಿ ತಿಳಿಸಿದೆ.
ಲೋಕಲ್ ರೈಲು ಸಂಚಾರ ವಿಳಂಬವಾಗಿದ್ದು ಕಚೇರಿ, ಶಾಲಾ, ಕಾಲೇಜಿಗೆ ತೆಳುವವರು ಪರದಾಡುವಂತಾಗಿದೆ. ದಾದರ್, ವಾಡ್ಲಾ, ಕುರ್ಲಾ, ಸೈಯನ್, ತಿಲಕ್ ನಗರ, ಅಂಧೇರಿ, ಸಾಂತಕ್ರೂಝ್, ಗೋರೆಗಾಂವ್, ಮಾಲ್ಡಾ ಸೇರಿದಂತೆ ಹಲವು ಪ್ರದೇಶಗಳು ಜಲಾವೃತವಾಗಿದೆ ಎಂದು ವರದಿ ವಿವರಿಸಿದೆ.
ಮಂಗಳವಾರ ಮಧ್ಯರಾತ್ರಿಯಿಂದ ಬುಧವಾರ ಬೆಳಗ್ಗೆ 7ಗಂಟೆವರೆಗೆ ದಾಖಲೆಯ 171.0 ಮಿಲಿ ಮೀಟರ್ ಮಳೆಯಾಗಿರುವುದಾಗಿ ಹವಾಮಾನ ಇಲಾಖೆ ತಿಳಿಸಿದೆ.