ಬಿಎಸ್​ವೈ ಹೇಳೋವರೆಗೂ ರೆಬೆಲ್ಸ್​ಗೆ ಮುಂಬೈವಾಸವೇ ಗತಿ?

ಬೆಂಗಳೂರು: ಕುಮಾರಸ್ವಾಮಿ ನೇತೃತ್ವದ ಮೈತ್ರಿಸರ್ಕಾರ ನಿನ್ನೆ ರಾತ್ರಿ ಪತನವಾಗಿದೆ. ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ರಚನೆಯಾಗುತ್ತಿದೆ. ಆದರೆ, ಮೈತ್ರಿ ಸರ್ಕಾರ ಉರುಳಲು ಕಾರಣವಾಗಿದ್ದ ಬಂಡಾಯ ಶಾಸಕರ ಮುಂದಿನ ಹೆಜ್ಜೆ ಏನು ಎಂಬ ಪ್ರಶ್ನೆ ಇದೆ. ನಿನ್ನೆ ಮುಂಬೈನಿಂದ ದೂರವಾಣಿ ಮೂಲಕ ಮಾತನಾಡಿದ ಜೆಡಿಎಸ್ ರೆಬೆಲ್ ಶಾಸಕ ಹೆಚ್. ವಿಶ್ವನಾಥ್ ಅವರು ಬುಧವಾರವೇ ಬೆಂಗಳೂರಿಗೆ ವಾಪಸ್ ಆಗುತ್ತೇವೆಂದು ಹೇಳಿದ್ದರು.

ಆದರೆ, ವರದಿಗಳ ಪ್ರಕಾರ ಅತೃಪ್ತ ಶಾಸಕರಿಗೆ ಇನ್ನೂ ಕೆಲ ದಿನಗಳ ಕಾಲ ಮುಂಬೈವಾಸವೇ ಗತಿಯಾಗಬಹುದು. ಸರ್ಕಾರ ಉರುಳಿಸಿದ ಖುಷಿ ಮತ್ತು ಸಂತೃಪ್ತಿಯಲ್ಲಿರುವ ಅತೃಪ್ತ ಶಾಸಕರಿಗೆ ಸದ್ಯಕ್ಕಂತೂ ತವರಿಗೆ ವಾಪಸ್ ಆಗುವ ಅದೃಷ್ಟ ಇದ್ದಂತಿಲ್ಲ.

ತಾನು ಸೂಚನೆ ನೀಡುವವರೆಗೂ ನೀವು ಮುಂಬೈನಲ್ಲೇ ಇರಿ. ಬೆಂಗಳೂರಿಗೆ ವಾಪಸ್ ಬರೋದು ಬೇಡ ಎಂದು ಬಿಎಸ್ ಯಡಿಯೂರಪ್ಪ ಅವರು ರಾಜೀನಾಮೆ ನೀಡಿದ ಶಾಸಕರಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆನ್ನಲಾಗಿದೆ.

ನಾಳೆ ಅಥವಾ ನಾಳಿದ್ದು ಯಡಿಯೂರಪ್ಪ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅದಾದ ಬಳಿಕ ಅವರು ಸದನದಲ್ಲಿ ವಿಶ್ವಾಸ ಮತ ಯಾಚಿಸುವ ಸಾಧ್ಯತೆ ಇದೆ. ಅಷ್ಟರೊಳಗೆ ಬಂಡಾಯ ಶಾಸಕರು ವಾಪಸ್ ಆಗಿಬಿಟ್ಟರೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಸೆಳೆಯುವ ಸಾಧ್ಯತೆ ಇಲ್ಲದಿಲ್ಲ ಎಂಬ ಭಯ ಬಿಜೆಪಿಗೆ ಇದೆ.
ಒಂದು ವೇಳೆ, ರಾಜೀನಾಮೆ ಅಂಗೀಕಾರವಾದರೆ ವಾಪಸ್ ಬನ್ನಿ. ಇಲ್ಲದಿದ್ದರೆ ತಾನು ಹೇಳೋವರೆಗೂ ವಾಪಸ್ ಬರಬೇಡಿ ಎಂದು ಬಿಎಸ್​ವೈಯಿಂದ ರೆಬೆಲ್ ಶಾಸಕರಿಗೆ ಸಂದೇಶ ರವಾನೆಯಾಗಿದೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ರೆಬೆಲ್ ಶಾಸಕರು ಅನಿವಾರ್ಯವಾಗಿ ಮುಂಬೈನಲ್ಲೇ ಇರುವುದನ್ನು ಮುಂದುವರಿಸಬೇಕಾಗುತ್ತದೆ. ಬಿಜೆಪಿ ಮುಖಂಡರ ಸೂಚನೆ ಪಾಲಿಸದೆ ಸದ್ಯಕ್ಕೆ ಅವರಿಗೆ ಬೇರೆ ದಾರಿ ಇಲ್ಲ.
ನಿನ್ನೆ ಸದನದಲ್ಲಿ ಸಿದ್ದರಾಮಯ್ಯ ಅವರು ಮಾತನಾಡುತ್ತಾ, ರಾಜೀನಾಮೆ ನೀಡಿದ ಶಾಸಕರನ್ನು ವಾಪಸ್ ಪಕ್ಷಕ್ಕೆ ಕರೆಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಖಡಾಖಂಡಿತವಾಗಿ ಘೋಷಿಸಿದ್ದರು. ಬಿಜೆಪಿಯವರು ಅತೃಪ್ತ ಶಾಸಕರನ್ನು ರಾಜಕೀಯ ಸಮಾಧಿಗೆ ತಳ್ಳುತ್ತಿದ್ದಾರೆಂದು ಡಿಕೆ ಶಿವಕುಮಾರ್ ಆರೋಪಿಸಿದ್ದರು. ಹಾಗೆಯೇ, ಮೈತ್ರಿಸರ್ಕಾರ ಬೀಳಲು ಕಾರಣವಾದ ಅತೃಪ್ತಿ ಅಸ್ತ್ರವೇ ಬಿಜೆಪಿಗೂ ತಿರುಗುಬಾಣವಾಗುತ್ತದೆ. ತಮ್ಮ ಸರ್ಕಾರದ ಆಯಸ್ಸು ಕೆಲವೇ ತಿಂಗಳು ಮಾತರ ಎಂದು ಮೈತ್ರಿಪಕ್ಷಗಳ ಮುಖಂಡರು ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ, ಯಡಿಯೂರಪ್ಪ ಅವರು ಬಹಳ ಎಚ್ಚರಿಕೆಯಿಂದ ಮುಂದಿನ ಹೆಜ್ಜೆಗಳನ್ನ ಇಡುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ