ಬೆಂಗಳೂರು, ಜು.24- ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಮೈತ್ರಿ ಸರ್ಕಾರ ಪತನಗೊಂಡ ನಂತರ ಎಚ್ಚೆತ್ತುಕೊಂಡಿರುವ ಅತೃಪ್ತ ಶಾಸಕರು ಎಚ್ಚರಿಕೆಯ ಹೆಜ್ಜೆ ಇಡಲು ಮುಂದಾಗಿದ್ದಾರೆ..!
ಬೆಂಗಳೂರಿಗೆ ಬಂದು ಪತ್ರಿಕಾಗೋಷ್ಠಿ ನಡೆಸುವ ಉದ್ದೇಶದಲ್ಲಿದ್ದ ಎಲ್ಲ 15 ಮಂದಿ ಶಾಸಕರು ಈಗ ತಮ್ಮ ನಿಲುವು ಬದಲಿಸಿದ್ದು, ಇನ್ನೂ ನಾಲ್ಕೈದು ದಿನ ಅಲ್ಲೇ ಉಳಿಯುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ತಿಳಿದುಬಂದಿದೆ.
ಸ್ಪೀಕರ್ ರಮೇಶ್ಕುಮಾರ್ ಅವರು ಸುಪ್ರೀಂಕೋರ್ಟ್ಗೆ ರಾಜೀನಾಮೆ ಅಥವಾ ಅನರ್ಹತೆ ಕುರಿತು ವರದಿ ನೀಡಿದ್ದಾರೆ ಎಂದು ತಿಳಿದುಬಂದಿದ್ದು, ಅದಕ್ಕಾಗಿ ಅಲ್ಲಿ ನಡೆಯುವ ಕಾನೂನು ಪ್ರಕ್ರಿಯೆಗಳನ್ನು ಎದುರು ನೋಡುತ್ತಿರುವ ಅತೃಪ್ತ ಶಾಸಕರು ಯಾವುದಕ್ಕೂ ತಮ್ಮ ಮುಂದಿನ ರಾಜಕೀಯ ನಡೆ ಬಗ್ಗೆ ಚರ್ಚೆಯಲ್ಲಿ ತೊಡಗಿದ್ದಾರೆ.
ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರು ಅಧಿಕಾರ ವಹಿಸಿಕೊಂಡು ಬಹುಮತ ಸಾಬೀತುಪಡಿಸುವವರೆಗೂ ಬೆಂಗಳೂರಿಗೆ ಬರದಿರಲು ಇವರುಗಳು ನಿರ್ಧರಿಸಿದ್ದಾರೆ ಎಂದು ವಿಶ್ವಸನೀಯ ಮೂಲಗಳು ಖಚಿತಪಡಿಸಿವೆ.
ಮೈತ್ರಿಕೂಟದ ನಾಯಕರು ಹೊಸ ತಂತ್ರಗಾರಿಕೆಗೆ ಇಳಿಯಬಹುದು.ಸ್ವಲ್ಪಮಟ್ಟಿನ ಏರುಪೇರಾದರೂ ಮತ್ತೆ ರಾಜಕೀಯ ಬಿಕ್ಕಟ್ಟು ಎದುರಾಗಿ ಅದು ಮತ್ತಾವ ದಿಕ್ಕು ತಲುಪುತ್ತದೆಯೋ ಎಂಬ ಎಚ್ಚರಿಕೆಯ ಸಂದೇಶದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.