ಇಂದಾದರೂ ಅಂತ್ಯವಾಗುತ್ತಾ ರಾಜಕೀಯ ಹೈಡ್ರಾಮಾ?

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಹೈಡ್ರಾಮಾ 22 ದಿನಗಳ ಯಶಸ್ವಿ ಪ್ರದರ್ಶನ ಕಂಡಿದೆ. ಇದಕ್ಕೆ ಇತಿಶ್ರೀ ಹಾಡಬೇಕೆಂದು ಶುಕ್ರವಾರದ ಕಲಾಪದಲ್ಲಿ ಸೋಮವಾರ ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಮಾಡಬೇಕೆಂದು ದಿನ ನಿಗದಿಗೊಳಿಸಿದ್ದರು. ಈಗಾಗಲೇ ಸ್ಪೀಕರ್ ಮತ್ತು ರಾಜ್ಯಪಾಲರು ನೀಡಿದ ಗಡುವುಗಳು ಮುಗಿದ ಹಿನ್ನೆಲೆಯಲ್ಲಿ ನಿನ್ನೆ ಏನೇ ಆದರೂ ವಿಶ್ವಾಸಮತ ಯಾಚನೆ ಆಗಲೇಬೇಕೆಂದು ಸ್ಪೀಕರ್ ರಮೇಶ್ ಕುಮಾರ್ ಪಟ್ಟುಹಿಡಿದ್ದರು. ಹೀಗಾಗಿ, ರಾತ್ರಿ 11.30ರವರೆಗೂ ಕಲಾಪ ಮುಂದುವರೆಸಲಾಗಿತ್ತು

ಆದರೆ, ಬೆಳಗ್ಗೆಯಿಂದಲೂ ಚರ್ಚೆಯಲ್ಲಿ ತೊಡಗಿಸಿಕೊಂಡ ಆಡಳಿತ ಪಕ್ಷಗಳ ಶಾಸಕರು ತಮಗೆ ಮಾತನಾಡಲು ಅವಕಾಶ ನೀಡಬೇಕೆಂದು ಹಠ ಹಿಡಿದರು. ಇದರ ನಡುವೆ ನಿನ್ನೆ ಸಂಜೆ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿಯಾದ ಜೆಡಿಎಸ್​- ಕಾಂಗ್ರೆಸ್​ ನಾಯಕರು ಇನ್ನೊಂದೇ ಒಂದು ದಿನ ಸಮಯಾವಕಾಶ ನೀಡುವಂತೆ ಮನವಿ ಮಾಡಿಕೊಂಡರು. ಅದಕ್ಕೆ ಒಪ್ಪದ ಸ್ಪೀಕರ್, ನಾನು ಈಗಾಗಲೇ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದೇನೆ. ಇದು ನನ್ನ ಮತ್ತು ನನ್ನ ಸ್ಥಾನದ ಗೌರವದ ಪ್ರಶ್ನೆ. ಹೀಗಾಗಿ, ಇಂದು ರಾತ್ರಿ ಎಷ್ಟು ಹೊತ್ತಾದರೂ ಪರವಾಗಿಲ್ಲ. ವಿಶ್ವಾಸಮತ ಯಾಚನೆ ಆಗಲೇಬೇಕೆಂದು ಪಟ್ಟುಹಿಡಿದಿದ್ದರು. ಇತ್ತ ಬಿಜೆಪಿ ಶಾಸಕರು ಕೂಡ ಸ್ಪೀಕರ್ ಅವರನ್ನು ಭೇಟಿಯಾಗಿ ಇಂದು ವಿಶ್ವಾಸಮತ ಯಾಚನೆ ಪ್ರಕ್ರಿಯೆಯನ್ನು ಮುಗಿಸುವಂತೆ ಮನವಿ ಮಾಡಿದ್ದರು.

ರಾತ್ರಿ 10 ಗಂಟೆಯಾದರೂ ಕಲಾಪ ಮುಗಿಯುವ ಸಾಧ್ಯತೆ ಕಾಣದಿದ್ದಾಗ ಶಾಸಕರೆಲ್ಲ ಊಟಕ್ಕೆ ಬೇಡಿಕೆಯಿಟ್ಟರು. ಕೊನೆಗೆ, ಅಧಿವೇಶನದಲ್ಲಿ ಪಾಲ್ಗೊಂಡ ಎಲ್ಲರಿಗೂ ಊಟದ ವ್ಯವಸ್ಥೆ ಕಲ್ಪಿಸಲಾಯಿತು. ಊಟದ ನಂತರ ಮತ್ತೆ ಅಧಿವೇಶನ ಆರಂಭವಾಯಿತು. ಆದರೆ, 11.30ರ ವೇಳೆಗೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ‘ನಾವು ಇಂದೇ ವಿಶ್ವಾಸಮತ ಯಾಚನೆ ಮಾಡುತ್ತೇವೆ ಎಂದು ಮಾತುಕೊಟ್ಟಿದ್ದೆವು. ವಿಪ್ ಬಗ್ಗೆ ಚರ್ಚೆ ಬಳಿಕ ನಿರ್ಧರಿಸಬೇಕೆಂದುಕೊಂಡಿದ್ದೆವು. ನಾಳೆ ಮತ ಹಾಕಿ ಮುಕ್ತಾಯ ಮಾಡೋಣ’ ಎಂದು ಮನವಿ ಮಾಡಿದರು. ಇದರಿಂದಾಗಿ ಸ್ಪೀಕರ್ ತಮ್ಮ ಪಟ್ಟನ್ನು ಸಡಿಲಗೊಳಿಸಿ ಇಂದು ಸಂಜೆ 4 ಗಂಟೆಯೊಳಗೆ ವಿಶ್ವಾಸಮತ ಸಾಬೀತುಪಡಿಸಲೇಬೇಕು ಎಂದು ಅಂತಿಮ ಗಡುವು ನೀಡಿದ್ದಾರೆ.

ಇಂದು ಬೆಳಗ್ಗೆ 10 ಗಂಟೆಗೆ ವಿಧಾನಸಭೆ ಕಲಾಪ ಆರಂಭವಾಗಲಿದೆ. ನಿನ್ನೆ ಸ್ಪೀಕರ್ ವಿಪ್ ಜಾರಿಗೊಳಿಸಲು ರಾಜಕೀಯ ಪಕ್ಷಗಳಿಗೆ ಅಧಿಕಾರವಿದೆ. ಅದು ಮಾನ್ಯವಾಗಲಿದೆ ಎಂದು ಹೇಳಿದ್ದರು. ಹೀಗಾಗಿ, ಕಾಂಗ್ರೆಸ್​ ಸಚಿವ ಡಿ.ಕೆ. ಶಿವಕುಮಾರ್ ನಿನ್ನೆ ಸಂಜೆ ಅತೃಪ್ತ ಶಾಸಕರಿಗೆ ಇಂದು ಬೆಳಗ್ಗೆ 11 ಗಂಟೆಯೊಳಗೆ ಕಲಾಪಕ್ಕೆ ಹಾಜರಾಗದೆ ಇದ್ದರೆ ಅನರ್ಹಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇಂದು ಸುಪ್ರೀಂಕೋರ್ಟ್​ನಲ್ಲಿ ವಿಪ್ ಕುರಿತ ಅರ್ಜಿ ವಿಚಾರಣೆಯೂ ಇರುವುದರಿಂದ ಕಾಂಗ್ರೆಸ್​ ಮತ್ತು ಜೆಡಿಎಸ್​ ನಾಯಕರು ಸರ್ಕಾರವನ್ನು ಉಳಿಸಿಕೊಳ್ಳುವ ಕೊನೆಯ ಭರವಸೆಯಲ್ಲಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ