ಅತೃಪ್ತರ ಮನವೊಲಿಕೆಗೆ ಸಿಎಂ, ಡಿಕೆಶಿಯಿಂದ ರಾತ್ರಿಯಿಡೀ ಪ್ರಯತ್ನ

ಬೆಂಗಳೂರು: ದೋಸ್ತಿ ಸರ್ಕಾರ ಉಳಿಸಿಕೊಳ್ಳಲು ಸಿಎಂ ಹಾಗೂ ಸಚಿವ ಡಿ.ಕೆ ಶಿವಕುಮಾರ್ ಅವರು ರಾತ್ರಿಯೆಲ್ಲಾ ಕಾರ್ಯಾಚರಣೆಗೆ ಇಳಿದಿದ್ದಾರೆ.

ಸಿಎಂ ಹಾಗೂ ಡಿ.ಕೆ ಶಿವಕುಮಾರ್ ಅವರು ರಾತ್ರಿ ಅತೃಪ್ತರ ಮನೆಗೆ ಹೋಗಿ ಅವರ ಮನವೊಲಿಸಲು ಪ್ರಯತ್ನಿಸಿದ್ದಾರೆ. ಅಲ್ಲದೆ ನಿಮ್ಮ ಯಜಮಾನರಿಗೆ ವಾಪಸ್ ಬಂದು ಬಿಡಲು ಹೇಳಿ. ಇಲ್ಲದೇ ಹೋದರೆ 6 ವರ್ಷಗಳ ಕಾಲ ಅವರು ಅನರ್ಹರಾಗುತ್ತಾರೆ. ಅವರು ಈಗ ಬರದಿದ್ದರೆ ಮುಂದೆ ಪಶ್ಚಾತ್ತಾಪ ಪಡಬೇಕಾಗುತ್ತೆ ಎಂದು ಡಿಕೆಶಿ ಎಚ್ಚರಿಕೆ ನೀಡಿದ್ದಾರೆ.

ಡಿಕೆ ಶಿವಕುಮಾರ್ ಅವರು ಎಲ್ಲಾ ಅತೃಪ್ತ ಶಾಸಕರ ಕುಟುಂಬದವನ್ನು ಸಂಪರ್ಕಸಿದ್ದಾರೆ. ನಮ್ಮ ಕುಟುಂಬದವರನ್ನು ಭೇಟಿ ಆಗುತ್ತಿದ್ದಾರೆ ಎಂಬ ವಿಚಾರ ತಿಳಿದ ತಕ್ಷಣ ಅತೃಪ್ತ ಶಾಸಕರು ಸ್ಪೀಕರ್ ಕಚೇರಿಗೆ ಪತ್ರ ರವಾನಿಸಿದ್ದಾರೆ.

ಪತ್ರದಲ್ಲಿ ನಾವು ಈಗಾಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆ. ರಾಜೀನಾಮೆಯನ್ನು ಶೀಘ್ರವೇ ಅಂಗೀಕರಿಸಬೇಕೆಂದು ನಾವು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದೇವೆ. ಇದರ ನಡುವೆ ನಮ್ಮ ಪಕ್ಷದ ಕಡೆಯಿಂದ ಅನರ್ಹತೆ ಅರ್ಜಿ ನಿಮ್ಮ ಬಳಿ ಬಂದಿದೆ ಅಂತ ಗೊತ್ತಾಗಿದೆ ಎಂದು ಉಲ್ಲೇಖಿಸಿದ್ದಾರೆ.

ಅನರ್ಹತೆ ವಿಚಾರ ಸಂಬಂಧ ಪಕ್ಷದ ಕಡೆಯಿಂದ ಯಾವುದೇ ನೋಟಿಸ್ ಬಂದಿಲ್ಲ. ಆದರೆ ಇಂದು ನೀವು ಹಾಜರಾಗಿ ಎಂದು ನೋಟಿಸ್ ನೀಡಿದ್ದೀರಿ. ಕೆಲ ಅನಿವಾರ್ಯ ಕಾರಣಗಳಿಂದ ನಾವು ಹೊರಗಡೆ ಇದ್ದು ನಿಮ್ಮ ಪ್ರಶ್ನೆ ಉತ್ತರಿಸಲು ನಮಗೆ 4 ವಾರಗಳ ಸಮಯ ಬೇಕು ಎಂದು ಸ್ಪೀಕರ್ ಅವರಿಗೆ ಅತೃಪ್ತ ಶಾಸಕರು ಪತ್ರ ಬರೆದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ