ಗಂಟೆ ಹನ್ನೊಂದಾದರೂ ಸದನಕ್ಕೆ ಹಾಜರಾಗದ ಮೈತ್ರಿ ನಾಯಕರು; ಕೆಂಡಾಮಂಡಲವಾದ ಕೆ.ಎಸ್. ಈಶ್ವರಪ್ಪ!

ಬೆಂಗಳೂರು; ಸೋಮವಾರದ ಸದನ ರಾತ್ರಿ 11 ಗಂಟೆವರೆಗೆ ನಡೆದಿತ್ತು. ವೇಳೆ ಸದನವನ್ನು ಮಂಗಳವಾರಕ್ಕೆ ಮುಂದೂಡಿದ್ದ ಸ್ಪೀಕರ್ ರಮೇಶ್ ಕುಮಾರ್ ಬೆಳಗ್ಗೆ 10 ಗಂಟೆಗೆ ಸದನ ಕಲಾಪಕ್ಕೆ ಸಮಯ ನಿಗದಿ ಮಾಡಿದ್ದರು. ಆದರೆ, ಸಮಯಕ್ಕೆ ಸರಿಯಾಗಿ ವಿರೋಧ ಪಕ್ಷದ ಎಲ್ಲಾ ನಾಯಕರೂ ಸದನಕ್ಕೆ ಆಗಮಿಸಿದ್ದರೂ ಸಹ ಆಡಳಿತ ಪಕ್ಷದ ನಾಯಕರು ಸರಿಯಾದ ಸಮಯಕ್ಕೆ ಆಗಮಿಸಿರಲಿಲ್ಲ. ಪರಿಣಾಮ ವಿರೋಧ ಪಕ್ಷದ ನಾಯಕರು ಕೆಂಡಾಮಂಡಲರಾಗಿದ್ದರು.

ಈ ವೇಳೆ ವಿರೋಧ ಪಕ್ಷದ ನಡೆಯ ವಿರುದ್ಧ ಎದ್ದು ನಿಂತು ತನ್ನ ಖಂಡನೆಯನ್ನು ವ್ಯಕ್ತಪಡಿಸಿದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, “ಸಭಾಧ್ಯಕ್ಷರು ನಿಗದಿ ಮಾಡಿದ ಸಮಯಕ್ಕೆ ಸದಸ್ಯರು ಬಂದು ಮಾತನಾಡಬೇಕೋ? ಅಥವಾ ಸದಸ್ಯರು ಬಂದಾಗ ಸದನ ನಡೆಯಬೇಕೋ? 10 ಗಂಟೆಗೆ ಸದನ ಕಲಾಪ ಆರಂಭ ಎಂದು ಸ್ಪೀಕರ್ ಸಮಯ ನಿಗದಿ ಮಾಡಿದರೂ, ಮೈತ್ರಿ ಪಕ್ಷದ ನಾಯಕರು ಸದನಕ್ಕೆ ಹಾಜರಾಗದೆ ಇರುವುದು ಸದನಕ್ಕೆ ಅಗೌರವ ಸೂಚಕ.

ಇಂದು ಬಹುಮತ ನಿರ್ಣಯದ ಮೇಲೆ ಚರ್ಚೆ ಇದೆ. ಬಹುಮತವನ್ನು ಮತಕ್ಕೆ ಹಾಕುವ ಪ್ರಕ್ರಿಯೆ ಇದೆ. ಆದರೆ, ಜವಾಬ್ದಾರಿಯುತ ಸಿಎಂ ಆಗಲಿ ಅವರ ಪಕ್ಷದ ಸದಸ್ಯರಾಗಲಿ ಈವರೆಗೆ ಸದನಕ್ಕೆ ಆಗಮಿಸಿಲ್ಲ. ನಾವು ಆಡಳಿತ ಪಕ್ಷಕ್ಕೆ ಸಹಕಾರ ನೀಡುವ ಸಲುವಾಗಿ ಏನೂ ಮಾತನಾಡದೆ ಸುಮ್ಮನೆ ಕುಳಿತಿದ್ದೇವೆ. ನನ್ನ ರಾಜಕೀಯ ಜೀವನದಲ್ಲೇ ಇದೇ ಮೊದಲ ಬಾರಿಗೆ ನಾನು ಬಾಯಿ ಮುಚ್ಚಿಕೊಂಡು ಕುಳಿತಿದ್ದೇನೆ. ಆದರೆ, ನಮ್ಮ ತಾಳ್ಮೆಗೂ ಒಂದು ಮಿತಿ ಇದೆ” ಎಂದು ಅವರು ಗುಡುಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ