ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನಗಳು ಈ ಹಿಂದೆಯೂ ನಡೆದಿದೆ-ಶಾಸಕ ಸಿ.ಟಿ.ರವಿ

ಬೆಂಗಳೂರು,ಜು.22-ಶಾಸಕರನ್ನು ಸೆಳೆದು ರಾಜೀನಾಮೆ ಕೊಡಿಸಿ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನಗಳು ಈ ಹಿಂದೆಯೂ ನಡೆದಿದೆ. ಈಗ ನೈತಿಕತೆಯ ಪಾಠ ಮಾಡುತ್ತಿರುವ ನಾಯಕರು ಕೂಡ ಒಂದಲ್ಲ ಒಂದು ಹಂತದಲ್ಲಿ ಈ ರೀತಿಯ ರಾಜಕಾರಣವನ್ನು ಮಾಡಿದ್ದಾರೆ. ಆಗೆಲ್ಲ ರಾಜನೀತಿ ಎಂದು ಬಣ್ಣಿಸಲಾಗುತ್ತಿದ್ದ ರಾಜಕಾರಣವನ್ನು ಈಗ ನೈತಿಕತೆಯ ಮೇಲೆ ಪ್ರಶ್ನಿಸಲಾಗುತ್ತಿದೆ ಎಂದು ಬಿಜೆಪಿಯ ಶಾಸಕ ಸಿ.ಟಿ.ರವಿ ಆರೋಪಿಸಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಮಾಜಿ ಪ್ರಧಾನಿ ದೇವೇಗೌಡರು 20 ಮಂದಿ ಶಾಸಕರಿಂದ ಸಹಿ ಮಾಡಿಸಿ ಎಸ್.ಆರ್.ಬೊಮ್ಮಾಯಿ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡಿದ್ದರು. ಅದನ್ನು 2006ರಲ್ಲಿ ಸಿದ್ದರಾಮಯ್ಯ ಬಹಿರಂಗ ವೇದಿಕೆಯಲ್ಲಿ ಟೀಕೆ ಮಾಡಿದ್ದರು.

ಇತ್ತೀಚೆಗೆ ಸಿದ್ದರಾಮಯ್ಯ ಅವರೇ ಜೆಡಿಎಸ್ ಶಾಸಕರಾದ ಚೆಲುವರಾಯಸ್ವಾಮಿ, ಜಮೀರ್ ಅಹಮ್ಮದ್ ಖಾನ್ ಮತ್ತಿತರರನ್ನು ಸೆಳೆದುಕೊಂಡು ತಮ್ಮ ಪಕ್ಷಕ್ಕೆ ಸೇರಿಸಿಕೊಂಡರು.ಆಗೆಲ್ಲ ನೈತಿಕತೆ, ರಾಜನೀತಿ ರಾಜಕಾರಣ ಪ್ರಶ್ನೆಯಾಗಲಿಲ್ಲವೇ?ಈಗ ನೈತಿಕತೆಯ ಪಾಠ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ನಾಯಕತ್ವದ ವಿರುದ್ಧ ಅಸಮಾಧಾನ, ಅತೃಪ್ತಿ ಹೆಚ್ಚಾದಾಗ ನಾಯಕರ ಸ್ವಾರ್ಥ ಮಿತಿ ಮೀರಿದಾಗ ಶಾಸಕರು ಬಂಡಾಯ ಏಳುವುದು ಸಾಮಾನ್ಯ.ಪ್ರತಿ ಹಂತದಲ್ಲೂ ಈ ರೀತಿಯ ರಾಜಕೀಯ ಪಲ್ಲಟಗಳು ಆಗಿವೆ ಎಂದರು.

ಆಪರೇಷನ್ ಕಮಲಕ್ಕೆ 1500 ಕೋಟಿ ಖರ್ಚು ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪ ಮಾಡಿರುವುದು ಎಟುಕದ ದ್ರಾಕ್ಷಿ ಹುಳಿ ಎಂಬ ನರಿಯ ಕಥೆಗೆ ಅನ್ವಯಿಸುತ್ತದೆ.ಒಂದೆಡೆ ರಾಜೀನಾಮೆ ನೀಡಿರುವ ಶಾಸಕರಿಗೆ ವಿಪ್ ವಿಧಿಸುತ್ತಾರೆ, ಮತ್ತೊಂದೆಡೆ ಮನವೊಲಿಸುವ ಪ್ರಯತ್ನವನ್ನೂ ಮಾಡುತ್ತಾರೆ, ಹಣಕಾಸು ವಹಿವಾಟು ನಡೆದಿದೆ ಎಂದು ಆರೋಪ ಮಾಡುವ ಮೂಲಕ ಅವರದೇ ಪಕ್ಷದ ರಾಮಲಿಂಗಾರೆಡ್ಡಿ ಹಾಗೂ ಮತ್ತಿತರ ಶಾಸಕರು ಖರೀದಿಗೊಳಪಡುವವರು ಎಂಬ ಅರ್ಥದಲ್ಲಿ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಹಾಗೆಂದ ಮೇಲೆ ಅಂಥವರಿಗೆ ಟಿಕೆಟ್ ನೀಡಲು ಕೆಪಿಸಿಸಿ ಅಧ್ಯಕ್ಷರು ಎಷ್ಟು ಕಮೀಷನ್ ಪಡೆದಿದ್ದರು ಎಂಬ ಪ್ರಶ್ನೆಯನ್ನು ದಿನೇಶ್‍ಗುಂಡೂರಾವ್ ಹುಟ್ಟು ಹಾಕಿದ್ದಾರೆ ಎಂದು ತಿರುಗೇಟು ನೀಡಿದರು.

ವಿಧಾನಸಭೆಯಲ್ಲಿ ಉದ್ದೇಶಪೂರ್ವಕವಾಗಿ ವಿಶ್ವಾಸ ಮತಯಾಚನೆಯನ್ನು ವಿಳಂಬ ಮಾಡಲಾಗುತ್ತಿದೆ. ಕಳೆದ 15 ದಿನಗಳಿಂದಲೂ ಯಾವ ರೀತಿ ನಡೆದಿದೆ ಎಂಬುದನ್ನು ನೋಡುತ್ತಾ ಬಂದಿದ್ದೇವೆ. ಸದನದಲ್ಲಿ ಇರುವ ಶಾಸಕರ ವಿರುದ್ದ ಆರೋಪ ಮಾಡಬೇಕಾದರೆ ಪೂರ್ವಭಾವಿಯಾಗಿ ನೋಟಿಸ್ ನೀಡಬೇಕು.ಆದರೆ ಬಿಜೆಪಿಯ ಮೂವರ ವಿರುದ್ಧ ಏಕಾಏಕಿ ಆರೋಪ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸದನದಲ್ಲಿ ಸೋಮವಾರ ವಿಶ್ವಾಸ ಮತಯಾಚನೆಯನ್ನು ಪೂರ್ಣಗೊಳಿಸುತ್ತೇವೆ ಎಂದು ಸಿದ್ದರಾಮಯ್ಯ, ರಮೇಶ್‍ಕುಮಾರ್ ಆದಿಯಾಗಿ ಎಲ್ಲರೂ ಹೇಳಿಕೆ ನೀಡಿದರು. ಆದರೆ ನಿನ್ನೆ ಶಾಸಕಾಂಗ ಸಭೆಯಲ್ಲಿ ಸಿದ್ದರಾಮಯ್ಯನವರು ಮಾತನಾಡಿ, ಸೋಮವಾರವೇ ವಿಶ್ವಾಸ ಮತಯಾಚನೆ ಮಾಡುವುದಿಲ್ಲ. ಇನ್ನಷ್ಟು ವಿಳಂಬ ಮಾಡುತ್ತೇವೆ ಎಂಬ ಹೇಳಿಕೆ ನೀಡಿರುವುದಾಗಿ ತಿಳಿದುಬಂದಿದೆ.

ಈ ರೀತಿಯ ಧೋರಣೆಗಳನ್ನು ಜನ ಗಮನಿಸುತ್ತಿದ್ದಾರೆ.ನಮಗೆ ಮಾತನಾಡಲು ಬರುವುದಿಲ್ಲ ಎಂದೇನಲ್ಲ. ತಾಳ್ಮೆಯಿಂದ ಕಾದು ನೋಡುತ್ತಿದ್ದೇವೆ ಎಂದು ಹೇಳಿದರು.
ವಿಪ್ ಕುರಿತು ಸ್ಪಷ್ಟನೆ ನೀಡುವಂತೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆತ್ತಿಕೊಳ್ಳಲು ಸುಪ್ರೀಂಕೋರ್ಟ್ ನಿರಾಕರಿಸಿದೆ.ಈ ಮೂಲಕ ರಾಜ್ಯದ ವಿದ್ಯಮಾನಗಳನ್ನು ನ್ಯಾಯಾಲಯ ಗಮನಿಸುತ್ತಿದೆ.ಇವರು ಮನಸೋ ಇಚ್ಛೆ ನಡೆದುಕೊಂಡು ಪ್ರಜಾಪ್ರಭುತ್ವದ ಕತ್ತು ಹಿಸುಕಲು ಪ್ರಯತ್ನಿಸಿದರೆ ಅದು ಸಾಧ್ಯವಾಗುವುದಿಲ್ಲ ಎಂದು ಸಿ.ಟಿ.ರವಿ ಎಚ್ಚರಿಕೆ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ