ಐಎಂಎ ಪ್ರಕರಣವನ್ನು ಸಿಬಿಐಗೆ ವಹಿಸಬೇಕು-ಮಾಜಿ ಸಚಿವ ಸೊಗಡು ಶಿವಣ್ಣ

ತುಮಕೂರು,ಜು.22-ಐಎಂಎ ಬಹುಕೋಟಿ ರೂ. ವಂಚನೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಮಾಜಿ ಸಚಿವ ಸೊಗಡು ಶಿವಣ್ಣ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐಎಂಎ ಸಂಸ್ಥೆಯನ್ನು ನಂಬಿ ಸುಮಾರು 40 ಸಾವಿರಕ್ಕೂ ಹೆಚ್ಚು ಮಂದಿ ಹಣ ಹೂಡಿಕೆ ಮಾಡಿ ಇದೀಗ ಪಶ್ಚತ್ತಾಪ ಪಡೆಯುತ್ತಿದ್ದಾರೆ.ಅವರಿಗೆ ಇನ್ನು ನ್ಯಾಯಸಿಕ್ಕಿಲ್ಲ. ಸಿಬಿಐಗೆ ವಹಿಸುವ ಮೂಲಕ ಇವರಿಗೆ ನ್ಯಾಯ ಒದಗಿಸಬೇಕೆಂದು ಹೇಳಿದರು.
ಈ ವಂಚನೆ ಬಗ್ಗೆ ಯಾವೊಬ್ಬ ಜನಪ್ರತಿನಿಧಿಗಳಾಗಲಿ, ಅಧಿವೇಶನದಲ್ಲಿ ಮಾತನಾಡದಿರುವುದು ಶೋಚನೀಯ ಸಂಗತಿ.ಈ ಪ್ರಕರಣವನ್ನು ಸಿಬಿಐಗೆ ವಹಿಸುವ ಮೂಲಕ ಯಾರ್ಯಾರು ಪ್ರತಿಷ್ಠಿತ ವ್ಯಕ್ತಿಗಳು ಇದರಲ್ಲಿ ಭಾಗಿಯಾಗಿದ್ದಾರೆ ಎಂಬುದು ಹೊರಬರಲಿದೆ ಎಂದರು.

ಅಧಿವೇಶನದಲ್ಲಿ ಈ ಬಗ್ಗೆ ಯಾವೊಬ್ಬ ಸಚಿವರು, ಶಾಸಕರು ಮಾತನಾಡದಿರುವುದನ್ನು ಗಮನಿಸಿದರೆ ಈ ಹಗರಣದಲ್ಲಿ ಶಾಮೀಲಾಗಿದ್ದಾರೆ ಎಂಬ ಅನುಮಾನ ಮೂಡತ್ತದೆ. ತಕ್ಷಣವೇ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಅವರು ಒತ್ತಾಯಿಸಿದರು.
ರಾಜಕೀಯ ಅಸ್ಥಿರತೆ:
ರಾಜ್ಯದಲ್ಲಿ ಬಹುಮತವಿಲ್ಲದೆ ಸರ್ಕಾರವಿದೆ. ರಾಜಕೀಯ ಅಸ್ಥಿರತೆಯಿಂದ ಕೂಡಿದೆ, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ರಾಜ್ಯದಲ್ಲಿ ರೈತರ ಸ್ಥಿತಿ ಶೋಚನೀಯವಾಗಿದೆ. ಜಾನುವಾರುಗಳಿಗೆ ಮೇವು, ನೀರು ಇಲ್ಲ ಇತ್ಯಾದಿ ಸಮಸ್ಯೆಗಳು ತಾಂಡವವಾಡುತ್ತಿದ್ದು ಈ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಆರೋಪಿಸಿದರು.
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ತನ್ನದೇ ಆದ ಸ್ಥಾನಮಾನವಿದೆ.ಆದರೆ ಸರ್ಕಾರಕ್ಕೆ ಬಹುಮತವಿಲ್ಲ. ರಾಜ್ಯಪಾಲರು ಹಾಗೂ ನ್ಯಾಯಾಲಯಗಳ ಆದೇಶಕ್ಕೆ ಲೆಕ್ಕಕ್ಕಿಲ್ಲದಂತೆ ದೋಸ್ತಿ ಪಕ್ಷಗಳು ನಡೆದುಕೊಳ್ಳುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕೆ.ಪಿ.ಮಹೇಶ್, ವೆಂಕಟೇಶ್, ಶ್ರೀನಿವಾಸ್, ಜಯಸಿಂಹ ಮತ್ತಿತರರು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ