
ನವದೆಹಲಿ: ನಿನ್ನೆ ಹೃದಯಾಘಾತದಿಂದ ಸಾವನ್ನಪ್ಪಿದ್ದ ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ಅಂತಿಮ ಸಂಸ್ಕಾರ ಇಂದು ಮಧ್ಯಾಹ್ನ ನಡೆಯಲಿದೆ.
ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ 81 ವರ್ಷದ ಶೀಲಾ ದೀಕ್ಷಿತ್ ಸಾವನ್ನಪ್ಪಿದ್ದರು. ಕಾಂಗ್ರೆಸ್ನ ಹಿರಿಯ ನಾಯಕರು ಶೀಲಾ ದೀಕ್ಷಿತ್ ಅವರ ಮೃತದೇಹವನ್ನು ದೆಹಲಿಯ ನಿಜಾಮುದ್ದೀನ್ ನಗರದಲ್ಲಿರುವ ಅವರ ಮನೆಗೆ ಕೊಂಡೊಯ್ದಿದ್ದರು. ಅವರ ಸ್ವಗೃಹದಲ್ಲಿ ನಿನ್ನೆ ಮೃತದೇಹವನ್ನು ಸಾರ್ವಜನಿಕ ದರ್ಶನಕ್ಕಾಗಿ ಇರಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಡಿಸಿಎಂ ಮನೀಶ್ ಸಿಸೋಡಿಯಾ, ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ಮನೋಜ್ ತಿವಾರಿ, ಸೇರಿದಂತೆ ಹಲವು ರಾಜಕಾರಣಿಗಳು, ಗಣ್ಯರು ಮತ್ತು ಆತ್ಮೀಯರು ಮೃತರ ಮನೆಗೆ ತೆರಳಿ ಅಂತಿಮ ನಮನ ಸಲ್ಲಿಸಿದ್ದರು.
ಇಂದು ಬೆಳಗ್ಗೆ ಮೃತದೇಹವನ್ನು ಕಾಂಗ್ರೆಸ್ ಮುಖ್ಯ ಕಚೇರಿಗೆ ಕೊಂಡೊಯ್ಯಲಾಗುತ್ತದೆ. ಅಲ್ಲಿ ಅಂತಿಮ ನಮನ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಬಳಿಕ ಮಧ್ಯಾಹ್ನ 2.30ಕ್ಕೆ ನಿಗಂ ಬೋಧ್ ಘಾಟ್ನಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ. ಶೀಲಾ ದೀಕ್ಷಿತ್ ನಿಧನದ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಎರಡು ದಿನಗಳ ಕಾಲ ಶೋಕಾಚರಣೆ ಘೋಷಿಸಿದೆ.