ಅತೃಪ್ತ ಶಾಸಕರಿಂದ ಜಂಟಿ ಸುದ್ಧಿಗೋಷ್ಠಿ-ಯಾವುದೇ ಕಾರಣಕ್ಕೂ ರಾಜೀನಾಮೆ ಹಿಂಪಡೆಯುವುದಿಲ್ಲ

ಮುಂಬೈ, ಜು.21-ಎಷ್ಟೇ ಬಲವಂತ ಮಾಡಿದರೂ ಯಾವುದೇ ಕಾರಣಕ್ಕೂ ರಾಜೀನಾಮೆ ಹಿಂಪಡೆಯುವುದಿಲ್ಲ. ಸದ್ಯ ಬೆಂಗಳೂರಿಗೂ ಬರುವುದಿಲ್ಲ ಎಂದು ಅತೃಪ್ತ ಶಾಸಕರು ಸ್ಪಷ್ಟಪಡಿಸಿದ್ದಾರೆ.
ಮುಂಬೈನ ಹೋಟೆಲ್‍ನಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಎಷ್ಟೇ ಮನವೊಲಿಕೆ ಯತ್ನ ನಡೆಸಿದರೂ ನಾವು ಬಗ್ಗುವುದಿಲ್ಲ. ನಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ರಾಜೀನಾಮೆ ಹಿಂಪಡೆಯುವುದಿಲ್ಲ ಎಂದು ಪುನರುಚ್ಚರಿಸಿದ್ದಾರೆ.

ಶಾಸಕ ಎಚ್.ವಿಶ್ವನಾಥ್ ಮಾತನಾಡಿ, ಆಡಳಿತ ಪಕ್ಷದವರು ವಿಫಲ ಯತ್ನ ನಡೆಸುತ್ತಿದ್ದಾರೆ. ಯಾರೇ ಮುಖ್ಯಮಂತ್ರಿಯಾದರೂ ನಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ. ರಾಜೀನಾಮೆ ವಾಪಸ್ ಪಡೆಯುವುದಿಲ್ಲ ಎಂದು ಕಟ್ಟಿಮುರಿದಂತೆ ತಮ್ಮ ನಿರ್ಧಾರವನ್ನು ಪ್ರಕಟಿಸಿದರು.
ಸಚಿವ ಎಂ.ಟಿ.ಬಿ.ನಾಗರಾಜ್ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಯಾರೂ ತಮ್ಮನ್ನು ಸಂಪರ್ಕಿಸಿಲ್ಲ. ಒಂದು ವೇಳೆ ಸಂಪರ್ಕಿಸಿದರೂ ಮಾತನಾಡುವ ಪ್ರಶ್ನೆಯೇ ಇಲ್ಲ. ನಾವು ನೀಡಿರುವ ರಾಜೀನಾಮೆಯನ್ನು ವಿಧಾನಸಭಾಧ್ಯಕ್ಷರು ಅಂಗೀಕರಿಸಬೇಕೆಂದು ಒತ್ತಾಯಿಸುತ್ತೇವೆ ಎಂದರು.

ಯಾರೇ ಮುಖ್ಯಮಂತ್ರಿಯಾದರೂ ನಾವು ವಾಪಸ್ ಬರುವುದಿಲ್ಲ. ಖಂಡತುಂಡವಾಗಿ ಈ ಮಾತನ್ನು ಹೇಳುತ್ತಿರುವುದಾಗಿ ಸ್ಪಷ್ಟಪಡಿಸಿದರು.
ಸರ್ಕಾರ ಉಳಿಸಿಕೊಳ್ಳಲು ಊಹಾಪೆÇೀಹದ ಸುದ್ದಿಗಳನ್ನು ಹರಿಬಿಡಲಾಗುತ್ತಿದೆ.ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದರೂ ನಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ. ಸಿದ್ದರಾಮಯ್ಯ ಅಷ್ಟೇ ಅಲ್ಲ ಸಚಿವ ಡಿ.ಕೆ.ಶಿವಕುಮಾರ್, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಯಾರೇ ಮುಖ್ಯಮಂತ್ರಿಯಾದರೂ ನಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ ಎಂದರು.
ನಾವೆಲ್ಲ ಒಟ್ಟಾಗಿದ್ದೇವೆ. ಯಾವುದೇ ಗುಂಪಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಜೀನಾಮೆ ನೀಡಿ ಮುಂಬೈನ ರಿನೆಸೈನ್ಸ್ ಹೋಟೆಲ್‍ನಲ್ಲಿ ವಾಸ್ತವ್ಯ ಹೂಡಿರುವ ಕಾಂಗ್ರೆಸ್‍ನ ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜು, ಮುನಿರತ್ನ, ಬಿ.ಸಿ.ಪಾಟೀಲ್, ಶಿವರಾಮ್ ಹೆಬ್ಬಾರ್, ಪ್ರತಾಪ್‍ಗೌಡ ಪಾಟೀಲ್, ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಆನಂದ್‍ಸಿಂಗ್ ಹಾಗೂ ಜೆಡಿಎಸ್‍ನ ಗೋಪಾಲಯ್ಯ, ನಾರಾಯಣಗೌಡ ಸೇರಿದಂತೆ ಎಲ್ಲರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಮ್ಮಲ್ಲಿ ಯಾವುದೇ ಗುಂಪಿಲ್ಲ. ನಾವೆಲ್ಲ ಒಗ್ಗಟ್ಟಾಗಿದ್ದೇವೆ. ನಮ್ಮದು ಒಂದೇ ನಿಲುವಾಗಿದೆ.ಏನೇ ಆದರೂ ಸರಿ ನಾವು ರಾಜೀನಾಮೆ ಹಿಂಪಡೆಯುವುದಿಲ್ಲ ಎಂದು ಹೇಳಿದ್ದಾರೆ.

ಮುಂಬೈನಲ್ಲಿರುವ ಅತೃಪ್ತರ ಮನವೊಲಿಸುವ ಕಸರತ್ತು ಕೊನೆಕ್ಷಣದವರೆಗೂ ಮುಂದುವರೆದಿದೆ.
ನಾಳೆ ನಡೆಯಲಿರುವ ಅಧಿವೇಶನದಲ್ಲಿ ವಿಶ್ವಾಸ ಮತಯಾಚನೆ ಬಗ್ಗೆ ಚರ್ಚೆ ನಡೆಯಲಿದೆ.
ವಿಶ್ವಾಸಮತ ಯಾಚನೆ ಪ್ರಕ್ರಿಯೆಯನ್ನು ಮುಗಿಸುವುದಾಗಿ ಸ್ಪೀಕರ್ ರಮೇಶ್‍ಕುಮಾರ್ ಹೇಳಿದ್ದಾರೆ.ಪ್ರತಿಕ್ರಿಯೆಯನ್ನು ಮುಗಿಸಬೇಕೆಂದು ಪ್ರತಿಪಕ್ಷ ಬಿಜೆಪಿ ಪಟ್ಟು ಹಿಡಿದಿದೆ.ವಿಪ್ ಜಾರಿಗೊಳಿಸುವ ಬಗ್ಗೆ ಮತ್ತು ಸದನ ನಡೆಯುವಾಗ ವಿಶ್ವಾಸ ಮತಯಾಚನೆಗೆ ರಾಜ್ಯಪಾಲರು ಗಡುವು ವಿಧಿಸಿರುವ ಬಗ್ಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಸುಪ್ರೀಂಕೋರ್ಟ್ ಮೊರೆ ಹೋಗಿದೆ.

ನಾಳೆ ಅಧಿವೇಶನದಲ್ಲಿ ಏನಾಗುತ್ತದೆಯೋ, ಸುಪ್ರೀಂಕೋರ್ಟ್‍ನಲ್ಲಿ ಯಾವ ತೀರ್ಪು ಹೊರ ಬೀಳಲಿದೆಯೋ ಕಾದು ನೋಡಬೇಕಾಗಿದೆ.
ಇತ್ತ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ತಮ್ಮ ತಮ್ಮ ಶಾಸಕರನ್ನು ರೆಸಾರ್ಟ್‍ನಲ್ಲಿ ಇಟ್ಟುಕೊಂಡಿದ್ದಾರೆ.ಅತೃಪ್ತ ಶಾಸಕರು ಮುಂಬೈ ರೆಸಾರ್ಟ್‍ನಲ್ಲಿ ಹಲವು ದಿನಗಳಿಂದ ಬೀಡು ಬಿಟ್ಟಿದ್ದಾರೆ.ನಾಳೆ ವಿಶ್ವಾಸಮತಯಾಚನೆ ಪ್ರಕ್ರಿಯೆ ಪೂರ್ಣಗೊಳ್ಳುವ ಅನುಮಾನ ಕಾಡತೊಡಗಿದೆ.
ರಾಜ್ಯಪಾಲರು ನೀಡಿರುವ ಎರಡು ಬಾರಿಯ ಗಡುವನ್ನು ಮೀರಲಾಗಿದೆ. ಈ ಸಂಬಂಧ ರಾಜ್ಯಪಾಲರು ಕೇಂದ್ರಕ್ಕೆ ವರದಿಯನ್ನು ಕೂಡ ಕಳುಹಿಸಿದ್ದಾರೆ.
ಅತ್ತ ಕೇಂದ್ರ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂಬ ಆತಂಕವು ಕೂಡ ಎದುರಾಗಿದೆ. ಹೇಗಾದರೂ ಮಾಡಿ ಸರ್ಕಾರವನ್ನು ಉಳಿಸಬೇಕೆಂದು ಮೈತ್ರಿ ಪಕ್ಷದ ನಾಯಕರು ಹಲವು ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಅತೃಪ್ತ ಶಾಸಕರು ಮಾತ್ರ ತಮ್ಮ ಪಟ್ಟು ಸಡಿಲಿಸದಿರುವುದು ದೋಸ್ತಿಗೆ ಕಂಟಕವಾಗಿದೆ.
ಸುಪ್ರೀಂಕೋರ್ಟ್ ಏನಾದರೂ ಮೈತ್ರಿ ಸರ್ಕಾರಕ್ಕೆ ವರವಾಗಿ ಪರಿಣಮಿಸಲಿದೆಯೇ ಎಂಬ ಒಂದೇ ಒಂದು ನಿರೀಕ್ಷೆಯಲ್ಲಿ ಸರ್ಕಾರವಿದೆ.ನಾಳೆ ಏನಾಗಲಿದೆಯೋ ಕಾದು ನೋಡಬೇಕು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ