ನಡುರಾತ್ರಿವರೆಗೆ ಇಡಿ ಅಧಿಕಾರಿಗಳಿಂದ ಮನ್ಸೂರ್ ಖಾನ್​ ವಿಚಾರಣೆ; ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಎಂಎ ಜ್ಯುವೆಲ್ಸ್​ ಮಾಲೀಕ

ಬೆಂಗಳೂರು: ಬಹುಕೋಟಿ ವಂಚನೆ ಆರೋಪದಲ್ಲಿ ಐಎಂಎ ಜ್ಯುವೆಲ್ಸ್​ ಕಂಪನಿ ಮಾಲೀಕ ಮನ್ಸೂರ್ಖಾನ್ನನ್ನು ಈಗಾಗಲೇ ಬಂಧಿಸಲಾಗಿದೆ. ಇಡಿ ವಶದಲ್ಲಿರುವ ಮನ್ಸೂರ್ಖಾನ್ನನ್ನು ನಿನ್ನೆ ತಡರಾತ್ರಿಯವರೆಗೆ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ವೇಳೆ ಹಲವು ಸ್ಫೋಟಕ ಮಾಹಿತಿಗಳನ್ನು ಮನ್ಸೂರ್ಖಾನ್ಬಿಚ್ಚಿಟ್ಟಿದ್ದಾನೆ.

1,000ಕ್ಕೂ ಹೆಚ್ಚು ಕೋಟಿ ರೂ. ವ್ಯವಹಾರಗಳ ಬಗ್ಗೆ ಮಾಹಿತಿ ನೀಡಿರುವ ಮನ್ಸೂರ್​ ಖಾನ್ ರಾಜಕೀಯ ಮುಖಂಡರು ತನ್ನಿಂದ ಹಣ ಪಡೆದ ಬಗ್ಗೆಯೂ ತಿಳಿಸಿದ್ದಾನೆ. ಅಲ್ಲದೆ, ಕೆಲವು ಸರ್ಕಾರಿ ಅಧಿಕಾರಿಗಳ ಹೆಸರು ಕೂಡ ಪ್ರಸ್ತಾಪ ಮಾಡಿದ್ದು, ಬ್ಯಾಂಕ್ ವ್ಯವಹಾರಗಳು ನಡೆದಿರುವ ಬಗ್ಗೆ ದಾಖಲೆಗಳನ್ನು ನೀಡಿದ್ದಾನೆ. ನಿನ್ನೆ ರಾತ್ರಿ ಶಾಂತಿನಗರದ ಇಡಿ ಕಚೇರಿಯಲ್ಲಿ ಜಂಟಿ ನಿರ್ದೇಶಕ ರಮಣ್ ಗುಪ್ತ , ಎಸಿಪಿ ತ್ಯಾಗರಾಜನ್ ವಿಚಾರಣೆ ನಡೆಸಿದ್ದಾರೆ.

ಶಾಂತಿನಗರದ ಇಡಿ ಕಚೇರಿಯಲ್ಲೇ ರಾತ್ರಿ ಕಳೆದಿರುವ ಮನ್ಸೂರ್​ ಖಾನ್​ ಭದ್ರತೆಗೆ ವಿಲ್ಸನ್ ಗಾರ್ಡನ್ ಪೊಲೀಸ್​ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿತ್ತು. ಕೆಎಸ್ ಆರ್ ಪಿ ತುಕಡಿಯನ್ನು ಕೂಡ ಇಡಿ ಕಚೇರಿ ಬಳಿ ನಿಯೋಜನೆ ಮಾಡಲಾಗಿತ್ತು. ಇಂದು ಕೂಡ ಐಎಂಎ ಹಗರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ ವಿಚಾರಣೆ ನಡೆಯಲಿದೆ. ಮನ್ಸೂರ್ ಖಾನ್​​ನನ್ನು ನಿನ್ನೆ ಒಂದನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್​​ಗೆ ಹಾಜರುಪಡಿಸಲಾಯಿತು. ನಂತರ ಆತನನ್ನು 3 ದಿನಗಳ ಕಾಲ ಇಡಿ ವಶಕ್ಕೆ ನೀಡಿದೆ.

ಬಹುಕೋಟಿ ವಂಚನೆ ಪ್ರಕರಣದಲ್ಲಿ ಸಾಕಷ್ಟು ತನಿಖೆ ನಡೆಸುವ ಅಗತ್ಯತೆ ಇದೆ. ಹಾಗಾಗಿ, ಮನ್ಸೂರ್​ ಖಾನ್​ನನ್ನು 15 ದಿನ ವಶಕ್ಕೆ ನೀಡುವಂತೆ ಎಸ್​ಐಟಿ ಕೋರಿತ್ತು. ಆದರೆ, ಇಡಿ ಪ್ರಾಥಮಿಕ ಹಂತದ ತನಿಖೆ ನಡೆಸುತ್ತಿದೆ. ಹಾಗಾಗಿ ಮನ್ಸೂರ್​ನನ್ನು ಇಡಿ ವಶಕ್ಕೆ ನೀಡಿದೆ. ಸಮಯದ ಅಭಾವವಿರುವುದರಿಂದ ಇಡಿ ಅಧಿಕಾರಿಗಳು ನಿನ್ನೆ ರಾತ್ರಿಯೇ  ಹೇಳಿಕೆ ಪಡೆದಿದ್ದಾರೆ.

ಉನ್ನತ್ತ ಹುದ್ದೆಯಲ್ಲಿರುವ ಅಧಿಕಾರಿಗಳಿಗೆ ಹಣ ನೀಡಿರುವ ಬಗ್ಗೆ ಮನ್ಸೂರ್​ ಖಾನ್​ ಹೇಳಿಕೆ ನೀಡಿರುವುದರಿಂದ ಇಂದು ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ಇಡಿ ಅಧಿಕಾರಿಗಳು ಪಡೆಯಲಿದ್ದಾರೆ.  2 ಸಾವಿರ ಕೋಟಿ ರೂ. ವಂಚನೆ ಮಾಡಿ ದುಬೈನಲ್ಲಿ ತಲೆಮರೆಸಿಕೊಂಡಿದ್ದ ಮೊಹಮ್ಮದ್​ ಮನ್ಸೂರ್​ ಖಾನ್​ ದೆಹಲಿಯಲ್ಲಿ ಇಡಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದ. ತನಗೆ ಆರೋಗ್ಯ ಸರಿಯಿಲ್ಲದ ಕಾರಣ ವಿಶ್ರಾಂತಿ ಪಡೆಯುತ್ತಿದ್ದೆ ಎಂದು ವಿಡಿಯೋ ಮಾಡಿ ಪೊಲೀಸ್​ ಕಮಿಷನರ್​ಗೆ ಕಳುಹಿಸಿದ್ದ ಮನ್ಸೂರ್​ ಖಾನ್,​ ಕಳೆದ ಭಾನುವಾರ 24 ಗಂಟೆಗಳಲ್ಲಿ ಬೆಂಗಳೂರಿಗೆ ವಾಪಾಸ್​ ಆಗುವುದಾಗಿ ತಿಳಿಸಿದ್ದ. ಆದರೆ, ಆತ ಸುಳ್ಳು ಹೇಳಿದ್ದಾನೆಂದು ಗೊತ್ತಾಗುತ್ತಿದ್ದಂತೆ ಎಸ್​ಐಟಿ ಅಧಿಕಾರಿಗಳು ಮತ್ತೆ ಚುರುಕಾಗಿದ್ದರು.

ಗುರುವಾರ ಮಧ್ಯರಾತ್ರಿ ದುಬೈನಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಮನ್ಸೂರ್​ ಆಗಮಿಸಿದ್ದ. ದೆಹಲಿಗೆ ಬರುತ್ತಿದ್ದಂತೆ ವಶಕ್ಕೆ ಪಡೆಯಲು ಯೋಚಿಸಿದ್ದ ಎಸ್​ಐಟಿಗೂ ಮುನ್ನವೇ ಇಡಿ ಅಧಿಕಾರಿಗಳು ಮನ್ಸೂರ್​ನನ್ನು ವಶಕ್ಕೆ ಪಡೆದಿದ್ದರು. ಮನ್ಸೂರ್ ಭಾರತಕ್ಕೆ ಬರುವ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿದ ಎಸ್ಐಟಿಯ ಒಂದು ತಂಡ ದೆಹಲಿ ಏರ್ಪೋರ್ಟ್ ನಲ್ಲಿ ಬೀಡು ಬಿಟ್ಟಿತ್ತು. ಆದರೆ,  ಏರ್​ಪೋರ್ಟ್​ನಲ್ಲಿ ಇಮಿಗ್ರೇಷನ್​ ಅಧಿಕಾರಿಗಳು ಎಸ್ಐಟಿ ಬದಲಿಗೆ ಕೇಂದ್ರ ತನಿಖಾ ಸಂಸ್ಥೆ ಇಡಿ ವಶಕ್ಕೆ ಮನ್ಸೂರ್ ಖಾನ್​ನನ್ನು ನೀಡಿದ್ದರು. ಮನ್ಸೂರ್ ಖಾನ್​ ವಿರುದ್ಧ ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಪ್ರಕರಣವನ್ನು ಸರ್ಕಾರ ಎಸ್ಐಟಿಗೆ ಈ ಪ್ರಕರಣದ ವಿಚಾರಣೆಯನ್ನು ವಹಿಸಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ