ನವದೆಹಲಿ: ರಾಜ್ಯದಲ್ಲಿ ಸೃಷ್ಟಿಯಾಗಿರುವ ಸಾಂವಿಧಾನಿಕ ರಾಜಕೀಯ ಬಿಕ್ಕಟ್ಟಿನಿಂದಾಗಿ ರಾಜ್ಯಪಾಲರು ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸ್ಸು ಮಾಡಲಿದ್ದಾರೆ ಎಂಬ ಮಾತುಗಳು ದಟ್ಟವಾಗಿ ಕೇಳಿಬರುತ್ತಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಾಳೆ ದೆಹಲಿಯಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆಯಲಿರುವ ಕೇಂದ್ರ ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ ಸಭೆ ಕುತೂಹಲ ಮೂಡಿಸಿದೆ. ಅಲ್ಲದೆ ಈ ಸಭೆಯಲ್ಲಿ ರಾಜ್ಯದ ಮೇಲೆ ರಾಷ್ಟ್ರಪತಿ ಅಳ್ವಿಕೆ ಹೇರುವ ಕುರಿತ ತೀರ್ಮಾನ ತೆಗೆದುಕೊಳ್ಳುವ ಎಲ್ಲಾ ಸಾಧ್ಯತೆಗಳೂ ಕಾಣಿಸುತ್ತಿವೆ ಎಂದು ಹೇಳಲಾಗುತ್ತಿದೆ. ಆದರೆ, ರಾಜ್ಯದ ರಾಜಕೀಯ ವಿಷಯದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸದಿರಲು ತೀರ್ಮಾನಿಸಿದೆ. ಹೀಗಾಗಿ ರಾಷ್ಟ್ರಪತಿ ಆಡಳಿತ ಹೇರಿಕೆ ಸಾಧ್ಯವೇ ಇಲ್ಲ. ಯಾವುದೇ ಕಾರಣಕ್ಕೂ ಇದು ಅಸಾಧ್ಯ ಎಂದು ಸರ್ಕಾರದ ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.
ಇಂದು ಮಧ್ಯಾಹ್ನ 1.30ರೊಳಗೆ ಬಹುಮತ ಸಾಬೀತು ಮಾಡುವಂತೆ ಸಿಎಂ ಕುಮಾರಸ್ವಾಮಿ ಅವರಿಗೆ ರಾಜ್ಯಪಾಲ ವಜುಭಾಯ್ ವಾಲಾ ನೆನ್ನೆ ಆದೇಶಿಸಿದ್ದರು. ಆದರೆ, ವಿಶ್ವಾಸಮತ ಯಾಚನೆ ನಿರ್ಣಯದ ಮೇಲೆ ಚರ್ಚೆಗೆ ಅವಕಾಶ ಬೇಕು ಎಂದ ಮುಖ್ಯಮಂತ್ರಿ ವಿಶ್ವಾಸಮತ ಯಾಚನೆಗೆ ಸಮಯ ಕೇಳಿದ್ದರು. ಯಾವಾಗ ಮಧ್ಯಾಹ್ನದೊಳಗೆ ವಿಶ್ವಾಸಮತ ಯಾಚಿಸಲಿಲ್ಲವೋ ಮತ್ತೆ ರಾಜ್ಯಪಾಲರು ಸಂಜೆಯೊಳಗೆ ಬಹುಮತ ಸಾಬೀತು ಮಾಡುವಂತೆ ಸಿಎಂಗೆ ಸೂಚಿಸಿ, ಪತ್ರ ಬರೆದರು. ಆದರೆ, ಆಗಲೂ ಸಿಎಂ ತಮ್ಮ ಮೊದಲ ಹೇಳಿಕೆಯನ್ನು ನೀಡಿದ್ದಾರೆ. ಒಟ್ಟಿನಲ್ಲಿ ರಾಜ್ಯಪಾಲರು ನೀಡಿದ ಎರಡು ಸಮಯದಲ್ಲೂ ಮೈತ್ರಿ ಸರ್ಕಾರ ವಿಶ್ವಾಸಮತ ಯಾಚಿಸಲಿಲ್ಲ. ತಮ್ಮ ಆದೇಶವನ್ನು ಉಲ್ಲಂಘಿಸಿದ್ದರಿಂದ ರಾಜ್ಯಪಾಲರು, ಕೇಂದ್ರಕ್ಕೆ ವರದಿ ಬರೆದಿದ್ದಾರೆ ಎನ್ನಲಾಗಿತ್ತು. ”ರಾಜ್ಯದ ಸಮ್ಮಿಶ್ರ ಸರ್ಕಾರಕ್ಕೆ ಬಹುಮತ ಇಲ್ಲ ಎಂಬ ವಿಚಾರ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಹೀಗಾಗಿ, ಬಹುಮತಯಾಚನೆಗೆ ಆದೇಶಿಸಿದ್ದರೂ ಸರ್ಕಾರ ಅದನ್ನು ಉಲ್ಲಂಘಿಸಿದೆ. ಇದರಿಂದ ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗಿದ್ದು, ಕೇಂದ್ರ ಮಧ್ಯಪ್ರವೇಶಿಸಬೇಕು” ಎಂದು ವರದಿ ಸಲ್ಲಿಸಿದ್ದಾರೆ ಎನ್ನಲಾಗುತ್ತಿದೆ.
ನಾಳೆ ಮೋದಿ ನೇತೃತ್ವದಲ್ಲಿ ನಡೆಯುವ ಸಂಪುಟ ಸಭೆಯಲ್ಲಿ ಕರ್ನಾಟಕ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಚರ್ಚಿಸಿ, ನಂತರ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆಗೆ ಶಿಫಾರಸ್ಸು ಮಾಡಲಾಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ, ಇದೀಗ ಸರ್ಕಾರದ ಉನ್ನತ ಮೂಲಗಳಿಂದ ಬಂದ ಮಾಹಿತಿ ಪ್ರಕಾರ, ರಾಜ್ಯದ ವಿಷಯದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸದಿರಲು ತೀರ್ಮಾನಿಸಿದೆಯಂತೆ. ಹೀಗಾಗಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಸಾಧ್ಯವೇ ಇಲ್ಲ ಎನ್ನಲಾಗುತ್ತಿದೆ.