ನಾವು ಯಾವುದೇ ಕಾರಣಕ್ಕೂ ರಾಜೀನಾಮೆ ಹಿಂಪಡೆಯುವುದಿಲ್ಲ-ಅತೃಪ್ತ ಶಾಸಕರು

ಮುಂಬೈ,ಜು.18-ಸರ್ಕಾರ ಉಳಿಸಿಕೊಳ್ಳಲು ದೋಸ್ತಿ ಪಕ್ಷಗಳ ಮುಖಂಡರು ಹರಸಾಹಸ ನಡೆಸುತ್ತಿರುವ ಬೆನ್ನಲ್ಲೇ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಭಿನ್ನಮತೀಯರು ಯಾವುದೇ ಕಾರಣಕ್ಕೂ ನಾವು ರಾಜೀನಾಮೆ ಹಿಂಪಡೆಯುವುದಿಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ.

ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿದ ಶಾಸಕರಾದ ಎಸ್.ಟಿ.ಸೋಮಶೇಖರ್, ಮುನಿರತ್ನ ಮತ್ತು ಭೆರತಿ ಬಸವರಾಜ್ ಅವರುಗಳು ನಾವು ರಾಜೀನಾಮೆಯನ್ನು ಹಿಂಪಡೆಯುವುದಿಲ್ಲ. ಮನವೊಲಿಸುವ ಪ್ರಯತ್ನವನ್ನು ಕೈಬಿಡಿ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಎಸ್.ಟಿ.ಸೋಮಶೇಖರ್ ಮಾತನಾಡಿ, ಕಾಂಗ್ರೆಸ್ ಹಿರಿಯ ಮುಖಂಡರಾದ ರಾಮಲಿಂಗಾರೆಡ್ಡಿ ಹಾಗೂ ನಾವು ಮೂವರು ಒಟ್ಟಿಗೆ ಮಾತುಕತೆ ನಡೆಸಿದ್ದೆವು. ನಂತರವೇ ನಾಲ್ವರೂ ಒಟ್ಟಿಗೆ ರಾಜೀನಾಮೆ ಪಡೆಯುವ ನಿರ್ಧಾರಕ್ಕೆ ಬಂದಿದ್ದೆವು. ಈಗ ಅವರು ರಾಜೀನಾಮೆಯನ್ನು ಹಿಂಪಡೆದಿದ್ದರೂ ನಾವು ಅವರನ್ನು ಅನುಸರಿಸುವುದಿಲ್ಲ ಎಂದು ಸ್ಪಷ್ಪಪಡಿಸಿದರು.

ಯಾವುದೇ ಕಾರಣಕ್ಕೂ ರಾಜೀನಾಮೆಯನ್ನು ಹಿಂಪಡೆಯುವುದಿಲ್ಲ. ನನ್ನ ಮೇಲೆ ನೂರಕ್ಕೆ ನೂರರಷ್ಟು ನಂಬಿಕೆಯಿಡಿ ಎಂದು ರಾಮಲಿಂಗಾರೆಡ್ಡಿ ಹೇಳಿದ್ದರು. ಈಗ ಯಾವುದೋ ಒತ್ತಡಕ್ಕೆ ಮಣಿದು ರಾಜೀನಾಮೆ ಹಿಂಪಡೆದಿದ್ದಾರೋ ಗೊತ್ತಿಲ್ಲ. ಆದರೆ ನಾವು ಮಾತ್ರ ನಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದೇವೆ ಎಂದು ಪುನರುಚ್ಚರಿಸಿದರು.

ಈಗಾಗಲೇ ನಾವು ಬಹುದೂರ ಸಾಗಿದ್ದೇವೆ ಮತ್ತೆ ಹಿಂತಿರುಗಿ ಬರುವ ಪ್ರಶ್ನೆಯೇ ಇಲ್ಲ. ತೆಗೆದುಕೊಂಡ ನಿರ್ಧಾರವನ್ನು ಮರುಪರಿಶೀಲನೆ ಮಾಡುವುದಿಲ್ಲ. ನಮ್ಮನ್ನು ಯಾರೊಬ್ಬರು ಮನವೊಲಿಸಬೇಕಾದ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ