ವಿಶ್ವಾಸ ಮತಯಾಚನೆ ವೇಳೆ-ಶಾಸಕರು ಯಾವುದೇ ಕಾರಣಕ್ಕೂ ಸಹನೆ ಕಳೆದುಕೊಳ್ಳಬಾರದು-ಮಾಜಿ ಸಿಎಂ ಯಡಿಯೂರಪ್ಪ

ಬೆಂಗಳೂರು,ಜು.18- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಧಾನಸಭೆಯಲ್ಲಿ ಇಂದು ವಿಶ್ವಾಸ ಮತಯಾಚನೆ ಮಾಡುವ ವೇಳೆ ಶಾಸಕರು ಯಾವುದೇ ಕಾರಣಕ್ಕೂ ಸಹನೆ ಕಳೆದುಕೊಳ್ಳದೆ ಶಾಂತ ರೀತಿಯಿಂದ ವರ್ತಿಸಬೇಕೆಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೀತಿ ಪಾಠ ಮಾಡಿದ್ದಾರೆ.

ವಿಧಾನಸೌಧದ ತಮ್ಮ ಕೊಠಡಿಯಲ್ಲಿ ಬೆಳಗ್ಗೆ ಕಲಾಪದಲ್ಲಿ ಭಾಗವಹಿಸುವ ಮುನ್ನ ಎಲ್ಲ ಶಾಸಕರಿಗೆ ಕೆಲ ನಿಮಿಷಗಳವರೆಗೂ ಸದನದಲ್ಲಿ ಹೇಗೆ ಇರಬೇಕೆಂಬುದರ ಕುರಿತು ಬಿಎಸ್‍ವೈ ಸೇರಿದಂತೆ ಮತ್ತಿತರರು ತಿಳಿ ಹೇಳಿದ್ದಾರೆ.

ಆಡಳಿತ ಪಕ್ಷದವರು ನಿಮ್ಮನ್ನು ಅನಗತ್ಯವಾಗಿ ಪ್ರಚೋದನೆ ಮಾಡುತ್ತಾರೆ. ನಮ್ಮ ವಿರುದ್ಧ ಅನೇಕ ಆರೋಪಗಳನ್ನು ಮಾಡುತ್ತಾರೆ. ನೀವು ಸಹನೆ ಕಳೆದುಕೊಂಡು ಅವರ ವಿರುದ್ಧ ರೊಚ್ಚುಗೇಳಬೇಕೆಂಬುದು ಅವರ ಉದ್ದೇಶವಾಗಿರುತ್ತದೆ. ಇದಕ್ಕೆ ಆಸ್ಪದ ಕೊಡದಂತೆ ಎಲ್ಲರೂ ಸಾವಧಾನವಾಗಿ ವರ್ತಿಸಬೇಕು ಎಂದು ಸಲಹೆ ಮಾಡಿದರು.

ಯಾರು ಎಷ್ಟೇ ಆರೋಪ ಮಾಡಿದರೂ, ನಿಮ್ಮ ಬಗ್ಗೆ ಏನೇ ಟೀಕೆ ಮಾಡಿದರೂ ನೀವು ತಲೆ ಕೆಡಿಸಿಕೊಳ್ಳಬೇಡಿ. ಒಂದು ವೇಳೆ ಅನುಚಿತವಾಗಿ ನೀವು ವರ್ತಿಸಿದರೆ ಇದನ್ನೇ ಆಧಾರವಾಗಿಟ್ಟುಕೊಂಡು ಕಲಾಪದಿಂದ ಅಮಾನತು ಮಾಡಬೇಕೆಂದು ಸ್ಪೀಕರ್ ಮೇಲೆ ಒತ್ತಡ ಹಾಕುತ್ತಾರೆ. ಇದಕ್ಕೆ ಅವಕಾಶ ಕೊಡಬಾರದೆಂದು ತಿಳಿಸಿದರು.

ಕಲಾಪ ಸುಗಮವಾಗಿ ನಡೆಯಲು ಎಲ್ಲರೂ ಕೈ ಜೋಡಿಸಬೇಕು. ವಿಶೇಷವಾಗಿ ಮೊದಲ ಬಾರಿ ಗೆದ್ದ ಶಾಸಕರು ಎದ್ದು ನಿಂತು ಮಾತನಾಡಬೇಕಾದ ಅಗತ್ಯವಿಲ್ಲ. ಸದನದಲ್ಲಿ ಯಾರು ಮಾತನಾಡಬೇಕು ಎಂಬುದು ಈಗಾಗಲೇ ತೀರ್ಮಾನವಾಗಿದೆ. ಎರಡು ದಿನ ಮೌನಕ್ಕೆ ಶರಣಾಗಿರಿ. ಸರ್ಕಾರ ರಚನೆಯಾಗುವರೆಗೂ ನಿಮ್ಮ ತಾಳ್ಮೆ ಮುಖ್ಯ ಎಂದು ಹೇಳಿದರು.

ಇದಕ್ಕೆ ಎಲ್ಲರೂ ಸಮ್ಮತಿ ಸೂಚಿಸಿದ್ದು, ಪಕ್ಷದ ಅನುಮತಿ ಇಲ್ಲದೆ ಕಲಾಪದಲ್ಲಿ ಮಾತನಾಡುವುದಿಲ್ಲ ಎಂದು ಒಕ್ಕೊರಲಿನಿಂದ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ