ಪಾಯಿಂಟ್ ಆಫ್ ಆರ್ಡರ್‍ಗೆ ಅವಕಾಶವೇ ಇಲ್ಲ-ಬಿಜೆಪಿ

ಬೆಂಗಳೂರು, ಜು.18-ವಿಶ್ವಾಸಮತ ಯಾಚನೆಯ ಉದ್ದೇಶಕ್ಕಾಗಿ ನಡೆದ ವಿಧಾನಸಭೆಯ ಕಲಾಪದಲ್ಲಿ ಸುಪ್ರೀಂಕೋರ್ಟ್‍ನ ಆದೇಶ ವಿಪ್ ಸಂಬಂಧಪಟ್ಟಂತಹ ಕಾನೂನಾತ್ಮಕ ಅಂಶಗಳ ಮೇಲೆಯೇ ಮಧ್ಯಾಹ್ನದವರೆಗೂ ಚರ್ಚೆ ನಡೆಯಿತು.

ಇಂದು ಬೆಳಗ್ಗೆ 11.15ಕ್ಕೆ ವಿಧಾನಸಭೆಯ ಕಲಾಪ ಆರಂಭಗೊಂಡಿತು. ಸಭಾಧ್ಯಕ್ಷ ರಮೇಶ್‍ಕುಮಾರ್, ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ವಿಶ್ವಾಸಮತ ಯಾಚನೆಗೆ ಅವಕಾಶ ಮಾಡಿಕೊಟ್ಟರು. ಕುಮಾರಸ್ವಾಮಿ ಸವಿವರವಾದ ಭಾಷಣ ಆರಂಭಿಸಿ ಮಧ್ಯಭಾಗದಲ್ಲಿ ಪಕ್ಷಾಂತರ ನಿಷೇಧ ಕಾಯ್ದೆಯ ಪ್ರಸ್ತಾಪ ಮಾಡಿದರು.

ಆಗ ಮಧ್ಯಪ್ರವೇಶ ಮಾಡಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಸದನಕ್ಕೆ ಗೈರು ಹಾಜರಾಗಿರುವ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ದೋಸ್ತಿ ಪಕ್ಷದ 15 ಮಂದಿ ಶಾಸಕರಿಗೆ ವಿಪ್ ನೀಡುವಂತಿಲ್ಲ. 15 ಶಾಸಕರನ್ನು ಸದನದಲ್ಲಿ ಭಾಗವಹಿಸುವಂತೆ ಒತ್ತಾಯಿಸುವಂತಿಲ್ಲ ಎಂದು ತೀರ್ಪು ನೀಡಲಾಗಿದೆ. ಈ ಆದೇಶದಿಂದ ಶಾಸಕಾಂಗ ಪಕ್ಷದ ನಾಯಕನಾದ ನನ್ನ ಹಕ್ಕುಚ್ಯುತಿಯಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.

ಅಲ್ಲಿಂದ ಆರಂಭವಾದ ಚರ್ಚೆ ಮಧ್ಯಾಹ್ನ 1.45ರವರೆಗೂ ಮುಂದುವರೆದಿತ್ತು. ಸಿದ್ದರಾಮಯ್ಯ ಅವರು ಕ್ರಿಯಾಲೋಪ (ಪಾಯಿಂಟ್ ಆಫ್ ಆರ್ಡರ್) ನಿಯಮಾವಳಿ 351ರಡಿ ವಿಷಯ ಪ್ರಸ್ತಾಪಿಸಿದರು. ಹಿರಿಯ ಶಾಸಕ ಎಚ್.ಕೆ.ಪಾಟೀಲ್, ಸಚಿವ ಕೃಷ್ಣಭೆರೇಗೌಡ ಅವರು ಸಿದ್ದರಾಮಯ್ಯ ಅವರ ಪಾಯಿಂಟ್ ಆಫ್ ಆರ್ಡರ್ ಮತ್ತಷ್ಟು ವಿಸ್ತರಿಸಿ ಹಲವಾರು ವಿಷಯಗಳನ್ನು ಪ್ರಸ್ತಾಪಿಸಿದರು. ಇದಕ್ಕೆ ಬಿಜೆಪಿ ಪಾಳಯದಿಂದ ಜೆ.ಸಿ.ಮಾಧುಸ್ವಾಮಿ, ಜಗದೀಶ್‍ಶೆಟ್ಟರ್, ಬಸವರಾಜ್ ಬೊಮ್ಮಾಯಿ ಮತ್ತಿತರರು ವಿರೋಧ ವ್ಯಕ್ತಪಡಿಸಿದರು. ವಿಶ್ವಾಸಮತಯಾಚನೆಯ ಮೂಲ ಉದ್ದೇಶದಿಂದ ಕಲಾಪ ನಡೆಯುತ್ತಿದೆ. ಇಲ್ಲಿ ಪಾಯಿಂಟ್ ಆಫ್ ಆರ್ಡರ್ ಮುಂದಿಟ್ಟುಕೊಂಡು ಸುಪ್ರೀಂಕೋರ್ಟ್‍ನ ತೀರ್ಪು, ವಿಪ್ ಉಲ್ಲಂಘನೆಯ ವಿಷಯಗಳನ್ನು ಚರ್ಚೆ ಮಾಡಲು ಸಾಧ್ಯವಿಲ್ಲ. ಪಾಯಿಂಟ್ ಆಫ್ ಆರ್ಡರ್‍ಗೆ ಅವಕಾಶವೇ ಇಲ್ಲ ಎಂದು ವಾದಿಸಿದರು.

ಮಧ್ಯಾಹ್ನ 1.45ರವರೆಗೂ ಪಾಯಿಂಟ್‍ಆಫ್ ಆರ್ಡರ್‍ನ ಮೇಲೆ ಚರ್ಚೆ ಬೇಕೋ ಬೇಡವೋ ಎಂಬ ವಿಷಯದ ಮೇಲೆ ವಾದ-ವಿವಾದವೇ ನಡೆಯಿತು.

ಆಡಳಿತ ಪಕ್ಷದ ಶಾಸಕರು ಬಿಜೆಪಿ ನಾಯಕರ ಹೇಳಿಕೆಗಳಿಗೆ ಆಕ್ರಮಣಕಾರಿಯಾಗಿ ಪ್ರತಿಕ್ರಿಯಿಸುತ್ತಿದ್ದರು. ಆದರೆ ವಿರೋಧಪಕ್ಷದ ಭಾಗದಿಂದ ಅತ್ಯಂತ ತಾಳ್ಮೆಯಿಂದ ಉತ್ತರಗಳು ಬರುತ್ತಿದ್ದವು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ