ರಾಜೀನಾಮೆ ನೀಡಿರುವ ಶಾಸಕರು ವಿಧಾನಸಭೆಯ ಸದಸ್ಯರೋ,ಅಲ್ಲವೋ-ತಿರ್ಮಾನಕ್ಕೆ ಒತ್ತಾಯಿಸಿದ ಸಚಿವ ಕೃಷ್ಣಭೈರೇಗೌಡ

ಬೆಂಗಳೂರು, ಜು.18-ವಿಶ್ವಾಸಮತಯಾಚನೆಗೂ ಮೊದಲು ಸದನಕ್ಕೆ ಗೈರು ಹಾಜರಾಗಿರುವ ಮತ್ತು ರಾಜೀನಾಮೆ ನೀಡಿರುವ 15 ಮಂದಿ ಶಾಸಕರು ವಿಧಾನಸಭೆಯ ಸದಸ್ಯರೋ, ಅಲ್ಲವೋ ಎಂಬ ತೀರ್ಮಾನವಾಗಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಕೃಷ್ಣಭೆರೇಗೌಡ ಒತ್ತಾಯಿಸಿದರು.

ವಿಧಾನಸಭೆಯಲ್ಲಿ ವಿಶ್ವಾಸಮತಯಾಚನೆ ವೇಳೆ ಮಾತನಾಡಿದ ಅವರು, ವಿಪ್ ಜಾರಿ ಅಥವಾ ಅದಕ್ಕೆ ಸೀಮಿತವಾದ ವಿಷಯ ಚರ್ಚೆಗಿಂತಲೂ 15 ಮಂದಿ ಶಾಸಕರು ಈ ಮನೆ ಸದಸ್ಯರು ಅಲ್ಲವೋ ಎಂಬುದು ಮೊದಲು ತೀರ್ಮಾನವಾಗಲಿ ಎಂದರು.

ಸದನದ ನಿಯಮಾವಳಿ 178 ಪ್ರಮಾಣವಚನ ಸ್ವೀಕಾರಕ್ಕೆ ಸಂಬಂಧಪಟ್ಟಿದ್ದರೆ, 190 ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ವಿಷಯ ಕುರಿತ ಮಾಹಿತಿ ನೀಡುತ್ತದೆ. ಈ ಎರಡೂ ಆಯಾಮಗಳನ್ನು ಬಿಟ್ಟು ಮೂರನೇ ಆಯಾಮಕ್ಕೆ ಅವಕಾಶವೇ ಇಲ್ಲ. ಈಗಿನ ಪರಿಸ್ಥಿತಿಯಲ್ಲಿ ಶಾಸಕರು ರಾಜೀನಾಮೆ ಕೊಟ್ಟಿರುವುದರಿಂದ ಗೊಂದಲ ಸೃಷ್ಟಿಯಾಗಿದೆ. ವಿಶ್ವಾಸಮತ ರಾಜ್ಯದ ಭವಿಷ್ಯವನ್ನು ನಿರ್ಧರಿಸುತ್ತದೆ. ಅಂತಹ ಸಂದರ್ಭದಲ್ಲಿ ಈ 15 ಮಂದಿ ಗೈರು ಹಾಜರಿ ಗಂಭೀರ ವಿಚಾರ. ಅವರನ್ನು ಬದಿಗಿಟ್ಟು ವಿಶ್ವಾಸಮತ ಯಾಚಿಸಿದರೆ ಅದು ಸಿಂಧುತ್ವವಾಗುತ್ತದೋ, ಇಲ್ಲವೋ ಎಂಬ ಅನುಮಾನವೂ ಕೂಡ ಮೂಡುತ್ತದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಎಚ್.ಕೆ.ಪಾಟೀಲ್, ಸಿದ್ದರಾಮಯ್ಯ ಹಾಗೂ ನಾನು ಈ ಮೊದಲು ಪ್ರಸ್ತಾಪಿಸಿರುವ ಕ್ರಿಯಾಲೋಪದಲ್ಲಿ ಸ್ಪೀಕರ್ ಅವರು ರೂಲಿಂಗ್ ಕೊಡಬೇಕು. ನಂತರ ಕೃಷ್ಣಭೆರೇಗೌಡ ಅವರು ಪ್ರಸ್ತಾಪಿಸಿರುವ ಪಾಯಿಂಟ್ ಆಫ್ ಆರ್ಡರ್‍ಗೆ ಉತ್ತರ ಕೊಡಲಿ ಎಂದರು.

ಈ ವೇಳೆ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಸದನದ ಇತಿಹಾಸದಲ್ಲಿ ಏಕಕಾಲಕ್ಕೆ ಎರಡು ಮೂರು ಪಾಯಿಂಟ್ ಆಫ್ ಆರ್ಡರ್‍ನ್ನು ಪ್ರಸ್ತಾಪಿಸಿದ್ದನ್ನು ನಾನು ಕೇಳಿಲ್ಲ. ಸಭಾಧ್ಯಕ್ಷರ ಸ್ಥಾನದ ಮೇಲೆ ನಮಗೆ ಗೌರವ ಇದೆ. ಸುಪ್ರೀಂಕೋರ್ಟ್ ಕೂಡ ಗೌರವ ವ್ಯಕ್ತಪಡಿಸಿದೆ. ಆದರೆ ಇಲ್ಲಿ ನಡೆಯುತ್ತಿರುವ ಚರ್ಚೆ ನೋಡಿದರೆ ನಮಗೆ ಅನುಮಾನ ಹುಟ್ಟುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಸವರಾಜ ಬೊಮ್ಮಾಯಿ ಮಾತನಾಡಿ, ಶಾಸಕರು ನೀಡಿರುವ ರಾಜೀನಾಮೆ ಅಂಗೀಕಾರವಾಗಿಲ್ಲ. ಸಭಾಧ್ಯಕ್ಷರು ಆ ಬಗ್ಗೆ ಅಂತಿಮ ನಿರ್ಣಯ ತೆಗೆದುಕೊಳ್ಳುವವರೆಗೂ ಅವರು ಈ ಮನೆಯ ಸದಸ್ಯರಾಗಿದ್ದಾರೆ.ಅದರಲ್ಲಿ ಅನುಮಾನಗಳೇಕೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ