ವಾತವರಣದಲ್ಲಿ ಬದಲಾವಣೆ ಹಿನ್ನಲೆ ಚುರುಕಾದ ಮುಂಗಾರು

ಬೆಂಗಳೂರು, ಜು.18-ವಾತಾವರಣದಲ್ಲಿ ಉಂಟಾಗಿರುವ ಬದಲಾವಣೆಯಿಂದಾಗಿ ಮುಂಗಾರು ಚುರುಕಾಗಿದ್ದು, ಜು.24ರವರೆಗೆ ಉತ್ತಮ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಜಿ.ಎಸ್.ಶ್ರೀನಿವಾಸರೆಡ್ಡಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದೆ. ಅರಬ್ಬೀ ಸಮುದ್ರದಲ್ಲಿ ಟ್ರಪ್ ನಿರ್ಮಾಣವಾಗಿದ್ದು, ಮೇಲ್ಮೈ ಸುಳಿಗಾಳಿಯೂ ಇದೆ. ಹೀಗಾಗಿ ದೊಡ್ಡ ಪ್ರಮಾಣದ ಮಳೆಯಾಗುವ ಸಾಧ್ಯತೆಗಳಿವೆ. ನಾಳೆಯಿಂದ ಮಳೆಯ ಪ್ರಮಾಣ ಹೆಚ್ಚಾಗಲಿದೆ. ಕಾವೇರಿ ಜಲಾನಯನ ಭಾಗದಲ್ಲೂ ಉತ್ತಮ ಮಳೆಯಾಗುವ ಮುನ್ಸೂಚನೆಗಳು ಕಂಡು ಬರುತ್ತಿವೆ ಎಂದರು.

ಕರಾವಳಿ, ಮಲೆನಾಡು ಹಾಗೂ ಕೊಡಗು ಭಾಗದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಗಳಿವೆ. ಅದೇ ರೀತಿ ದಕ್ಷಿಣ ಒಳನಾಡಿನಲ್ಲೂ ಉತ್ತಮ ಮಳೆಯಾಗುವ ಸಾಧ್ಯತೆಗಳಿವೆ. ಕಳೆದ ಒಂದೂವರೆ ತಿಂಗಳಿನಿಂದ ಮುಂಗಾರು ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೆ ಕೃಷಿ ಚಟುವಟಿಕೆ ಕುಂಠಿತಗೊಂಡಿತ್ತು. ವಾಡಿಕೆಗಿಂತ ಕಡಿಮೆ ಮಳೆಯಾಗಿರುವ ಕಡೆಗಳಲ್ಲಿ ಬಿತ್ತನೆ ಪ್ರಮಾಣವೂ ಕಡಿಮೆಯಾಗಿದೆ. ಒಟ್ಟಾರೆ ಇನ್ನೊಂದು ವಾರ ರಾಜ್ಯದಲ್ಲಿ ಮುಂಗಾರು ಚುರುಕಾಗಲಿದ್ದು, ಉತ್ತಮ ಮಳೆಯನ್ನು ನಿರೀಕ್ಷಿಸಬಹುದಾಗಿದೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ