ಟೋಕಿಯೋ, ಜು.18- ಜಪಾನಿನ ಕ್ಯೊಟೊ ಪ್ರಸಿದ್ದ ಅನಿಮೇಷನ್ ಚಿತ್ರಗಳ ನಿರ್ಮಾಣ ಸ್ಟುಡಿಯೋದಲ್ಲಿ ಗಲಭೆ ಮತ್ತು ಅಗ್ನಿಸ್ಪರ್ಶದಿಂದ 14ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದು, ಇತರ 18 ಜನರು ನಾಪತ್ತೆಯಾಗಿದ್ದಾರೆ.
ಗಲಭೆ, ದೊಂಬಿ ಮತ್ತು ಬೆಂಕಿ ಹಚ್ಚಿದ ಪ್ರಕರಣದಲ್ಲಿ 38 ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಕೆಲವರ ಸ್ಥಿತಿ ಶೋಚನೀಯವಾಗಿದೆ ಎಂದು ಕ್ಯೊಟೋ ಅಗ್ನಿ ಶಾಮಕ ದಳದ ಅಧಿಕಾರಿ ಸ್ಯಾಟೊಷಿ ಫುಜಿವರಾ ತಿಳಿಸಿದ್ದಾರೆ.
ಗಲಭೆ ನಂತರ ಅಗ್ನಿ ಸ್ಪರ್ಶದಿಂದ ಮೂರು ಅಂತಸ್ತುಗಳ ಕಟ್ಟಡ ಧಗಧಗಿಸಿ ಅದರಲ್ಲಿದ್ದ 14 ಮಂದಿ ಮೃತಪಟ್ಟರು. 38 ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಅಗ್ನಿ ಸ್ಪರ್ಶ ಮಾಡಿದ ಗಲಭೆಕೋರ ಸಹ ತೀವ್ರ ಗಾಯಗೊಂಡಿದ್ದು ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ.
ಸ್ಟುಡಿಯೋ ನೌಕರನೊಬ್ಬ ಈ ಕೃತ್ಯ ಎಸಗಿದ್ಧಾನೆ. ಸಂಸ್ಥೆಯ ಮುಖ್ಯಸ್ಥರೊಂದಿಗೆ ಜಗಳವಾಡಿದ ನಂತರ ಇಂದು ಬೆಳಗ್ಗೆ ಕಟ್ಟಡಕ್ಕೆ ದಹನಶೀಲ ದ್ರಾವಣಗಳನ್ನು ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.