ಒಲಿಂಪಿಕ್ಸ್‍ನ ಜಾವೆಲಿನ್ ಥ್ರೋನ ಫೈನಲ್‍ಗೆ ಲಗ್ಗೆ ಇಟ್ಟಿರುವ ಭಾರತದ ಶ್ರೇಷ್ಠ ಆಥ್ಲೀಟ್ ನೀರಜ್ ಚೋಪ್ರಾ ಪದಕ ಗೆಲ್ಲುವ ಆಸೆಯನ್ನು ಮೂಡಿಸಿದ್ದಾರೆ

ಟೋಕಿಯೋ, ಆ. 4- ಒಲಿಂಪಿಕ್ಸ್‍ನ ಜಾವೆಲಿನ್ ಥ್ರೋನ ಫೈನಲ್‍ಗೆ ಲಗ್ಗೆ ಇಟ್ಟಿರುವ ಭಾರತದ ಶ್ರೇಷ್ಠ ಆಥ್ಲೀಟ್ ನೀರಜ್ ಚೋಪ್ರಾ ಪದಕ ಗೆಲ್ಲುವ ಆಸೆಯನ್ನು ಮೂಡಿಸಿದ್ದಾರೆ.

ಇಂದಿಲ್ಲಿ ನಡೆದ ಜಾವೆಲಿನ್ ಥ್ರೋನ ಫೈನಲ್ ಅರ್ಹತೆ ಸುತ್ತಿನಲ್ಲಿ ಭಾರತದ ನೀರಜ್ ಚೋಪ್ರಾ ಮೊದಲ ಸುತ್ತಿನಲ್ಲೇ 86.65 ಮೀಟರ್ ದೂರ ಭರ್ಜಿಯನ್ನು ಎಸೆಯುವ ಮೂಲಕ ಫೈನಲ್‍ಗೆ ಅರ್ಹತೆ ಗಿಟ್ಟಿಸಿದರೆ, ವಿಶ್ವ ಶ್ರೇಷ್ಠ ನಂಬರ್ 1 ಆಟಗಾರ ಜರ್ಮನಿಯ ಜೋಹಾನ್ಸ್ ವೆಟರ್ ಮೂರನೆ ಎಸೆತದಲ್ಲಿ 85.64 ಮೀಟರ್ ಎಸೆಯುವ ಮೂಲಕ ಫೈನಲ್‍ಗೆ ಎಂಟ್ರಿ ಪಡೆದಿದ್ದಾರೆ.

ವೆಟರ್ ಮೊದಲ ಎಸೆತದಲ್ಲಿ 82.04 ಮೀಟರ್ ದೂರ ಇಟಿ (ಭರ್ಜಿ)ಯನ್ನು ಎಸೆದರೆ, ದ್ವಿತೀಯ ಎಸೆತದಲ್ಲಿ 82.08 ಮೀಟರ್ ಹಾಗೂ ಅಂತಿಮ ಎಸೆತದಲ್ಲಿ 85.64 ಮೀಟರ್ ದೂರ ಎಸೆದು ಫೈನಲ್‍ಗೆ ಲಗ್ಗೆ ಇಟ್ಟಿದ್ದಾರೆ.

ಜಾವೆಲಿನ್ ಥ್ರೋನ ಫೈನಲ್‍ಗೆ ಅರ್ಹತೆ ಗಿಟ್ಟಿಸಬೇಕಾದರೆ ಸ್ಪರ್ಧಿಗಳು 84.50 ಮೀಟರ್ ದೂರ ಭರ್ಜಿಯನ್ನು ಎಸೆಯಬೇಕಾಗಿತ್ತು ಆದರೆ ಭಾರತದ ನೀರಜ್ ಚೋಪ್ರಾ ಮೊದಲ ಎಸೆತದಲ್ಲೇ 86.65 ಮೀಟರ್ ದೂರ ಎಸೆಯುವ ಮೂಲಕ ಫೈನಲ್‍ಗೆ ಲಗ್ಗೆ ಇಟ್ಟಿದ್ದಾರಲ್ಲದೆ ಚೊಚ್ಚಲ ಒಲಿಂಪಿಕ್ಸ್‍ನಲ್ಲೇ ಪದಕ ಗೆಲ್ಲುವ ಹುಮ್ಮಸ್ಸು ಮೂಡಿಸಿದ್ದಾರೆ.

ವಿಶ್ವದ ನಂ. 1 ಶ್ರೇಯಾಂಕಿತ ಜಾವೆಲಿನ್ ಥ್ರೋವರ್ ಎನಿಸಿಕೊಂಡಿರುವ ಜರ್ಮನಿಯ ವೆಟರ್ ವೈಯಕ್ತಿಕವಾಗಿ 97.76 ಮೀಟರ್ ದೂರ ಭರ್ಜಿ ಎಸೆದಿದ್ದರೂ ಅವರ ಸವಾಲನ್ನು ಮೆಟ್ಟಿನಿಂತು ಫೈನಲ್ ಅರ್ಹತಾ ಸುತ್ತಿನಲ್ಲಿ ನಂಬರ್ 1 ಸ್ಥಾನ ಪಡೆದಿರುವ ಭಾರತದ ನೀರಜ್ ಚೋಪ್ರಾ ವೈಯಕ್ತಿಕವಾಗಿ 88.07 ಮೀಟರ್ ದೂರ ಭರ್ಜಿಯನ್ನು ಎಸೆಯುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.

ಈಗ ಫೈನಲ್‍ನಲ್ಲಿ ಚೋಪ್ರಾ ಮತ್ತೊಮ್ಮೆ ವೆಟರ್‍ಗೆ ಉತ್ತಮ ಸವಾಲನ್ನು ನೀಡುವ ಮೂಲಕ ಪದಕ ಗೆಲ್ಲುವತ್ತ ಚಿತ್ತ ಹರಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ