ಕಲಾಪದಲ್ಲಿ ವಿಸ್ತೃತ ಚರ್ಚೆಗೆ ಅವಕಾಶ : ಸ್ಪೀಕರ್ ರಮೇಶ್‍ಕುಮಾರ್

ಬೆಂಗಳೂರು, ಜು.18-ಸುಪ್ರೀಂಕೋರ್ಟ್ ಶಾಸಕರನ್ನು ಅಧಿವೇಶನದಲ್ಲಿ ಭಾಗವಹಿಸುವಂತೆ ಕಡ್ಡಾಯ ಮಾಡುವಂತಿಲ್ಲ ಎಂದು ತೀರ್ಪು ನೀಡಿದೆ. ಸದನದ ಸದಸ್ಯರ ಜವಾಬ್ದಾರಿಯನ್ನು ನೋಡಿಕೊಳ್ಳುವವರು ಯಾರು ಎಂಬ ಜಿಜ್ಞಾಸೆ ಕಾಡುತ್ತಿದ್ದು, ಅದಕ್ಕೆ ನಾನು ಉತ್ತರದಾಯಿ ಆಗಿದ್ದೇನೆ. ಹಾಗಾಗಿ ಕಲಾಪದಲ್ಲಿ ವಿಸ್ತೃತ ಚರ್ಚೆಗೆ ಅವಕಾಶ ನೀಡಿರುವುದಾಗಿ ಸ್ಪೀಕರ್ ರಮೇಶ್‍ಕುಮಾರ್ ತಿಳಿಸಿದರು.

ವಿಪ್ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಸಿದ್ದರಾಮಯ್ಯ ಅವರು ಪ್ರಸ್ತಾಪಿಸಿದ ಪಾಯಿಂಟ್ ಆಫ್ ಆರ್ಡರ್ ಮತ್ತು ಆಡಳಿತ ಪಕ್ಷದ ಇತರ ಸದಸ್ಯರ ಬೆಂಬಲಕ್ಕೆ ಬಿಜೆಪಿ ಸದಸ್ಯರಿಂದ ತೀವ್ರ ವಿರೋಧ ವ್ಯಕ್ತವಾಯಿತು.

ಮೊದಲು ವಿಶ್ವಾಸನಿರ್ಣಯದ ಬಗ್ಗೆ ಚರ್ಚೆಯಾಗಲಿ ಎಂದು ಬಿಜೆಪಿಯ ಸದಸ್ಯರು ಪಟ್ಟು ಹಿಡಿದರು.

ಸುಪ್ರೀಂಕೋರ್ಟ್ ತೀರ್ಪು ನೀಡಿದ್ದಾಗಿದೆ. ಆ ವಿಷಯವನ್ನು ಇಲ್ಲಿ ಪ್ರಸ್ತಾಪಿಸಲು ಅವಕಾಶ ಇಲ್ಲ. ಕಾಂಗ್ರೆಸ್ ಪಕ್ಷ ವಿಪ್ ನೀಡುವುದಾದರೆ ಯಾರೂ ಬೇಡ ಎಂದಿಲ್ಲ. ಆದರೆ ಅದೇ ವಿಷಯ ಮುಂದಿಟ್ಟುಕೊಂಡು ಅನಗತ್ಯ ಚರ್ಚೆ ಮಾಡಿ ಕಾಲಹರಣ ಮಾಡುವುದು ಬೇಡ ಎಂದು ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಬಿಜೆಪಿ ಶಾಸಕರಾದ ಜೆ.ಸಿ.ಮಾಧುಸ್ವಾಮಿ, ಕೆ.ಜಿ.ಬೋಪಯ್ಯ, ಬಸವರಾಜ ಬೊಮ್ಮಾಯಿ, ಸುರೇಶ್‍ಕುಮಾರ್ ಮತ್ತಿತರರು ಒತ್ತಾಯಿಸಿದರು.

ಪಾಯಿಂಟ್ ಆಫ್ ಆರ್ಡರ್ ನಿಯಮದಡಿ ವಿಷಯ ಚರ್ಚೆಗೆ ಅವಕಾಶ ಕೊಡಬೇಡಿ ಎಂದು ಮನವಿ ಮಾಡಿದರು.

ಆದರೆ ಬಿಜೆಪಿ ಶಾಸಕರ ಒತ್ತಾಯವನ್ನು ಪ್ರಶ್ನಿಸಿದ ಸ್ಪೀಕರ್ ಅವರು, ನಾನು ಯಾರಿಗೋ ಅನುಕೂಲ ಮಾಡಿಕೊಡಲು, ಅನಾನುಕೂಲ ಮಾಡಲು ಕೆಲಸ ಮಾಡುತ್ತಿಲ್ಲ. ಸಂವಿಧಾನದ ಚೌಕಟ್ಟನ್ನು ಬಿಟ್ಟು ಒಂದಗಲವೂ ಆಚೆ ಈಚೆ ಕದಲಲು ಅವಕಾಶ ಕೊಡುವುದಿಲ್ಲ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಸ್ತಾಪಿಸಿರುವ ಪಾಯಿಂಟ್ ಆಫ್ ಆರ್ಡರ್ ಅತ್ಯಂತ ಗಂಭೀರ ವಿಚಾರವಾಗಿದೆ. ಆ ಬಗ್ಗೆ ನಾನು ರೂಲಿಂಗ್ ನೀಡಿಲ್ಲ. ಆದರೆ ಶಾಸಕರನ್ನು ಅಧಿವೇಶನದಲ್ಲಿ ಭಾಗವಹಿಸುವಂತೆ ಬಲವಂತ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳುತ್ತಿದೆ. ಸಭಾಧ್ಯಕ್ಷರ ಕಚೇರಿಯಿಂದ ಎಲ್ಲ ಶಾಸಕರಿಗೂ ಅಧಿವೇಶನದ ದಿನಾಂಕ ಮತ್ತು ಸಮಯದ ಮಾಹಿತಿ ನೀಡಿ ಕಲಾಪದಲ್ಲಿ ಭಾಗವಹಿಸುವಂತೆ ಆಹ್ವಾನ ನೀಡುತ್ತೇವೆ. ಅವರನ್ನು ಕರೆತರುವುದು ನಮ್ಮ ಕರ್ತವ್ಯ ಅಲ್ಲ. ಶಾಸಕಾಂಗ ಪಕ್ಷದ ನಾಯಕರು ಆ ಕೆಲಸ ಮಾಡುವಂತಿಲ್ಲ ಎಂದು ನ್ಯಾಯಾಲಯ ಹೇಳಿದ ಮೇಲೆ ಈ ಜವಾಬ್ದಾರಿ ನಿಭಾಯಿಸುವುದು ಯಾರು ಎಂದು ಪ್ರಶ್ನಿಸಿದರು.

ಶಾಸಕಾಂಗ ಪಕ್ಷದ ನಾಯಕರು ಪ್ರಸ್ತಾಪಿಸಿರುವ ಪಾಯಿಂಟ್ ಆಫ್ ಆರ್ಡರ್‍ಗೆ ತಕ್ಷಣವೇ ಉತ್ತರ ನೀಡಲು ನಾನೇನು ಸರ್ವಜ್ಞ ಇಲ್ಲ. ಅಡ್ವೋಕೇಟ್ ಜನರಲ್ ಸೇರಿದಂತೆ ಕಾನೂನು ಪರಿಣಿತರ ಜೊತೆ ಚರ್ಚಿಸಿ ಉತ್ತರ ಹೇಳಬೇಕಿದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ