ಹೊಸದಿಲ್ಲಿ: ಇಡೀ ದೇಶವೆ ಕುತೂಹಲದಿಂದ ಕಾಯುತ್ತಿದ್ದ ಕರ್ನಾಟಕದ ಅತೃಪ್ತ ಶಾಸಕರ ಹಾಗೂ ಮೈತ್ರಿ ಸರ್ಕಾರದ ಹಣೆಬರಹವನ್ನು ನಿರ್ಧರಿಸುವ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ಇಂದು ಹೊರಬಿದ್ದಿದ್ದು, ಎರಡು ವಾಕ್ಯದ ಈ ಆದೇಶ ಇತಿಹಾಸ ನಿರ್ಮಿಸಿದೆ. ಈ ಆದೇಶದಿಂದ ಅತೃಪ್ತರಿಗೆ ಬಿಗ್ ರಿಲೀಫ್ ಸಿಕ್ಕಿದ್ದರೆ, ಮೈತ್ರಿ ಸರ್ಕಾರ ಮತ್ತೆ ಇಕ್ಕಟ್ಟಿಗೆ ಸಿಲುಕಿದಂತಾಗಿದೆ.
ನಿನ್ನೆಯ ವಾದ-ಪ್ರತಿವಾದದ ವೇಳೆ ಸ್ಪೀಕರ್ ಪರಮಾಧಿಕಾರದಲ್ಲಿ ಹಸ್ತಕ್ಷೇಪ ಮಾಡವ ಹಕ್ಕು ನ್ಯಾಯಾಲಯಕ್ಕಿಲ್ಲ ಎಂದು ಅಭಿಪ್ರಾಯಪಟ್ಟಿದ್ದ ಸುಪ್ರೀಂ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಇಂದು ನೀಡಲಿರುವ ಆದೇಶ ಮೈತ್ರಿ ಸರ್ಕಾರದ ಪರವಾಗಿರಲಿದೆ ಎಂದೇ ಎಲ್ಲರೂ ಭಾವಿಸಿದ್ದರು.
ಆದರೆ, ಇದಕ್ಕೆ ತದ್ವಿರುದ್ಧವಾಗಿ ತೀರ್ಪು ಪ್ರಕಟಿಸಿರುವ ಸುಪ್ರೀಂ ಮೈತ್ರಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಅಲ್ಲದೆ, ಸ್ಪೀಕರ್ ಪರಮಾಧಿಕಾರಕ್ಕೆ ಕೈ ಹಾಕಲ್ಲ ಎಂದು ಹೇಳುತ್ತಲೇ ಅತೃಪ್ತರ ರಾಜೀನಾಮೆ ಇತ್ಯರ್ಥಕ್ಕೆ ಸ್ಪೀಕರ್ ಅವರಿಗೆ ಕಾಲಮಿತಿ ನಿರ್ಣಯಗೊಳಿಸುವ ಮೂಲಕ ಅಡ್ಡಗೋಡೆ ಮೇಲೆ ದೀಪವಿಟ್ಟಿದೆ. ಅಲ್ಲದೆ, ಅಧಿವೇಶನದಲ್ಲಿ ಪಾಲ್ಗೊಳ್ಳುವುದು ಬಿಡುವುದು ಶಾಸಕರಿಗೆ ಬಿಟ್ಟ ವಿಚಾರ ಎಂದು ಹೇಳುವ ಮೂಲಕ ಅತೃಪ್ತರನ್ನು ವಿಪ್ ಕುಣಿಕೆಯಿಂದ ಪಾರು ಮಾಡಿ ಬಿಗ್ ರಿಲೀಫ್ ನೀಡಿದೆ.
ವಿಪ್ ಕುಣಿಕೆಯಿಂದ ಬಚಾವಾದ ರೆಬೆಲ್ಗಳು;
ಗುರುವಾರದ ರಾಜ್ಯದ ವಿಧಾನಮಂಡಲ ಅಧಿವೇಶನದಲ್ಲಿ ಸಿಎಂ ಕುಮಾರಸ್ವಾಮಿ ಬಹುಮತ ಸಾಬೀತುಪಡಿಸಲಿದ್ದಾರೆ. ಹೀಗಾಗಿ ಈ ಅಧಿವೇಶನದಲ್ಲಿ ಎಲ್ಲಾ ರೆಬೆಲ್ ಶಾಸಕರು ಭಾಗವಹಿಸಬೇಕು ಹಾಗೂ ಸರ್ಕಾರದ ಪರ ಮತ ಚಲಾಯಿಸಬೇಕು ಎಂದು ಮೈತ್ರಿ ಪಕ್ಷಗಳು ವಿಪ್ ಜಾರಿಗೊಳಿಸಿದ್ದವು.
ಆದರೆ, ಈ ಕುರಿತು ಸ್ಪಷ್ಟ ಆದೇಶ ನೀಡಿರುವ ಸುಪ್ರೀಂ, “ಅಧಿವೇಶನದ ಕಲಾಪದಲ್ಲಿ ಪಾಲ್ಗೊಳ್ಳುವುದು ಬಿಡುವುದು ಆಯಾ ಶಾಸಕರ ವಿವೇಚನೆಗೆ ಬಿಟ್ಟ ವಿಚಾರ, ಹೀಗಾಗಿ ಅವರನ್ನು ಅಧಿವೇಶನಕ್ಕೆ ಪಾಲ್ಗೊಳ್ಳಿ ಎಂದು ಒತ್ತಡ ಹೇರುವ ಹಕ್ಕು ಯಾರಿಗೂ ಇಲ್ಲ” ಎಂದು ಹೇಳುವ ಮೂಲಕ ರೆಬೆಲ್ ಶಾಸಕರಿಗೆ ಬಿಗ್ ರಿಲೀಫ್ ನೀಡಿದೆ. ಹೀಗಾಗಿ ರೆಬೆಲ್ಗಳು ನಾಳೆ ವಿಶ್ವಾಸಮತದಲ್ಲಿ ಪಾಲ್ಗೊಳ್ಳದಿದ್ದರೂ ವಿಪ್ ಕುಣಿಕೆಯಿಂದ ಬಚಾವಾಗಲಿದ್ದಾರೆ. ಸುಪ್ರೀಂ ನ ಈ ತೀರ್ಪಿನ ಮೂಲಕ ನಾಳೆ ಸರ್ಕಾರ ಬೀಳುವುದು ಬಹುತೇಕ ಖಚಿತ ಎನ್ನುವಂತಹ ವಾತಾವರಣ ನಿರ್ಮಾಣವಾಗಿದೆ.
ಕಾಲಮಿತಿಯೊಳಗೆ ಸ್ಪೀಕರ್ ರಾಜೀನಾಮೆಯನ್ನು ಇತ್ಯರ್ಥಪಡಿಸಲಿ;
ಸ್ಪೀಕರ್ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುವ ಹಕ್ಕು ಸುಪ್ರೀಂ ಕೋರ್ಟ್ಗೆ ಇಲ್ಲ ಎಂದು ಅಭಿಪ್ರಾಯ ಪಟ್ಟಿರುವ ಸುಪ್ರೀಂ ತ್ರಿಸದಸ್ಯ ಪೀಠ, ಇದೇ ಸಂದರ್ಭದಲ್ಲಿ ಅತೃಪ್ತರ ರಾಜೀನಾಮೆ ಅರ್ಜಿಯನ್ನು ಶೀಘ್ರದಲ್ಲಿ ಇತ್ಯರ್ಥಗೊಳಿಸಬೇಕು ಎಂದು ಹೇಳಿದೆ. ಇತ್ಯರ್ಥಕ್ಕೆ ಯಾವುದೇ ಕಾಲಮಿತಿ ನಿಗದಿಪಡಿಸದೆ ಇದ್ದರೂ ವಿಪ್ ನಿಂದ ಅತೃಪ್ತರನ್ನು ಬಚಾವ್ ಮಾಡಿರುವ ನ್ಯಾಯಾಲಯ ಪರೋಕ್ಷವಾಗಿ ರಾಜೀನಾಮೆ ವಿಚಾರ ಇಂದೇ ಇತ್ಯರ್ಥವಾಗುವಂತೆ ನೋಡಿಕೊಂಡಿದೆ.
ಅಲ್ಲದೆ, ಶಾಸಕರನ್ನು ಅನರ್ಹತೆಗೊಳಿಸುವ ವಿಚಾರ ಸ್ಪೀಕರ್ ಅವರ ವಿವೇಚನೆಗೆ ಬಿಟ್ಟ ವಿಚಾರವಾಗಿದ್ದು, ಈ ಕುರಿತು ಅವರೇ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದೆ.
ಇದರ ಹೊರತಾಗಿ ಸುಪ್ರೀಂ ಕೋರ್ಟ್ ಸ್ಪೀಕರ್ ಅವರಿಗೆ ಯಾವುದೇ ನಿರ್ದಿಷ್ಟ ಸೂಚನೆ ಅಥವಾ ನಿರ್ದೇಶನ ನೀಡಿಲ್ಲ. ಆದರೆ, ನಾಳೆ ನಡೆಯಲಿರುವ ವಿಶ್ವಾಸಮತ ಯಾಚನೆಯ ಕಲಾಪದಿಂದ ದೂರ ಉಳಿಯುವ ಸ್ವಾತಂತ್ರ್ಯವನ್ನು ರೆಬೆಲ್ ಶಾಸಕರಿಗೆ ಪರೋಕ್ಷವಾಗಿ ನೀಡಿರುವ ಸುಪ್ರೀಂ ಈ ಮೂಲಕ ಮೈತ್ರಿ ಸರ್ಕಾರವನ್ನು ಸಂಕಷ್ಟಕ್ಕೆ ದೂಡಿದೆ. ಹೀಗಾಗಿ ರೆಬೆಲ್ಗಳು ರಾಜೀನಾಮೆ ಅರ್ಜಿಗಳು ಇಂದೇ ತೀರ್ಮಾನವಾಗಲಿದೆಯೇ? ಸ್ಪೀಕರ್ ಕೈಗೊಳ್ಳಬಹುದಾದ ಕ್ರಮ ಏನು? ಎಂಬುದರ ಕುರಿತು ಕುತೂಹಲ ಮೂಡಿದೆ.