ಪಾಕಿಸ್ತಾನದಿಂದ ಗಲ್ಲುಶಿಕ್ಷೆಗೊಳಗಾಗಿರುವ ಭಾರತದ ಕುಲಭೂಷಣ್​ ಜಾಧವ್​ ಭವಿಷ್ಯ ಇಂದು ನಿರ್ಧಾರ

ಹೊಸದಿಲ್ಲಿ: ಗೂಢಚಾರಿಕೆ ಮತ್ತು ಭಯೋತ್ಪಾದನೆ ಆರೋಪದಲ್ಲಿ ಪಾಕಿಸ್ತಾನದ ವಶದಲ್ಲಿರುವ ಭಾರತದ ಮಾಜಿ ನೌಕಾಧಿಕಾರಿ ಕುಲಭೂಷಣ್ ಜಾಧವ್ ಭವಿಷ್ಯ ಇಂದು ನಿರ್ಧಾರವಾಗಲಿದೆ. ಪ್ರಕರಣದ ವಾದವನ್ನು ಆಲಿಸಿರುವ ಅಂತಾರಾಷ್ಟ್ರೀಯ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ.

ಬೇಹುಗಾರಿಕೆ ಆರೋಪದಲ್ಲಿ ಪಾಕಿಸ್ತಾನ ಕುಲಭೂಷಣ್ ಜಾಧವ್ ಅವರನ್ನು ಬಂಧಿಸಿತ್ತು. ಅಲ್ಲದೆ, ಈ ಪ್ರಕರಣದಲ್ಲಿ ಅವರಿಗೆ ಪಾಕಿಸ್ತಾನ ಮಿಲಿಟರಿ ನ್ಯಾಯಾಲಯ 2017ರಲ್ಲಿ ಮರಣದಂಡನೆಯನ್ನು ಕೂಡ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಪಾಕಿಸ್ತಾನದ ವಿರುದ್ಧ ಭಾರತ ಅಂತಾರಾಷ್ಟ್ರೀಯ ನ್ಯಾಯಾಲಯದ (ಐಸಿಜೆ) ಮೆಟ್ಟಿಲೇರಿತ್ತು.  ಈ ಪ್ರಕರಣದ ತೀರ್ಪು ಬರುವ ತನಕ ಕುಲಭೂಷಣ್ ಜಾಧವ್ ಮರಣದಂಡನೆ ಶಿಕ್ಷೆಯನ್ನು ಜಾರಿಗೆ ತರಬಾರದು ಎಂದು ಅಂತಾರಾಷ್ಟ್ರೀಯ ನ್ಯಾಯಾಲಯ ಸೂಚನೆ ನೀಡಿತ್ತು. ಈ ಪ್ರಕರಣದ ವಿಚಾರಣೆಯನ್ನು ನೆದರ್ಲೆಂಡ್​ನ ಹೇಗ್ ಕೇಂದ್ರ ಕಚೇರಿಯಲ್ಲಿ ಫೆಬ್ರವರಿ ತಿಂಗಳಲ್ಲಿ ನ್ಯಾಯಾಲಯ ಕೈಗೆತ್ತಿಕೊಂಡಿತ್ತು. ಇಂದು ನ್ಯಾಯಾಲಯ ತೀರ್ಪು ಪ್ರಕಟಿಸುವ ಸಾಧ್ಯತೆ ಇರುವುದರಿಂದ ಭಾರತ ಕಾತುರದಿಂದ ಕಾಯುತ್ತಿದೆ.

ಈ ಪ್ರಕರಣದಲ್ಲಿ ಪಾಕಿಸ್ತಾನ 1963ರ ವಿಯೆನ್ನಾ ಒಪ್ಪಂದವನ್ನು ಉಲ್ಲಂಘಿಸಿದೆ. ಕುಲಭೂಷಣ್ ಜಾಧವ್ ಓರ್ವ ಉದ್ಯಮಿ. ಅವರನ್ನು ಇರಾನ್​ನಿಂದ ಅಪಹರಣ ಮಾಡಲಾಗಿದೆ ಎಂದು ಭಾರತ ಪರ ವಕೀಲ ಹರೀಶ್​ ಸಾಳ್ವೆ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ಅದಕ್ಕೆ ಪ್ರತಿಯಾಗಿ ಪಾಕಿಸ್ತಾನ, ಕುಲಭೂಷಣ್ ಜಾಧವ್ ಉದ್ಯಮಿಯಲ್ಲ. ಉದ್ಯಮಿ ಎಂದು ಹೇಳಿಕೊಂಡು ಗೂಢಚಾರಿಕೆ ನಡೆಸಿದ್ದಾರೆ ಎಂದು ಹೇಳಿತ್ತು. ಅಲ್ಲದೆ, ಕುಲಭೂಷಣ್ ಜಾಧವ್ ಗೆ ಭಾರತದ ರಾಯಭಾರ ಕಚೇರಿ ನೆರವು ನೀಡಲು ಅವಕಾಶ ನೀಡಬೇಕು ಎಂದು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಮಾಡಿದ್ದ ಮನವಿಯನ್ನು ಪಾಕಿಸ್ತಾನ ತಿರಸ್ಕರಿಸಿತ್ತು.

2017ರ ಡಿಸೆಂಬರ್​ನಲ್ಲಿ ಕುಲಭೂಷಣ್​ ಜಾಧವ್ ತಮ್ಮ ಪತ್ನಿ ಮತ್ತು ತಾಯಿಯನ್ನು ಭೇಟಿಯಾಗಲು ಬಯಸಿದ್ದರು. ಇದಕ್ಕೆ ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಅನುಮತಿ ನೀಡಿತ್ತು. ಇಸ್ಲಾಮಾಬಾದ್​ನಲ್ಲಿರುವ ಪಾಕ್​ವಿದೇಶಾಂಗ ಸಚಿವಾಲಯದ ಕಚೇರಿಯಲ್ಲಿ ಭೇಟಿಗೆ ವ್ಯವಸ್ಥೆ ಮಾಡಲಾಗಿತ್ತು. ಸುಮಾರು 30 ನಿಮಿಷಗಳ ಕಾಲ ಜಾಧವ್,​ ತಾಯಿ ಮತ್ತು ಪತ್ನಿ ಜೊತೆ ಮಾತುಕತೆ ನಡೆಸಿದ್ದರು. ಆದರೆ, ನೇರವಾಗಿ ಭೇಟಿಗೆ ಅವಕಾಶ ನೀಡದೆ ಗಾಜಿನ ತಡೆಗೋಡೆಯ ಆಚೀಚೆ ಮುಖ ನೋಡಿಕೊಳ್ಳಲು ಅವಕಾಶ ನೀಡಿ ಇಂಟರ್​ಕಾಂ​ ಮೂಲಕ ಮಾತನಾಡಲು ಅವಕಾಶ ಕಲ್ಪಿಸಿದ ಪಾಕಿಸ್ತಾನದ ಧೋರಣೆಗೆ ಭಾರತದಲ್ಲಿ ಖಂಡನೆ ವ್ಯಕ್ತವಾಗಿತ್ತು. ಅಲ್ಲದೆ, ಕುಲಭೂಷಣ್​ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನಗಳು ನಡೆದಿದ್ದವು.

ಮಹಾರಾಷ್ಟ್ರ ಮೂಲದ ಕುಲಭೂಷಣ್​ ಜಾಧವ್ ಅವರನ್ನು ಪಾಕ್​ ವಶಕ್ಕೆ ತೆಗೆದುಕೊಂಡು 2 ವರ್ಷಗಳೇ ಕಳೆದಿವೆ. ಭಾರತದ ಮಗ ತಾಯ್ನಾಡಿಗೆ ವಾಪಾಸಾಗುತ್ತಾರಾ? ಅಥವಾ ನ್ಯಾಯಾಲಯ ಪಾಕಿಸ್ತಾನ ಮಿಲಿಟರಿ ಕೋರ್ಟ್​ನ ತೀರ್ಪನ್ನೇ ಎತ್ತಿಹಿಡಯಲಿದೆಯಾ? ಎಂಬ ಕುತೂಹಲ ಹೆಚ್ಚಾಗಿದೆ. ಇಡೀ ದೇಶದ ಗಮನ ಸೆಳೆದಿರುವ ಈ ತೀರ್ಪು ಇಂದು ಪ್ರಕಟವಾಗಲಿದೆ. ಇನ್ನೊಂದೆಡೆ ದೇಶದ ಮತ್ತೊಂದು ಮಹತ್ವದ ಪ್ರಕರಣವಾದ ಕರ್ನಾಟಕದ ಸ್ಪೀಕರ್​ ಮೇಲೆ ಅತೃಪ್ತ ಶಾಸಕರು ಸಲ್ಲಿಸಿದ್ದ ಅರ್ಜಿಯ ತೀರ್ಪು ಕೂಡ ಇಂದೇ ಹೊರಬೀಳುವ ಸಾಧ್ಯತೆಯಿದೆ. ಹೀಗಾಗಿ, ಎರಡು ಪ್ರಮುಖ ಪ್ರಕರಣಗಳ ತೀರ್ಪು ಇಂದು ಮಹತ್ವದ್ದಾಗಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ