ಅತೃಪ್ತರ ರಾಜೀನಾಮೆ, ಸುಪ್ರೀಂ ಮಧ್ಯಂತರ ತೀರ್ಪು; ಸ್ಪೀಕರ್ ರಮೇಶ್ ಕುಮಾರ್ ಹೇಳೋದೇನು?

ನವದೆಹಲಿ/ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ ಕಾಂಗ್ರೆಸ್, ಜೆಡಿಎಸ್ ನ 15 ಶಾಸಕರ ರಾಜೀನಾಮೆ ಅಂಗೀಕಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಪೀಠ ಬುಧವಾರ ಬೆಳಗ್ಗೆ ಮಹತ್ವದ ಮಧ್ಯಂತರ ತೀರ್ಪನ್ನು ಪ್ರಕಟಿಸಿದ್ದು, 15 ಶಾಸಕರು ಗುರುವಾರ ನಡೆಯಲಿರುವ ವಿಶ್ವಾಸಮತ ಯಾಚನೆಗೆ ಹಾಜರಾಗುವಂತೆ ಒತ್ತಡ ಹೇರುವಂತಿಲ್ಲ. ಸ್ಪೀಕರ್ ಅವರು ಶಾಸಕರ ರಾಜೀನಾಮೆ ಅಥವಾ ಅನರ್ಹತೆ ಬಗ್ಗೆ ನಿರ್ಧಾರ ಕೈಗೊಳ್ಳಬಹುದು ಎಂದು ತಿಳಿಸಿದೆ.

ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಗೊಗೊಯಿ ಅವರು ಎರಡು ಸಾಲಿನ ತೀರ್ಪನ್ನು ಪ್ರಕಟಿಸಿದರು. ಶಾಸಕರ ರಾಜೀನಾಮೆಗೆ ಸಂಬಂಧಿಸಿದಂತೆ ಸ್ಪೀಕರ್ ಗೆ ಯಾವುದೇ ಕಾಲಮಿತಿ ನಿಗದಿಪಡಿಸಿಲ್ಲ.

ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರದ ಬಗ್ಗೆ ನಿರ್ಧಾರ ಕೈಗೊಳ್ಳಲು ಸ್ಪೀಕರ್ ಸ್ವತಂತ್ರರಾಗಿದ್ದಾರೆ ಎಂದು ನಿರ್ದೇಶನ ನೀಡಿರುವ ಸುಪ್ರೀಂಕೋರ್ಟ್, ಆದರೆ ಶಾಸಕರ ಬಗ್ಗೆ ತೆಗೆದುಕೊಳ್ಳುವ ನಿರ್ಧಾರವನ್ನು ಕೋರ್ಟ್ ಗೆ ಸಲ್ಲಿಸಬೇಕು ಎಂದು ಸೂಚಿಸಿದೆ.

ಅಷ್ಟೇ ಅಲ್ಲ ಬಂಡಾಯ ಶಾಸಕರು ಅಧಿವೇಶನದಲ್ಲಿ ಪಾಲ್ಗೊಳ್ಳುವಂತೆ ಯಾವುದೇ ರೀತಿಯ ಒತ್ತಡ ಹೇರಬಾರದು. ಅಂದರೆ ಗುರುವಾರ ನಡೆಯಲಿರುವ ವಿಶ್ವಾಸಮತ ಯಾಚನೆಯ ವೇಳೆ ಅತೃಪ್ತ ಶಾಸಕರು ಪಾಲ್ಗೊಳ್ಳುವಂತೆ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ವಿಪ್ ಜಾರಿ ಮಾಡುವಂತಿಲ್ಲ.

ಸುಪ್ರೀಂ ತೀರ್ಪು ನನ್ನ ಜವಾಬ್ದಾರಿ ಹೆಚ್ಚಿಸಿದೆ: ರಮೇಶ್ ಕುಮಾರ್

ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಿಂದಾಗಿ ನನ್ನ ವಿಶ್ವಾಸ ಮತ್ತಷ್ಟು ಹೆಚ್ಚಾಗಿದೆ. ಸಂವಿಧಾನದಡಿಯಲ್ಲಿ ಗೌರವಯುತವಾಗಿ ನಡೆದುಕೊಳ್ಳುವಂತೆ ಸುಪ್ರೀಂ ಪೀಠ ಹೇಳಿದೆ. ಸೂಕ್ತ ಸಮಯಕ್ಕೆ ವಿಳಂಬ ಮಾಡದೆ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಸ್ಪೀಕರ್ ರಮೇಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಸುಪ್ರೀಂಕೋರ್ಟ್ ಕಾಲಮಿತಿ ನಿಗದಿ ಮಾಡದೇ ಇರುವುದು ನನ್ನ ಮೇಲೆ ಹೊರಿಸಿದ ದೊಡ್ಡ ಜವಾಬ್ದಾರಿಯಾಗಿದೆ. ದೇಶದ ಪರಮೋಚ್ಚ ನ್ಯಾಯಾಲಯದ ವಿಶೇಷ ಗೌರವವನ್ನು ಉಳಿಸಿಕೊಂಡು ನಾನು ಹೆಜ್ಜೆ ಇಡುತ್ತೇನೆ. ಶಾಸಕರನ್ನು ಸದನಕ್ಕೆ ಕರೆಸುವುದು ನನ್ನ ಜವಾಬ್ದಾರಿಯಲ್ಲ ಎಂದು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ