ಬೆಂಗಳೂರು, ಜು.17-ಸುಪ್ರಿಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಸಮ್ಮಿಶ್ರ ಸರ್ಕಾರದ ಭವಿಷ್ಯ ಮತ್ತೆ ಆತಂಕಕ್ಕೆ ಸಿಲುಕಿದೆ.
ಬೆದರಿಕೆ ಅಥವಾ ಸಂಧಾನದ ಮೂಲಕ ಮುಂಬೈನಲ್ಲಿರುವ ಅತೃಪ್ತ ಶಾಸಕರ ಪೈಕಿ ಕೆಲವರನ್ನು ನಾಳೆ ಕರೆತಂದು ವಿಶ್ವಾಸ ಮತಯಾಚನೆಯಲ್ಲಿ ಗೆಲ್ಲುವ ಆತ್ಮವಿಶ್ವಾಸ ಹೊಂದಿದ್ದ ದೋಸ್ತಿ ಪಕ್ಷಗಳ ನಾಯಕರಿಗೆ ಮತ್ತೆ ಚಿಂತೆ ಕಾಡಲಾರಂಭಿಸಿದೆ.
ಅಧಿವೇಶನದಲ್ಲಿ ಭಾಗವಹಿಸುವಂತೆ ಬಲವಂತ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಸೂಚನೆ ನೀಡಿರುವುದು ಬಂಡಾಯ ಶಾಸಕರಿಗೆ ಆನೆಬಲ ತಂದುಕೊಟ್ಟರೆ,ದೋಸ್ತಿ ಪಕ್ಷದ ಜಂಘಾಬಲವನ್ನೇ ಅಡಗಿಸಿದೆ.
ಮುಂಬೈನ ರೆಸಾರ್ಟ್ನಲ್ಲಿರುವ 13 ಮಂದಿ ಜೆಡಿಎಸ್-ಕಾಂಗ್ರೆಸ್ ಶಾಸಕರ ಪೈಕಿ ನಾಲ್ಕೈದು ಮಂದಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿದ್ದರು. ಅವರುಗಳ ಭರವಸೆ ಮೇಲೆ ಕುಮಾರಸ್ವಾಮಿ ವಿಶ್ವಾಸ ಮತಯಾಚನೆಯ ನಿರ್ಧಾರವನ್ನು ವಿಧಾನಸಭೆಯಲ್ಲಿ ಪ್ರಕಟಿಸಿದ್ದರು.
ಶಾಸನ ಸಭೆಯ ಮುಖ್ಯಸ್ಥರಾದ ವಿಧಾನಸಭಾಧ್ಯಕ್ಷರ ಪರಮಾಧಿಕಾರದಲ್ಲಿ ಸುಪ್ರೀಂಕೋರ್ಟ್ ಹಸ್ತಕ್ಷೇಪ ಮಾಡುವುದಿಲ್ಲ ಎಂಬ ವಿಶ್ವಾಸ ಕಾಂಗ್ರೆಸ್, ಜೆಡಿಎಸ್ ನಾಯಕರಲ್ಲಿ ಇತ್ತು. ಆದರೆ, ಇಂದು ಸುಪ್ರೀಂಕೋರ್ಟ್ನ ತೀರ್ಪಿನಲ್ಲಿ ಅತೃಪ್ತರು ಅಧಿವೇಶನದಲ್ಲಿ ಭಾಗವಹಿಸುವಂತೆ ಬಲವಂತ ಮಾಡುವಂತಿಲ್ಲ ಎಂಬ ಆದೇಶ ಎಲ್ಲಾ ಪ್ರಯತ್ನಗಳನ್ನು ಹೊಳೆಯಲ್ಲಿ ಹುಣಸೇಹಣ್ಣು ತೊಳೆದಂತೆ ಮಾಡಿದೆ.
ಈಗಾಗಲೇ ಬಂಡಾಯದ ಬಾವುಟ ಹಿಡಿದು ಕಾಂಗ್ರೆಸ್-ಜೆಡಿಎಸ್ನ ನಾಯಕರ ವಿರುದ್ಧ ಅತೃಪ್ತ ಶಾಸಕರು ರಣಕಹಳೆ ಊದಿದ್ದಾರೆ. ಸಂಧಾನಕ್ಕೆ ಬಿಲ್ಕುಲ್ ಒಪ್ಪುವುದಿಲ್ಲ ಎಂದು ಹಠಕ್ಕೆ ಬಿದ್ದಿದ್ದಾರೆ.
ಈ ಸಂದರ್ಭದಲ್ಲಿ ಅನರ್ಹತೆಯ ದಂಡ ಹಿಡಿದು ಒಂದಿಷ್ಟು ಬೆದರಿಸುವ ಮೂಲಕ ಸಣ್ಣ ಪ್ರಮಾಣದ ಸಂಧಾನ ನಡೆಸುವ ಪ್ರಯತ್ನಗಳಾಗುತ್ತಿದ್ದವು. ವಿಪ್ ನೀಡಿ ಅದನ್ನು ಉಲ್ಲಂಘಿಸಿದರೆ ಅಂತಹ ಶಾಸಕರನ್ನು ಅನರ್ಹಗೊಳಿಸಿ ಆರು ವರ್ಷ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧ ಹೇರುವ ಕಠಿಣ ಕ್ರಮ ಕೈಗೊಳ್ಳುವ ಬೆದರಿಕೆಯನ್ನು ಕಾಂಗ್ರೆಸ್-ಜೆಡಿಎಸ್ ನಾಯಕರು ಒಡ್ಡಿದ್ದರು.
ಆದರೆ, ಸುಪ್ರೀಂಕೋರ್ಟ್ ಅತೃಪ್ತರ ನೆರವಿಗೆ ಬಂದಿದ್ದು, ಅಧಿವೇಶನದಲ್ಲಿ ಭಾಗವಹಿಸುವಂತೆ ಬಲವಂತ ಮಾಡುವಂತಿಲ್ಲ ಎಂದು ತೀರ್ಪು ನೀಡಿರುವುದು ದೋಸ್ತಿ ಪಕ್ಷಗಳ ಸಂಧಾನ ಪ್ರಕ್ರಿಯೆಗಳಿಗೆ ಹಿನ್ನಡೆ ಉಂಟು ಮಾಡಿದೆ.
ಈಗಿನ ಪರಿಸ್ಥಿತಿಯಲ್ಲಿ ಹೆದರಿಸುವ, ಬೆದರಿಸುವ ಬದಲು ಅಂಗಲಾಚುವ ವಾತಾವರಣ ನಿರ್ಮಾಣವಾಗಿದೆ. ಒಂದು ವೇಳೆ ಅತೃಪ್ತರ ಪೈಕಿ ಕೆಲವರು ಮನಸ್ಸು ಬದಲಿಸಿ ಪಕ್ಷ ನಿಷ್ಟರಾಗಲು ವಾಪಸ್ ಬಂದರೆ ಸಮ್ಮಿಶ್ರ ಸರ್ಕಾರ ಉಳಿಯಬಹುದು. ಇಲ್ಲದೇ ಹೋದರೆ ನಾಳೆಯೇ ಸರ್ಕಾರದ ಭವಿಷ್ಯ ನಿರ್ಧಾರವಾಗಲಿದೆ.
ಇನ್ನೆರಡು-ಮೂರು ದಿನಗಳಲ್ಲಿ ರಾಜಕೀಯ ಭವಿಷ್ಯವೂ ನಿರ್ಧಾರಿತವಾಗಲಿದೆ.