ಸುಪ್ರೀಂಕೋರ್ಟ್ ತೀರ್ಪಿನಿಂದ ಮೈತ್ರಿ ಪಕ್ಷಗಳಲ್ಲಿ ಗಲಿಬಿಲಿ ವಾತವರಣ

ಬೆಂಗಳೂರು, ಜು.17-ಒಂದೆಡೆ ಅವಿಶ್ವಾಸ ನಿರ್ಣಯದ ಕಾರ್ಮೋಡ ಕವಿದಿದ್ದರೆ, ಮತ್ತೊಂದೆಡೆ ಹಿರಿಯ ಕಾಂಗ್ರೆಸ್ಸಿಗ ರಾಮಲಿಂಗಾರೆಡ್ಡಿ ಅವರು ತಮ್ಮ ರಾಜೀನಾಮೆಯಿಂದ ಹಿಂದೆ ಸರಿದಿರುವುದು ಸಮ್ಮಿಶ್ರ ಸರ್ಕಾರಕ್ಕೆ ಕೊಂಚ ನಿಟ್ಟುಸಿರು ಬಿಡುವ ವಾತಾವರಣ ನಿರ್ಮಾಣ ಮಾಡಿದೆ.

ನಾಳೆ ವಿಶ್ವಾಸ ಮತಯಾಚನೆಗೆ ಕೆಲವೇ ಗಂಟೆಗಳು ಬಾಕಿ ಇರುವ ಸಂದರ್ಭದಲ್ಲಿ ಕಾಂಗ್ರೆಸ್-ಜೆಡಿಎಸ್ ನಾಯಕರು ಬಿರುಸಿನ ಚಟುವಟಿಕೆಗಳಲ್ಲಿ ನಿರತರಾದರು.

ಸುಪ್ರೀಂಕೋರ್ಟ್ ತೀರ್ಪು ಅತೃಪ್ತರ ಮೇಲಿನ ದಂಡ ಪ್ರಯೋಗಕ್ಕೆ ಪರೋಕ್ಷವಾಗಿ ನಿಯಂತ್ರಣ ಹಾಕಿದ ಬೆನ್ನಲ್ಲೇ ಬಿಜೆಪಿ ಮತ್ತು ಬಂಡಾಯ ಶಾಸಕರ ಪಾಳಯದಲ್ಲಿ ಹರ್ಷದ ವಾತಾವರಣ ಮನೆ ಮಾಡಿದರೆ, ದೋಸ್ತಿ ಪಕ್ಷಗಳಲ್ಲಿ ಗಲಿಬಿಲಿ ವಾತಾವರಣ ನಿರ್ಮಾಣವಾಯಿತು.

ಈ ಸಂದರ್ಭದಲ್ಲಿ ಆಪದ್ಬಾಂಧವರಂತೆ ರಾಮಲಿಂಗಾರೆಡ್ಡಿ ತಮ್ಮ ರಾಜೀನಾಮೆ ಹಿಂಪಡೆಯುವ ಮುನ್ಸೂಚನೆ ನೀಡಿದ್ದಾರೆ. ರಾಮಲಿಂಗಾರೆಡ್ಡಿ ಅವರು ರಾಜೀನಾಮೆ ಹಿಂಪಡೆದು ಕಾಂಗ್ರೆಸ್‍ನಲ್ಲೇ ಉಳಿಯುವುದಾದರೆ ಮುಂಬೈನಲ್ಲಿರುವ ಮೂರ್ನಾಲ್ಕು ಮಂದಿ ಶಾಸಕರು ತಮ್ಮ ನಿಲುವನ್ನು ಬದಲಿಸಬಹುದು ಎಂಬ ಲೆಕ್ಕಾಚಾರಗಳು ಮೊದಲಿನಿಂದಲೂ ನಡೆದಿವೆ. ಹಾಗಾಗಿ ರಾಜ್ಯ ರಾಜಕಾರಣ ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುತ್ತಿದೆ.

ಈವರೆಗೂ ನಡೆದ ಎಲ್ಲಾ ಸಂಧಾನಗಳು ವಿಫಲವಾಗಿರುವುದರಿಂದ, ರಾಮಲಿಂಗಾರೆಡ್ಡಿ ಅವರ ಸಂಧಾನ ಯಶಸ್ವಿಯಾಗಲಿದೆಯೇ, ವಿಶ್ವಾಸ ಮತ ಗಳಿಸಲಿದೆಯೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ