ಜು.19ರಂದು ಎಚ್ಚೆತ್ತ ಕನ್ನಡ, ಕನ್ನಡ ರೈಸಿಂಗ್ ಸಂವಾದ

ಬೆಂಗಳೂರು,ಜು.17- ದೊಮ್ಮಲೂರಿನ ಬೆಂಗಳೂರು ಇಂಟರ್ ನ್ಯಾಷನಲ್ ಸೆಂಟರ್‍ನಲ್ಲಿ ಜು.19ರಂದು ಸಂಜೆ 6.30ರಿಂದ ರಾತ್ರಿ 8 ಗಂಟೆವರೆಗೆ ಎಚ್ಚೆತ್ತ ಕನ್ನಡ, ಕನ್ನಡ ರೈಸಿಂಗ್ ಶೀರ್ಷಿಕೆಯಡಿ ಸಂವಾದವನ್ನು ಆಯೋಜಿಸಲಾಗಿದೆ.

ಬ್ರಿಟಿಷರು, ಮೊಘಲರು, ಮರಾಠರು, ಆದಿಲ್ ಶಾಹಿಗಳು ಹೀಗೆ ಅನ್ಯರ ರಾಜ್ಯಭಾರಗಳ ಆಳ್ವಿಕೆಯಡಿ ನಾಡು ಹರಿದು ಹಂಚಿಗಿದ್ದಂತಹ ಕಾಲದಲ್ಲಿ ಕನ್ನಡತನವೆಂಬುದು ಮೈದಳೆದು ತಲೆ ಎತ್ತತೊಡಗಿತು. ಅದು ಮುಂದೆ ಕರ್ನಾಟಕ ಏಕೀಕರಣ ಚಳವಳಿಯಾಗಿ ರೂಪತಳೆದು, ಬೆಳೆದು ನಮ್ಮ ಹಿರಿಯರ ತ್ಯಾಗ ಬಲಿದಾನಗಳ ಫಲವಾಗಿ ಕನ್ನಡನಾಡು ಸಾಕಾರಗೊಂಡಿತು.

ಕ್ಷಿಪ್ರ ಆರ್ಥಿಕ ಬೆಳವಣಿಗೆಯಿಂದಾಗಿ ಹೊರಗಿನವರಿಗೆ ವಲಸೆ ಬರಲು ನಾಡು ಆಕರ್ಷಣೆಯ ನೆಲೆದಾಣವೂ ಆಯಿತು. ಕನ್ನಡತನ ಬೆಳೆದ ಬಗೆ, ಕನ್ನಡನಾಡು ಜೀವತಳೆದ ಬಗ್ಗೆ ವಲಸಿಗರಿಗೆ ಅರಿವಿನ ಕೊರತೆಯಿದೆ. ಇದರಿಂದಾಗಿ ಕನ್ನಡ, ಕನ್ನಡತನದ ಉಳಿವಿನ ಕುರಿತೇ ಆತಂಕ ಮೂಡಿದೆ.

ಆತಂಕದ ಸನ್ನಿವೇಶ, ಸವಾಲು, ಅದಕ್ಕೆ ಇರಬಹುದಾದ ಪರಿಹಾರಗಳ ಬಗ್ಗೆ ಚರ್ಚೆಯಲ್ಲಿ ಪಾಲ್ಗೊಳ್ಳುವ ಪ್ರಾಜ್ಞರು ಬೆಳಕು ಚೆಲ್ಲಲಿದ್ದಾರೆ. ಇತಿಹಾಸ- ಭವಿಷ್ಯದ ಮಧ್ಯದಲ್ಲಿ ವರ್ತಮಾನ ಆಗುಹೋಗುಗಳು, ಕನ್ನಡಿಗರು ಮತ್ತು ಆಡಳಿತಗಾರರು ಮಾಡಬೇಕಾದುದೇನು ಎಂಬುದರ ಕುರಿತು ಈ ಚರ್ಚೆಯನ್ನು ಏರ್ಪಡಿಸಲಾಗಿದೆ.

ಡಾ.ಎಂ. ಚಿದಾನಂದಮೂರ್ತಿ, ಡಾ.ಎಚ್.ಎಸ್.ಗೋಪಾಲ ರಾವ್, ಪಂಜಾಬಿನವರಾದರೂ ಅಪ್ಪಟ ಕನ್ನಡಿಗರಾಗಿರುವ ಡಾ.ಚಿರಂಜೀವಿ ಸಿಂಘ್, ಡಾ.ಕೆ.ಉಲ್ಲಾಸ ಕಾರಂತ್ ಸಂವಾದ ನಡೆಸಿಕೊಡುವರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ