ನವದೆಹಲಿ, ಜು.16– ಮತದಾರರ ಪಟ್ಟಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಮಾನಹಾನಿ ಪ್ರಕರಣ ಎದುರಿಸುತ್ತಿದ್ದ ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಾರ್ಟಿ (ಎಎಪಿ) ಪರಮೋಚ್ಚ ನಾಯಕ ಅರವಿಂದ ಕೇಜ್ರಿವಾಲ್ಗೆ ನ್ಯಾಯಾಲಯವೊಂದು ಜಾಮೀನು ಮಂಜೂರು ಮಾಡಿದೆ.
ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ದಂಡಾಧಿಕಾರಿ ಸಮರ್ವಿಶಾದ್ ಅವರು ಕೇಜ್ರಿವಾಲ್ಗೆ 10 ಸಾವಿರ ರೂ.ಗಳ ವೈಯಕ್ತಿಕ ಬಾಂಡ್ ಮೇಲೆ ಜಾಮೀನು ಮಂಜೂರು ಮಾಡಿದರು.
ಕೇಜ್ರಿವಾಲ್ ಅವರಲ್ಲದೆ ಪಕ್ಷದ ರಾಜ್ಯಸಭಾ ಸದಸ್ಯ ಸುಶೀಲ್ಕುಮಾರ್ ಗುಪ್ತಾ, ಶಾಸಕ ಮನೋಜ್ಕುಮಾರ್ ಹಾಗೂ ಎಎಪಿ ವಕ್ತಾರರಾದ ಆತಿಷಿ ಮಲೇನಾ ಅವರಿಗೂ ನ್ಯಾಯಾಲಯ ತಲಾ 10ಸಾವಿರ ರೂ.ಗಳ ವೈಯಕ್ತಿಕ ಬಾಂಡ್ಗಳ ಮೇರೆಗೆ ಜಾಮೀನು ಮಂಜೂರು ಮಾಡಿದೆ.
ಬಿಜೆಪಿ ಮುಖಂಡ ರಾಜೀವ್ಬಬ್ಬರ್ ಎಎಪಿ ಮುಖಂಡರ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದರು.
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ದೆಹಲಿಯ ಮತದಾರರ ಪಟ್ಟಿಯಿಂದ ಸಹಸ್ರಾರು ಮತದಾರರ ಹೆಸರನ್ನು ಬಿಜೆಪಿ ಉದ್ದೇಶ ಪೂರ್ವಕವಾಗಿ ಕೈ ಬಿಟ್ಟಿದೆ ಎಂದು ಕೇಜ್ರಿವಾಲ್ ಮತ್ತು ಪಕ್ಷದ ಮುಖಂಡರು ಆರೋಪಿಸಿದ್ದರು.
ಈ ನಾಯಕರ ಹೇಳಿಕೆಯಿಂದ ಬಿಜೆಪಿ ವರ್ಚಸ್ಸಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ಬಬ್ಬರ್ ನ್ಯಾಯಾಲಯದಲ್ಲಿ ಇವರೆಲ್ಲರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.