ಬೆಂಗಳೂರು, ಜು.15- ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸರ್ಕಾರದ ಬುಡವನ್ನೇ ಅಲ್ಲಾಡಿಸುತ್ತಿರುವ ಕಾಂಗ್ರೆಸ್-ಜೆಡಿಎಸ್ 15 ಮಂದಿ ಅತೃಪ್ತ ಶಾಸಕರ ಸದಸ್ಯತ್ವವನ್ನು ಅನರ್ಹಗೊಳಿಸಬೇಕೆಂದು ದೋಸ್ತಿ ಪಕ್ಷಗಳ ಮುಖಂಡರು ವಿಧಾನಸಭೆ ಸ್ಪೀಕರ್ಗೆ ಮನವಿ ಮಾಡಿದ್ದಾರೆ.
ವಿಧಾನಸಭೆಯಲ್ಲಿ ಸ್ಪೀಕರ್ ಕೆ.ಆರ್.ರಮೇಶ್ಕುಮಾರ್ ಅವರನ್ನು ಇಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್, ಸಚಿವರಾದ ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್, ಸಾ.ರಾ.ಮಹೇಶ್, ಆಡಳಿತ ಪಕ್ಷದ ಮುಖ್ಯಸಚೇತಕ ಗಣೇಶ್ಉಕ್ಕೇರಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೋನಾರೆಡ್ಡಿ ಸೇರಿದಂತೆ ಮತ್ತಿತರ ದೋಸ್ತಿ ಪಕ್ಷಗಳ ನಿಯೋಗ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವವರನ್ನು ತಕ್ಷಣವೇ ಪಕ್ಷ ವಿರೋಧ ಚಟುವಟಿಕೆ ಆರೋಪದ ಹಿನ್ನೆಲೆಯಲ್ಲಿ ಸದಸ್ಯತ್ವವನ್ನು ಅನರ್ಹಗೊಳಿಸಬೇಕೆಂದು ದೂರು ನೀಡಿದೆ.
ಬಿಟಿಎಂ ಲೇಔಟ್ನ ಶಾಸಕ ರಾಮಲಿಂಗಾರೆಡ್ಡಿ ಹೊರತು ಪಡಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಜೆಡಿಎಸ್ನ ಎಚ್.ವಿಶ್ವನಾಥ್, ಗೋಪಾಲಯ್ಯ, ನಾರಾಯಣಗೌಡ, ಕಾಂಗ್ರೆಸ್ನ ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜ್, ಮುನಿರತ್ನ, ಬಿ.ಸಿ.ಪಾಟೀಲ್, ಮಹೇಶ್ ಕುಮಟಳ್ಳಿ, ರಮೇಶ್ಜಾರಕಿಹೊಳಿ, ರೋಷನ್ಬೇಗ್, ಪ್ರತಾಪ್ಗೌಡ ಪಾಟೀಲ್, ಶಿವರಾಂ ಹೆಬ್ಬಾರ್, ಆನಂದ್ಸಿಂಗ್, ಡಾ.ಕೆ.ಸುಧಾಕರ್ ಹಾಗೂ ಎಂ.ಟಿ.ಬಿ.ನಾಗರಾಜ್ ಅವರುಗಳನ್ನು ತಕ್ಷಣದಿಂದಲೇ ಅನ್ವಯವಾಗುವಂತೆ ಅನರ್ಹಗೊಳಿಸಬೇಕೆಂದು ದಾಖಲೆಗಳ ಸಮೇತ ದೂರು ಕೊಟ್ಟಿದೆ.
ಈ ಎಲ್ಲಾ ಶಾಸಕರು ವಿರೋಧ ಪಕ್ಷದ ಜತೆ ಸೇರಿ ಸರ್ಕಾರವನ್ನು ಕೆಡುಗುವ ಷಡ್ಯಂತ್ರ ನಡೆಸಿದ್ದಾರೆ. ಬೆಂಗಳೂರಿನಿಂದ ಗೋವಾ, ಮುಂಬೈ, ನವದೆಹಲಿ ಸೇರಿದಂತೆ ಬೇರೆ ಬೇರೆ ಭಾಗಗಳಿಗೆ ತೆರಳಲು ವಾಹನ ಹಾಗೂ ಹೋಟೆಲ್ ವ್ಯವಸ್ಥೆ ಸೇರಿದಂತೆ ಇತರೆ ಸೌಲಭ್ಯಗಳನ್ನು ವಿರೋಧ ಪಕ್ಷದಿಂದ ಪಡೆದಿದ್ದಾರೆ.
ಸರ್ಕಾರ ಉರುಳಿಸುವುದೇ ಇವರ ಮೂಲ ಉದ್ದೇಶ. ಕಾಂಗ್ರೆಸ್ ಹಾಗೂ ಜೆಡಿಎಸ್ನಿಂದ ಬಿ ಫಾರಂ ಪಡೆದು ಚುನಾವಣೆಯಲ್ಲಿ ಗೆದ್ದು ಈಗ ಪಕ್ಷ ವಿರೋಧಿ ಚಟುವಟಿಕೆ ನಡೆಸುವುದು ಪಕ್ಷಾಂತರ ನಿಷೇಧ ಕಾಯ್ದೆ ಪ್ರಕಾರ ಸದಸ್ಯತ್ವವನ್ನು ಅನರ್ಹಗೊಳಿಸಲು ಕಾನೂನಿನಲ್ಲಿ ಅವಕಾಶವಿದೆ. ಸ್ಪೀಕರ್ ಅವರು ತಮಗಿರುವ ವಿವೇಚನೆ ಬಳಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಿಯೋಗ ಮನವಿ ಮಾಡಿದೆ.
ಶಾಸಕರು ಕ್ಷೇತ್ರದ ಅಭಿವೃದ್ಧಿಗಾಗಿ ರಾಜೀನಾಮೆ ನೀಡುತ್ತಿದ್ದೇವೆ ಎಂದು ಹೇಳುತ್ತಿರುವುದು ಆಧಾರ ರಹಿತ ಆರೋಪ. ಸರ್ಕಾರವನ್ನು ಅಸ್ಥಿರಗೊಳಿಸಲು ಸಂಚು ರೂಪಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ನಮ್ಮ ಪಕ್ಷದಿಂದ ಗೆದ್ದು ಬೇರೆ ಪಕ್ಷದ ಮುಖಂಡರ ಜತೆ ಗುರುತಿಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ.
ರಾಜೀನಾಮೆ ನೀಡಿರುವ ಶಾಸಕರ ಜತೆ ವಿರೋಧ ಪಕ್ಷದ ಮುಖಂಡರು ತೆರಳಿರುವುದು ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಇದು ದುರುದ್ದೇಶ ಪೂರ್ವಕ ಕೃತ್ಯವಾಗಿರುವುದರಿಂದ ಅನರ್ಹಗೊಳಿಸುವಂತೆ ದೋಸ್ತಿ ಪಕ್ಷಗಳ ಮುಖಂಡರು ಕೋರಿದ್ದಾರೆ.
ಪಕ್ಷಾಂತರ ತಿರುವಿಗೆ ಶಾಶ್ವತವಾಗಿ ಕಡಿವಾಣ ಹಾಕಬೇಕಾದ ಅಗತ್ಯವಿದೆ. ಚುನಾಯಿತ ಸರ್ಕಾರವನ್ನು ಯಾವುದೇ ಆರೋಪಗಳಿಲ್ಲದೆ ಅಸ್ಥಿರಗೊಳಿಸಲು ಮುಂದಾಗುವುದು ಕ್ರಿಮಿನಲ್ ಸಂಚಿಗೆ ಸಮಾನ. ಈ ಹಿಂದೆ ಬೇರೆ ಬೇರೆ ರಾಜ್ಯಗಳಲ್ಲಿ ಸರ್ಕಾರ ಅಸ್ಥಿರಗೊಳಿಸಲು ಯತ್ನಿಸಿದವರ ಸದಸ್ಯತ್ವವನ್ನು ಅನರ್ಹ ಮಾಡಲಾಗಿದೆ.ಇದೇ ಕಾನೂನಿನಡಿ 15 ಮಂದಿ ಶಾಸಕರನ್ನು ತತ್ಕ್ಷಣವೇ ಅನರ್ಹ ಮಾಡಬೇಕೆಂದು ನಿಯೋಗ ಮನವಿ ಮಾಡಿದೆ.
ಶಾಸಕರ ಜತೆ ಮಾತುಕತೆ ನಡೆಸಲು ತೆರಳಿದರೆ ಅಲ್ಲಿಯೂ ಭೇಟಿಯಾಗುತ್ತಿಲ್ಲ.ತಮಗೆ ಬೆದರಿಕೆ ಇದೇ ಎಂದು ಹೇಳುತ್ತಿರುವುದು ತಮ್ಮನ್ನು ತಾವು ಕಾನೂನಿನಿಂದ ರಕ್ಷಣೆ ಮಾಡಿಕೊಳ್ಳಲು. ಅವರಿಗೆ ಯಾವುದೇ ರೀತಿಯ ಬೆದರಿಕೆ ಇಲ್ಲ. ರಾಜೀನಾಮೆಯನ್ನು ಹಿಂಪಡೆಯುವಂತೆ ಒತ್ತಡವನ್ನೂ ಹಾಕಿಲ್ಲ. ಆಮಿಷಕ್ಕೆ ಒಳಗಾಗಿ ಸರ್ಕಾರವನ್ನು ಕೆಡವಲು ಮುಂದಾಗಿದ್ದಾರೆ. ಇದು ಭವಿಷ್ಯದಲ್ಲಿ ನಿಲ್ಲಬೇಕಾದರೆ, ಯಾರು ಇಂತಹ ಚಟುವಟಿಕೆಯಲ್ಲಿ ತೊಡಗುತ್ತಾರೋ ಅಂತಹವರಿಗೆ ಅನರ್ಹತೆ ಮೂಲಕವೇ ಪಾಠ ಕಲಿಸುವಂತೆ ಸ್ಪೀಕರ್ಗೆ ಎರಡೂ ಪಕ್ಷಗಳ ಮುಖಂಡರು ಮನವಿ ಮಾಡಿದ್ದಾರೆ.
ಈಗಾಗಲೇ ರಾಜೀನಾಮೆ ನೀಡಿರುವ ಶಾಸಕರ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ನಾಳೆ ಸರ್ವೋಚ್ಚ ನ್ಯಾಯಾಲಯ ಯಾವ ತೀರ್ಪು ನೀಡುತ್ತದೆ ಎಂಬುದನ್ನು ಕರ್ನಾಟಕ ಮಾತ್ರವಲ್ಲದೆ ಇಡೀ ದೇಶವೇ ಎದುರು ನೋಡುತ್ತಿದೆ. ರಾಜೀನಾಮೆ ನೀಡಿರುವ ಶಾಸಕರ ಪತ್ರವನ್ನು ಅಂಗೀಕರಿಸಲೂ ಬಾರದು, ಅವರನ್ನು ಅನರ್ಹಗೊಳಿಸಲೂ ಬಾರದು ಯಥಾಸ್ಥಿತಿಯನ್ನು ಕಾಪಾಡಿಕೊಳ್ಳುವಂತೆ ಸುಪ್ರೀಂಕೋರ್ಟ್ನ ನ್ಯಾಯಮೂರ್ತಿ ರಂಜನ್ಗೊಗಯ್ ಅವರ ನೇತೃತ್ವದ ತ್ರಿಸದಸ್ಯ ಪೀಠ ವಿಧಾನಸಭೆ ಸ್ಪೀಕರ್ಗೆ ನಿರ್ದೇಶನ ನೀಡಿತ್ತು.
ನಾಳೆ ಸುಪ್ರೀಂಕೋರ್ಟ್ ನೀಡಲಿರುವ ತೀರ್ಪು ದೋಸ್ತಿ ಸರ್ಕಾರದ ಭವಿಷ್ಯವನ್ನು ತೀರ್ಮಾನಿಸುತ್ತದೆ.